Latest

ದೂರು ನೀಡಲು ಹೋದ ಮಹಿಳೆಗೆ ಲೈಂಗಿಕ ಕಿರುಕುಳ; ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ಆಯುಕ್ತರಿಗೆ ದೂರು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೂರು ನೀಡಲು ಹೋದ ತಮ್ಮ ಮೇಲೆ ಹಲ್ಲೆ ನಡೆಸಿ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಹೆಣ್ಣೂರು ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ವಸಂತ್ ಕುಮಾರ್ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಆದರೆ ತನ್ನ ಮೇಲಿನ ಆರೋಪ ನಿರಾಕರಿಸಿರುವ ಇನ್ಸ್ ಪೆಕ್ಟರ್, ಮಹಿಳೆ ತನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದಿದ್ದಾರೆ.

ಬೆಂಗಳೂರಿನ ಬಾಣಸವಾಡಿಯ ಶಕ್ತಿನಗರದಲ್ಲಿ ಪತಿ ಹಾಗೂ ನಾಲ್ವರು ಮಕ್ಕಳೊಂದಿಗೆ ವಾಸವಾಗಿದ್ದ ಮಹಿಳೆ ಪೊಲೀಸ್ ಅಧಿಕಾರಿಯಿಂದಲೆ ತನಗೆ ಕಿರುಕುಳ ವಾಗುತ್ತಿದೆ ಎಂದು ದೂರಿದ್ದಾರೆ. ತನ್ನ ಪತಿ ಅನಾರೋಗ್ಯಕ್ಕೀಡಾಗಿದ್ದು, ತಾನೇ ಕುಟುಂಬ ನಿರ್ವಹಣೆ ಮಾಡಬೇಕಿದೆ. ಶಕ್ತಿನಗರದಲ್ಲಿ ತನಗೆ ಸೇರಿದ ಮನೆಯನ್ನು ಸುಮತಿ ಎಂಬುವವರು 7 ಲಕ್ಷಕ್ಕೆ ಭೋಗ್ಯಕ್ಕೆ ಪಡೆದು ವಾಸಿಸುತ್ತಿದ್ದರು. ಆ ಮನೆ ವಾಟರ್ ಬಿಲ್ ಕೇಳಲು ಹೋದಾಗ ಸುಮತಿ, ಆಕೆಯ ಪತಿ , ಮಕ್ಕಳು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ದೂರು ನೀಡಲು ಹೆಣ್ಣೂರು ಠಾಣೆಗೆ ಹೋದರೆ ಇನ್ಸ್ ಪೆಕ್ಟರ್ ವಸಂತ್ ಕುಮಾರ್ ದೂರು ಸ್ವೀಕರಿಸದೇ ಕಳುಹಿಸಿದ್ದಾರೆ.

ಬಳಿಕ ನನ್ನ ವಿರುದ್ಧ ಸುಳ್ಳು ದೌರ್ಜನ್ಯ ಕೇಸ್ ದಾಖಲಿಸಿದ್ದಾರೆ. ಠಾಣೆಗೆ ಕರೆಸಿ ಎರಡು ಆಯ್ಕೆ ಕೊಡುತ್ತೇನೆ. ಒಂದು ನೀನು ನನಗೆ 5 ಲಕ್ಷ ರೂ ಹಣ ಕೊಡಬೇಕು ಇಲ್ಲವಾದರೆ ಕರೆದಾಗಲೆಲ್ಲ ಬಂದು ನನ್ನ ಜತೆಗೆ ಮಲಗು ಎಂದು ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹೇಳಿದಂತೆ ಮಾಡಿದರೆ ಅವರ ವಿರುದ್ಧ 10 ಕೇಸ್ ಹಾಕುತ್ತೇನೆ ಎಂದು ಮೈ ಕೈ ಮುಟ್ಟಿ ಎಳೆದಾಡಿದ್ದಾರೆ. ನನ್ನ ವಿರುದ್ಧವೇ ಎಫ್ ಐ ಆರ್ ದಾಖಲಿಸಿದ್ದಾರೆ. ಒಂದು ತಿಂಗಳ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದೇನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಡಿಸಿಪಿ, ಎಸಿಪಿಯನ್ನು ಭೇಟಿಯಾಗಿ ದೂರು ಹೇಳಿದರೂ ಅವರು ಮತ್ತೆ ಇನ್ಸ್ ಪೆಕ್ಟರ್ ಅವರನ್ನು ಭೇಟಿಯಾಗುವಂತೆ ಹೇಳಿದ್ದಾರೆ. ನಾನು ಮತ್ತೆ ವಸಂತ್ ಕುಮಾರ್ ಅವರನ್ನು ಭೇಟಿಯಾಗಿ ಎಸಿಪಿ ನನ್ನ ದೂರಿನ ಮೇಲೆ ಬರೆದಿರುವ ಸೂಚನೆ ತೋರಿಸಿ ಎಫ್ ಐ ಆರ್ ದಾಖಲಿಸಲು ಹೇಳಿದರೂ ಮತ್ತೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದಾರೆ. ನಾನು ಒಪ್ಪದಿದ್ದಾಗ ನನ್ನ ಬಳಿ ಇದ್ದ ಮೊಬೈಲ್ ಒಡೆದು ಹಾಕಿ ದೌರ್ಜನ್ಯವೆಸಗಿದ್ದಾರೆ ಎಂದು ದೂರಿದ್ದಾರೆ.
ಕನ್ನಡ ಚಿತ್ರ ನಿರ್ದೇಶಕ ಪ್ರದೀಪ್ ರಾಜ್ ಕೊರೊನಾಗೆ ಬಲಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button