ಸರ್ವಗುಣಸಂಪನ್ನ ಸಾಮ್ರಾಟ ಕೃಷ್ಣದೇವರಾಯರು

ಇದೇ ೧೭ ಜನವರಿಯಂದು ಶ್ರೀಕೃಷ್ಣದೇವರಾಯರ ಜಯಂತಿ ಇದೆ, ಈ ನಿಮಿತ್ತ ಲೇಖನ !
 ವಿಜಯನಗರ ಸಾಮ್ರಾಜ್ಯದ ಸಿಂಹಾಸನಾರೂಢ ಸಾಮ್ರಾಟನಾದ ಕೃಷ್ಣದೇವರಾಯ ನರಸನಾಯಕನು ೧೫೦೯ ರಿಂದ ೧೫೨೯ರ ವರೆಗೆ ಸರ್ವೋತ್ಕೃಷ್ಟ ರಾಜ್ಯಾಡಳಿತವನ್ನು ನಡೆಸಿದನು.
ಎಲ್ಲ ಇತಿಹಾಸಕಾರರು ಅವನನ್ನು ‘ಓರ್ವ ಮಹಾನ್ ರಾಜ’ ಎಂದು ಸಂಬೋಧಿಸಿ ಪ್ರಶಂಸಿಸಿದ್ದಾರೆ. ಪ್ರತಿಯೊಂದು ವಿಭಾಗದ ಮೇಲೆ ಅವನ ಗಮನವಿತ್ತು. ಅವನ ರಾಜ್ಯದಲ್ಲಿ ಪ್ರಜೆಗಳಿಗೆ ನ್ಯಾಯ ದೊರೆಯುತ್ತಿತ್ತು. ರಾಜ್ಯವು ಸಮೃದ್ಧವಾಗಿತ್ತು. ಮಧ್ಯಯುಗದಲ್ಲಿ ಅವನು ದಕ್ಷಿಣ ಭಾರತವನ್ನು ಐಶ್ವರ್ಯವಂತಗೊಳಿಸಿದನು.
ಆಗ ದಕ್ಷಿಣ ಭಾರತವು ಭೌತಿಕ ದೃಷ್ಟಿಯಿಂದ ಮಾತ್ರವಲ್ಲ, ಸಾಂಸ್ಕೃತಿಕ ದೃಷ್ಟಿಯಿಂದಲೂ ಕಲಶದಂತಿತ್ತು. ಅವನು ಸ್ವತಃ ಮಹಾಪರಾಕ್ರಮಿ, ಕುಶಾಗ್ರ ಸೇನಾಪತಿ ಹಾಗೂ ಮಹಾನ ಯೋಧನಾಗಿದ್ದನು. ಅವನು ಎಲ್ಲೆಡೆ ವಿಜಯಗಳಿಸಿದನು. ಅವನಿಗೆ ಸೋಲೆಂಬುದೇ ತಿಳಿದಿರಲಿಲ್ಲ.

ವಾಙ್ಮಯದಲ್ಲಿ ಅವನ ಅಭಿರುಚಿಯು ಎಷ್ಟು ಅಪೂರ್ವವಾಗಿತ್ತೆಂದರೆ ಪ್ರಜೆಯು ಅವನನ್ನು ‘ಅಭಿನವ ಭೋಜ’ ಎಂದು ಕರೆಯುತ್ತಿದ್ದರು. ಅವನ ‘ಅಮುಕ್ತಮಲ್ಯದಾ’ ಈ ತೆಲುಗು ಗ್ರಂಥ ಹಾಗೂ ಸಂಸ್ಕೃತ ನಾಟಕವು ಇಂದಿಗೂ ಪ್ರಖ್ಯಾತವಾಗಿದೆ. ಅವನು ತೆಲುಗು, ಕನ್ನಡ ಹಾಗೂ ತಮಿಳು ಭಾಷೆಗಳ ಕವಿ ಹಾಗೂ ವಿದ್ವಾಂಸರಿಗೆ ಆಶ್ರಯದಾತನಾಗಿದ್ದನು. ಅವನು ಕೊಡುಗೈ ದಾನಿಯಾಗಿದ್ದನು. ಅವನು ತಿರುಪತಿ ವೆಂಕಟರಮಣನ ಅನನ್ಯ ಭಕ್ತನಾಗಿದ್ದನು. ಇಂದಿಗೂ ತಿರುಪತಿ ಮಂದಿರದಲ್ಲಿ ‘ಕೃಷ್ಣದೇವರಾಯನು ತನ್ನ ಇಬ್ಬರು ರಾಣಿಯರೊಂದಿಗೆ ಕೈಮುಗಿದು ನಿಂತಿರುವ’ ಶಿಲ್ಪವು ಕಂಡುಬರುತ್ತದೆ.

ವಿದ್ಯಾಸಂಪನ್ನ, ಕವಿ ಹಾಗೂ ಸಾವಿರಾರು ಪಂಡಿತರ ಆಶ್ರಯದಾತನಾದ ಹಿಂದೂ ರಾಜ ! : ನಮ್ಮ ಹಿರಿಯ ಪರಂಪರೆಯ ಹಾಗೂ ಕವಿಸಾಮ್ರಾಟನಾದ ಕೃಷ್ಣದೇವರಾಯನು ವಿದ್ಯಾಸಂಪನ್ನ ಹಾಗೂ ಸಾವಿರಾರು ಪಂಡಿತರಿಗೆ ಆಶ್ರಯದಾತನಾಗಿದ್ದನು. ಪಾಶ್ಚಾತ್ಯ ಇತಿಹಾಸಕಾರನಾದ ದೊಮಿಂಗೋ ಪೇಸನು ‘ಕೃಷ್ಣದೇವರಾಯನು ಓರ್ವ ಕ್ಷಮಾಶೀಲ, ಪರೋಪಕಾರಿ, ಕೃಪಾಳು ರಾಜನಾಗಿದ್ದನು. ಅವನು ಮಹಾಪರಾಕೃಮಿ ಯೋಧ, ಓರ್ವ ಕಾರ್ಯಕ್ಷಮ ರಾಜಕಾರಣಿ, ಅಂತೆಯೇ ಕಲೆ ಹಾಗೂ ಸಾಹಿತ್ಯದ ಆಶ್ರಯದಾತನಾಗಿದ್ದನು. ಈ ಎಲ್ಲವುಗಳ ಮೇಲೆ ಮೇರುಮಣಿ ಎಂಬಂತೆ ಭಾರತವು ಆಧ್ಯಾತ್ಮಿಕ ಮೌಲ್ಯಗಳ ಆಕರವಾಗಿದೆ, ರಾಜನು ಈ ಮೌಲ್ಯಗಳ ಸಂವರ್ಧನೆ ಹಾಗೂ ವೃದ್ಧಿಗಾಗಿ ಅವಿರತವಾಗಿ ಪ್ರಯತ್ನಶೀಲನಾಗಿದ್ದನು. ಸಂಪೂರ್ಣ ಜಗತ್ತಿನ ಎದುರು ಭಾರತದ ಪ್ರತಿಮೆಯನ್ನು ಎತ್ತಿ ನಿಲ್ಲಿಸುವಲ್ಲಿ ಈ ರಾಜನ ಯೋಗದಾನವು ಅತ್ಯಂತ ಹಿರಿದಾಗಿದೆ.’ ಎಂದು ಹೇಳಿದ್ದಾನೆ.

ಭೂತಕಾಲದಲ್ಲಿನ ದಿವ್ಯಪರಂಪರೆಯನ್ನುಬಹಿಷ್ಕರಿಸುವವರು ದೇಶದ ಭವಿಷ್ಯವನ್ನು ನಿರ್ಮಿಸಲಾರರು : ಚಂದ್ರಗುಪ್ತ, ಅಶೋಕ, ಶಾಲಿವಾಹನ, ವಿಕ್ರಮಾದಿತ್ಯ, ಸಮುದ್ರಗುಪ್ತ, ಯಶೋಧರ್ಮ, ಹರ್ಷವರ್ಧನ, ಸತ್ಯಾಶ್ರಯ, ಪುಲಿಕೇಶಿ, ರಾಷ್ಟ್ರಕೂಟ ಗೋವಿಂದ ಮಹಾದೇವರಾಯ ಯಾದವ, ಅಸಂಖ್ಯ ವೀರ ಚೂಡಾಮಣಿಗಳು ಭರತಖಂಡವನ್ನು ಸೂರ್ಯನಂತೆ ಪ್ರಕಾಶಮಾನಗೊಳಿಸಿದ ಇತಿಹಾಸವನ್ನು ಇಂದು ನಾವು ಮರೆಯುವುದಾದರೂ ಹೇಗೆ ? ‘ಯಾವ ರಾಷ್ಟ್ರವು ತನ್ನ ಭೂತಕಾಲದ ಭವ್ಯ ಇತಿಹಾಸವನ್ನು ಮರೆಯುತ್ತದೆಯೋ, ಆ ಭೂತಕಾಲದ ಭವ್ಯ ಪರಂಪರೆಯನ್ನು ಬಹಿಷ್ಕರಿಸುತ್ತದೆಯೋ, ದುರ್ಲಕ್ಷಿಸುತ್ತದೆಯೋ, ಅದನ್ನು ಉಪೇಕ್ಷಿಸುತ್ತದೆಯೋ ಆ ರಾಷ್ಟ್ರದ ಭವಿಷ್ಯವು ಎಂದಿಗೂ ಸಾಕಾರವಾಗುವುದಿಲ್ಲ’ ಇದು ತ್ರಿಕಾಲಾಬಾಧಿತ ಸತ್ಯವಾಗಿದೆ. ಇಂತಹ ದುರ್ದೈವಿ ರಾಷ್ಟ್ರವು ನಿಶ್ಚಿತವಾಗಿಯೂ ಅತ್ಯಂತ ಉಗ್ರವಾಗಿ ಅಂತ್ಯಗೊಳ್ಳುತ್ತದೆ !

ಆಧಾರ : ಸಾಪ್ತಾಹಿಕ ಸನಾತನ ಚಿಂತನ

ಸಂಗ್ರಹ –
 ಮೋಹನ ಗೌಡ,
ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button