Kannada NewsLatest

ಮಕ್ಕಳ ಲಸಿಕಾಕರಣದ ಜವಾಬ್ದಾರಿಯನ್ನು ಆಯಾ ಕ್ಲಾಸ್‌ ಟೀಚರ್ ಗಳಿಗೆ ವಹಿಸಿ:  ಶಶಿಕಲಾ ಜೊಲ್ಲೆ 

ವಿಜಯಪುರದಲ್ಲಿಂದು ಕೋವಿಡ್‌ ಮತ್ತು ಬೆಳೆಹಾನಿ ಕುರಿತ ಪರಿಶೀಲನಾ ಸಭೆ ನಡೆಸಿದ ಸಚಿವೆ ಶಶಿಕಲಾ ಜೊಲ್ಲೆ

ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ಸೌಲಭ್ಯಗಳ ಅಳವಡಿಕೆಯತ್ತ ಹೆಚ್ಚಿನ ಗಮನ ನೀಡಿ.

ಮೂರನೇ ಅಲೆ ಉಲ್ಬಣವಾಗದಂತೆ ತಡೆಗಟ್ಟಲು ಅಧಿಕಾರಿಗಳಿಗೆ ಸೂಚನೆ

ಪ್ರಗತಿವಾಹಿನಿ ಸುದ್ದಿ, ವಿಜಯಪುರ : ಕೋವಿಡ್‌ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚಿನ ಸೋಂಕು ತಗಲುವ ಸಾಧ್ಯತೆಯನ್ನು ತಜ್ಞರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಮೂರನೇ ಅಲೆಯಲ್ಲಿ ಒಟ್ಟಾರೆಯಾಗಿ 50 ಮಕ್ಕಳು ಕೋವಿಡ್‌ ಸೊಂಕಿಗೆ ತುತ್ತಾಗಿದ್ದಾರೆ. ಈ ನಿಟ್ಟಿನಲ್ಲಿ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ಸೌಲಭ್ಯಗಳ ಅಳವಡಿಕೆಯತ್ತ ಹೆಚ್ಚಿನ ಗಮನ ನೀಡುವಂತೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು (ಕೋವಿಡ್‌ ಮತ್ತು ಪ್ರವಾಹ ಪರಿಸ್ಥಿತಿ ನಿರ್ವಹಣೆ) ಹಾಗೂ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರಾದ ಶಶಿಕಲಾ ಜೊಲ್ಲೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೋವಿಡ್‌ ಮತ್ತು ಬೆಳೆಹಾನಿ ಕುರಿತ ಪರಿಶೀಲನಾ ಸಭೆಯ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಕೋವಿಡ್‌ ಸೋಂಕು ನಿರ್ವಹಣೆಯ ಕುರಿತಂತೆ ಜಿಲ್ಲಾಡಳಿತ ಇದುವರೆಗೂ ಕೈಗೊಂಡ ಕ್ರಮಗಳ ಬಗ್ಗೆ ಹಾಗೂ ಗಡಿ ಪ್ರದೇಶದಿಂದ ಬರುವವರ ತಪಾಸಣೆಗೆ ಕೈಗೊಂಡಂತಹ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಸಚಿವರು ಪಡೆದುಕೊಂಡರು. ಅಲ್ಲದೆ, ಮೂರನೇ ಅಲೆ ಪ್ರಬಲವಾದರೆ ಅದರ ಸುಲಲಿತ ನಿರ್ವಹಣೆಗೆ ಮುಂಜಾಗ್ರತವಾಗಿ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ತಿಳಿದುಕೊಂಡರು.
ರಾಜ್ಯದಲ್ಲಿ ದಿನೇ ದಿನೇ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಾರಿಯ ಅಲೆಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಜ್ಜಾಗಬೇಕು. ಅಲ್ಲದೆ, ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಂಭವವಿರುವುದರಿಂದ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಆಸ್ಪತ್ರೆಯಲ್ಲಿರುವ ಹಳೇ ಡಯಾಲಿಸಿಸ್‌ ವಾರ್ಡ್‌ ನ್ನು ಬದಲಾಯಿಸಿ 10 ವೆಂಟಿಲೇಟರ್‌ಗಳುಳ್ಳ ಚಿಕ್ಕಮಕ್ಕಳ ತುರ್ತು ಚಿಕಿತ್ಸಾ ನಿಗಾ ಘಟಕ ನಿರ್ಮಾಣದ ಸಿವಿಲ್‌ ಹಾಗೂ ಎಲೆಕ್ಟ್ರಿಕಲ್‌ ಕಾಮಾಗಾರಿ ಪೂರ್ಣಗೊಳಿಸಲಾಗಿದೆ. ಹಾಗೂ 14 ಹಾಸಿಗೆಯ ಎಚ್‌.ಡಿ.ಯು ಸಾಮಾನ್ಯ ತೀವ್ರ ನಿಗಾ ಘಟಕವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ಮಕ್ಕಳ ಲಸಿಕೆಯಲ್ಲಿ ಶೇಕಡಾ 100 ರಷ್ಟು ಸಾಧನೆಗೆ ಕ್ಲಾಸ್‌ ಟೀಚರ್ಸ್‌ಗಳಿಗೆ ಜವಾಬ್ದಾರಿ:
ವಿಜಯಪುರ ಜಿಲ್ಲೆಯಲ್ಲಿ 15 ರಿಂದ 18 ವಯಸ್ಸಿನ ಮಕ್ಕಳ ಲಸಿಕಾಕರಣದಲ್ಲಿ ಶೇಡಕಾ 50 ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಇದನ್ನು ನೂರರಷ್ಟು ಸಾಧನೆ ಮಾಡುವ ನಿಟ್ಟಿನಲ್ಲಿ ಆಯಾ ಶಾಲಾ ಶಿಕ್ಷಕರುಗಳಿಗೆ ಜವಾಬ್ದಾರಿಯನ್ನು ನೀಡಲು ಸಚಿವರು ಸೂಚನೆ ನೀಡಿದರು.
*ಲಸಿಕಾಕರಣದಲ್ಲಿ ವಿಜಯಪುರ ಜಿಲ್ಲೆ ಉತ್ತಮ ಸಾಧನೆ*:
ಎರಡು ತಿಂಗಳ ಹಿಂದೆಯೇ ಮೊದಲ ಡೋಸ್‌ ಲಸಿಕಾಕರಣ ಕಾರ್ಯಕ್ರದಲ್ಲಿ ಶೇಡಕಾ 100 ರಷ್ಟು ಪ್ರಗತಿ ಸಾಧಿಸಿದ ಮೂರನೇ ಜಿಲ್ಲೆಯಾಗಿರುತ್ತದೆ. ಅಲ್ಲದೆ, ಎರಡನೇ ಡೋಸ್‌ ನೀಡುವಲ್ಲಿ ಶೇಕಡಾ 80 ರಷ್ಟು ಪ್ರಗತಿ ಸಾಧಿಸಲಾಗಿದೆ. ಈ ರೀತಿ ಲಸಿಕಾಕರಣದಲ್ಲಿ ರಾಜ್ಯದಲ್ಲಿ ಉತ್ತಮ ಸ್ಥಾನ ಹೊಂದಿದೆ.  ಉತ್ತಮ ಪ್ರಗತಿ ಸಾಧಿಸುವಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
*ಕೋವಿಡ್‌ ಪ್ರಕರಣಗಳು*:
ಜನವರಿ 1 ರಿಂದ ಇದುವರೆಗೂ 15,842 ಸ್ಯಾಂಪಲ್ ಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ 180 ಪ್ರಕರಣಗಳು ಮಾತ್ರಾ ಕರೋನಾ ಪಾಸಿಟಿವ್‌ ಬಂದಿದ್ದು, ಜಿಲ್ಲೆಯ ಪಾಸಿಟಿವಿಟಿ ರೇಟ್‌ ಶೇ1.14 ರಷ್ಟು ಇದೆ. ಜಿಲ್ಲೆಯಲ್ಲಿ 160 ಸಕ್ರೀಯ ಕೇಸ್‌ಗಳಿದ್ದು 12 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದವರನ್ನು ಹೋಂ ಐಸೋಲೇಷನ್‌ ನಲ್ಲಿ ಇಡಲಾಗಿದೆ.
*ಆಮ್ಲಜನಕ ಸರಬರಾಜು:*
ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕ ಮ್ಯಾನಿಫೋಲ್ಡ್‌ನಿಂದ ತುರ್ತು ನಿಗಾ ಘಟಕ 1,2 ಮತ್ತು 3 ಘಟಕಗಳಿಗೆ ಆಮ್ಲಜನಕ ಸರಾಗವಾಗಿ ಪೂರೈಕೆ ಕುರಿತು ಪ್ರತ್ಯೇಕ ಪೈಪ್‌ಲೈನ್‌ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಜಿಲ್ಲಾಡಳಿತದ ಬಳಿ 642 ಆಕ್ಸಿಜನ್‌ ಕಾನ್ಸೆಂಟ್ರೇಟರ್‌ಗಳಿವೆ. ಇವುಗಳನ್ನು ಅಗತ್ಯಕ್ಕೆ ಅನುಗುಣವಾಗಿ ಆರೋಗ್ಯ ಕೇಂದ್ರಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.
*ಜಿಲ್ಲಾ ತಜ್ಞರ ಸಮಿತಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರ ಸಭೆ*:
ಜಿಲ್ಲಾಡಳಿತದ ವತಿಯಿಂದ ಈಗಾಗಲೇ ಜಿಲ್ಲಾ ತಜ್ಞರ ಸಮಿತಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಗೂ ಮುಖ್ಯಸ್ಥರುಗಳ ಸಭೆಯನ್ನು ನಡೆಸಲಾಗಿದೆ. ಜನವರಿ 10, 2022 ರಿಂದ ಶೇಕಡಾ 75 ರಷ್ಟು ಹಾಸಿಗೆಗಳನ್ನು ಕೋವಿಡ್‌ ಸೊಂಕಿತರ ಚಿಕಿತ್ಸೆಗೆ ಕಾಯ್ದಿರಿಸಲು ಆದೇಶಿಸಲಾಗಿದೆ ಎಂದರು.
*ಆಮ್ಲಜನಕ ಘಟಕಗಳ ನಿರ್ಮಾಣ:*
ಜಿಲ್ಲೆಯಲ್ಲಿ ಒಟ್ಟಾರೆಯಾಗಿ 5 ಆಮ್ಲಜನಕ ಉತ್ಪಾದನಾ ಘಟಕಗಳು ಮಂಜೂರಾಗಿದ್ದು ಕಾಮಗಾರಿ ಪೂರ್ಣಗೊಂಡಿವೆ. ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಅಳವಡಿಸಲಾಗಿರುವ 1000 ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ಘಟಕದ ನಿರ್ವಹಣೆಯಲ್ಲಿ ತಾಂತ್ರಿಕ ತೊಂದರೆಗಳು ಕಂಡುಬಂದಿವೆ. ಇದನ್ನು ಶೀಘ್ರವಾಗಿ ಸರಿಪಡಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
*ಲಸಿಕೆ ನೀಡಿಕೆ ಕಾರ್ಯವನ್ನು ಚುರುಕುಗೊಳಿಸಲು ಸೂಚನೆ:*
ಕರೋನಾ ಮಹಾಮಾರಿಯನ್ನು ನಿಯಂತ್ರಿಸಲು ಲಸಿಕೆ ಪ್ರಮುಖ ಅಸ್ತ್ರವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಲಸಿಕೆ ನೀಡುವ ಕಾರ್ಯಕ್ಕೆ ಅದ್ಯತೆ ನೀಡಬೇಕು. ಅದರಲ್ಲೂ ಮಕ್ಕಳಿಗೆ ಹಾಗೂ ಪ್ರಿಕಾಷನರಿ ಡೋಸ್‌ ನೀಡುವ ಕಾರ್ಯವನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದರು.
*ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಗೆ ಸೂಚನೆ*:
ಈಗಾಗಲೇ ಚೆಕ್‌ ಪೋಸ್ಟ್‌ಗಳಲ್ಲಿ ಸ್ವಾಬ್‌ ಕಲೆಕ್ಷನ್‌ ಸೆಂಟರ್‌ಗಳನ್ನು ತೆರೆಯಲಾಗಿದೆ. ಚೆಕ್‌ ಪೋಸ್ಟ್‌ಗಳಲ್ಲಿ 24*7 ಗಂಟೆಯೂ ತಪಾಸಣೆ ನಡೆಸಲಾಗುತ್ತಿದ್ದು, ಸಿಬ್ಬಂದಿಗಳ ಕೊರತೆ ಸವಿವರವಾಗಿ ಚರ್ಚಿಸಲಾಯಿತು. ಎನ್‌ ಜಿ ಓ ಗಳ ಮೂಲಕ ಸೇವೆಯನ್ನು ಪಡೆಯಲು ಪ್ರಯತ್ನಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಹೇಳಿದರು. ಅಕ್ಕಪಕ್ಕದ ರಾಜ್ಯಗಳಿಂದ ಆಗಮಿಸುವವರನ್ನು ತೀವ್ರ ತಪಾಸಣೆಗೆ ಒಳಪಡಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
*ಸಿದ್ದಾಪುರ ಚೆಕ್‌ಪೋಸ್ಟ್‌ ಗೆ ಭೇಟಿ ನೀಡಿ ಪರಿಶೀಲನೆ*:
ಮಹಾರಾಷ್ಟ್ರ ಸಾಂಗ್ಲಿ ಜಿಲ್ಲೆಯ ಗಡಿ ಭಾಗದವಾಗಿರುವ ಸಿದ್ದಾಪುರ ಚೆಕ್‌ಪೋಸ್ಟ್‌ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಕ್ಕ ಪಕ್ಕದ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವ ತಪಾಸಣೆ ನಡೆಸುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
*ಬೆಳೆಹಾನಿ ಕುರಿತು*:
ಇನ್ನೂ ಬೆಳೆಹಾನಿ ಪರಿಹಾರ ಲಭ್ಯವಾಗಿಲ್ಲ ಎಂಬ ಹಲವಾರು ದೂರುಗಳು ಬಂದಿವೆ. ಅರ್ಧಕ್ಕಿಂತ ಹೆಚ್ಚಿನ ಸಂಖ್ಯೆಯ ರೈತರಿಗೆ ಇದುವರೆಗೂ ಪರಿಹಾರ ದೊರೆತಿಲ್ಲ. ಇದರ ಬಗ್ಗೆ ವಿಶೇಷ ಗಮನ ಹರಿಸಿ ಶೀಘ್ರ ಬೆಳೆಹಾನಿ ಪರಿಹಾರ ರೈತರಿಗೆ ತಲುಪಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಜಿಲ್ಲೆಯ ಪ್ರಧಾನ ಬೆಳೆಗಳಾದ ದ್ರಾಕ್ಷಿ ಮತ್ತು ತೊಗರಿ ಬೆಳೆಗೆ ವಿಶೇಷ ಪ್ಯಾಕೇಜ್‌ ಘೋಷಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಪಿ ಸುನೀಲ್‌ ಕುಮಾರ್‌, ವಿಜಯಪುರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಹರಿ ಗೊಳಸಂಗಿ, ಸಿಂಧಿಗಿ ಶಾಸಕರ ರಮೇಶ್‌ ಬೂಸನೂರು, ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಅಶೋಕ್‌ ಅಲ್ಲಾಪುರ್‌, ಜಿಲ್ಲಾಪಂಚಾಯತ್‌ ಸಿಇಓ ಗೋವಿಂದ ರೆಡ್ಡಿ ಸೇರಿದಂತೆ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button