ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಕೋವಿಡ್ 3ನೇ ಅಲೆ ಹಾಗೂ ಓಮಿಕ್ರಾನ್ ಹರಡುವ ಭೀತಿ ಹಿನ್ನೆಲೆಯಲ್ಲಿ ಜ.26ರಂದು ತಾಲ್ಲೂಕಿನ ನಂದಗಡ ಗ್ರಾಮದ ಸಂಗೊಳ್ಳಿ ರಾಯಣ್ಣನ ಸಮಾಧಿಗೆ ಸಾರ್ವಜನಿಕರನ್ನು ನಿರ್ಬಂಧಿಸಲಾಗಿದೆ ಎಂದು ನಂದಗಡ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿದ್ಯಾ ಮಾದಾರ ಹೇಳಿದರು.
ಶುಕ್ರವಾರ ನಂದಗಡ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಪೊಲೀಸ್ ಇಲಾಖೆ ಮತ್ತು ನಂದಗಡ ಗ್ರಾಮ ಪಂಚಾಯ್ತಿ ಜಂಟಿಯಾಗಿ ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದು. ರಾಯಣ್ಣನ ಭಕ್ತರು ಸಧ್ಯದ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತು ಜ.26ರಂದು ನಂದಗಡ ಭೇಟಿಯನ್ನು ರದ್ದುಗೊಳಿಸಬೇಕು. ಅಂದು ತಾವಿದ್ದ ಸ್ಥಳಗಳಿಂದಲೇ ರಾಯಣ್ಣನನ್ನು ಸ್ಮರಿಸಬೇಕು ಎಂದು ಮನವಿ ಮಾಡಿದರು.
ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಮಾತನಾಡಿ, ಪ್ರತಿ ವರ್ಷದ ವಾಡಿಕೆಯಂತೆ ಜ.26ರಂದು ಜರುಗುವ ರಾಯಣ್ಣನ ಹುತಾತ್ಮ ದಿನಾಚರಣೆಯಂದು ಆತನ ಸಮಾಧಿ ದರ್ಶನಕ್ಕೆ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಅಸಂಖ್ಯಾತ ಭಕ್ತರು ಆಗಮಿಸುತ್ತಾರೆ. ಆದರೆ ಈ ವರ್ಷ ಕೋವಿಡ್ ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿ ರಾಯಣ್ಣನ ಸಮಾಧಿ ಬಳಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದನ್ನು ನಿರ್ಬಂಧಿಸಲಾಗಿದೆ. ಕೋವಿಡ್ ಎರಡು ಡೋಸ್ ಪಡೆದ ಮತ್ತು ಕೋವಿಡ್ ನೆಗಟಿವ್ ವರದಿ ಹೊಂದಿದವರು ಮಾತ್ರ ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ಅಂತರ ಪಾಲಿಸಿ ರಾಯಣ್ಣನ ಸಮಾಧಿಯ ಬಳಿ ತೆರಳಬಹುದಾಗಿದೆ. ಹಿರಿಯ ನಾಗರಿಕರು ಮತ್ತು ಮಕ್ಕಳು ಸಮಾಧಿ ಬಳಿ ತೆರಳದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ನಂದಗಡದಲ್ಲಿ ಜ.26ರಂದು ಹೆಚ್ಚಿನ ಪ್ರಮಾಣದ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುತ್ತದೆ. ಸಾರ್ವಜನಿಕ ಹಿತಾಸಕ್ತಿಯಿಂದ ಈ ನಿರ್ಣಯ ಕೈಗೊಂಡಿದ್ದು, ಇದಕ್ಕೆ ರಾಯಣ್ಣನ ಭಕ್ತರು ಸಹಕರಿಸಬೇಕು ಎಂದು ಕರೆ ನೀಡಿದರು.
ಸುದ್ದಿಗೋಷ್ಠಿ ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಪಿಡಿಒ ಆನಂದ ಭಿಂಗೆ, ಇತ್ತೀಚಿನ ದಿನಗಳಲ್ಲಿ ನಂದಗಡದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದು, ಸಧ್ಯ ಗ್ರಾಮದ 13 ಜನರು ಕೋವಿಡ್ ಪಾಸಿಟಿವ್ ಸೊಂಕಿಗೆ ಒಳಗಾಗಿದ್ದಾರೆ. ಹೀಗಾಗಿ ಗ್ರಾಮ ಪಂಚಾಯ್ತಿ ವತಿಯಿಂದ ವಿವಿಧ ಇಲಾಖೆಗಳೊಟ್ಟಿಗೆ ಚರ್ಚಿಸಿ ಗ್ರಾಮದ ರಾಯಣ್ಣ ಸಮಾಧಿ ಬಳಿ ಜ.26ರಂದು ಜರುಗಲಿರುವ ರಾಯಣ್ಣನ ಹುತಾತ್ಮ ದಿನವನ್ನು ಈ ವರ್ಷ ಸರಳವಾಗಿ ಆಚರಿಸುವ ತೀರ್ಮಾನಕ್ಕೆ ಬರಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ನಂದಗಡ ಗ್ರಾಪಂ ಉಪಾಧ್ಯಕ್ಷ ಮನ್ಸೂರ್ ತಹಸೀಲ್ದಾರ್ ಸೇರಿದಂತೆ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮತ್ತು ನಂದಗಡ ಗ್ರಾಪಂ ಸಿಬ್ಬಂದಿ ಇದ್ದರು.
ಹೊಸ ವಂಟಮುರಿ ಗ್ರಾಮದಲ್ಲಿ ಶಾಲಾ ಕೋಣೆಗಳ ಉದ್ಘಾಟನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ