2 ಸ್ವಯಂಕೃತ ಅಪರಾಧಗಳಿಂದಾಗಿ ಪ್ರಕಾಶ ಹುಕ್ಕೇರಿಗೆ ಈ ಬಾರಿ
ಚಿಕ್ಕೋಡಿ ಕ್ಷೇತ್ರ ಕಬ್ಬಿಣದ ಕಡಲೆಯಾಗಿದೆ
ಎಂ.ಕೆ.ಹೆಗಡೆ, ಪ್ರಗತಿವಾಹಿನಿ, ಬೆಳಗಾವಿ
ಚಿಕ್ಕೋಡಿ ಲೋಕಸಭಾ ಕ್ಷೇತ್ರ ಈ ಬಾರಿ 2 ಕಾರಣಗಳಿಗಾಗಿ ಸುದ್ದಿಯಾಯಿತು. ಒಂದು ಬಿಜೆಪಿ ಅಭ್ಯರ್ಥಿಯ ಆಯ್ಕೆ, ಇನ್ನೊಂದು ಕಾಂಗ್ರೆಸ್ ಅಭ್ಯರ್ಥಿಯ ಹಿಂಜರಿಕೆ.
ಬಿಜೆಪಿ ಟಿಕೆಟ್ ಗಾಗಿ ಹಲವರು ಬೇಡಿಕೆ ಸಲ್ಲಿಸಿದರೂ ಒಂದು ಬಾರಿ ಆಯ್ಕೆಯಾಗಿ, ಕಳೆದ ಚುನಾವಣೆಯಲ್ಲಿ ಕೇವಲ 3003 ಮತಗಳಿಂದ ಪರಾಭವ ಹೊಂದಿರುವ ರಮೇಶ ಕತ್ತಿಗೆ ಟಿಕೆಟ್ ಸಿಗಬಹುದೆನ್ನುವ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ಸಂಘಪರಿವಾರದ ಕೈ ಮೇಲಾಗಿದ್ದರಿಂದ ಅಣ್ಣಾ ಸಾಹೇಬ ಜೊಲ್ಲೆ ಅಭ್ಯರ್ಥಿ ಇದರಿಂದ ಕತ್ತಿ ಸಹೋದರರು ಬಂಡಾಯವೇಳುತ್ತಾರೆನ್ನುವ ನಿರೀಕ್ಷೆ ಇತ್ತಾದರೂ ಅದು ಪ್ಯಾಚಪ್ ಆಗಿದೆ.
ಇನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಕಾಶ ಹುಕ್ಕೇರಿ ಕಣಕ್ಕಿಳಿದಿದ್ದಾರೆ. ಇಳಿದಿದ್ದಾರೆ ಎನ್ನುವುದಕ್ಕಿಂತ ಇಳಿಸಲ್ಪಟ್ಟಿದ್ದಾರೆ ಎನ್ನುವುದು ಹೆಚ್ಚು ಸೂಕ್ತ. 2014ರ ಚುನಾವಣೆಯಲ್ಲಿ ಹೈಕಮಾಂಡ್ ಆದೇಶದಂತೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಸ್ಪರ್ಧಿಸಿ ಗೆದ್ದಿದ್ದ ಪ್ರಕಾಶ ಹುಕ್ಕೇರಿ ಈ ಬಾರಿಯೂ ಮನಸ್ಸಿಲ್ಲದ ಮನಸ್ಸಿನಿಂದಲೇ ಸ್ಪರ್ಧಿಸುತ್ತಿದ್ದಾರೆ.
ಈಗ ಚಿಕ್ಕೋಡಿ ಕಣ ಅಬ್ಬರದ ಪ್ರಚಾರಕ್ಕೆ ಸಾಕ್ಷಿಯಾಗಿದೆ. ಪ್ರಕಾಶ ಹುಕ್ಕೇರಿ ಶಾಸಕರಾಗಿ ಒಬ್ಬ ಉತ್ತಮ ಕೆಲಸಗಾರ, ಮಾದರಿ ಜನಪ್ರತಿನಿಧಿ ಎನಿಸಿಕೊಂಡಿದ್ದರು. ಇದೇ ಕಾರಣಕ್ಕೆ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಬಲ ರಮೇಶ ಕತ್ತಿ ಎದುರು ಗೆಲುವು ಸಾಧಿಸಿದರು.
ಸ್ವಯಂಕೃತ ಅಪರಾಧ
ಆದರೆ ಈ ಬಾರಿ 2 ಸ್ವಯಂಕೃತ ಅಪರಾಧಗಳಿಂದಾಗಿ ಅವರಿಗೆ ಚಿಕ್ಕೋಡಿ ಕ್ಷೇತ್ರ ಕಬ್ಬಿಣದ ಕಡಲೆಯಾಗಿದೆ. ಒಂದು 2014ರಲ್ಲಿ ಆಯ್ಕೆಯಾದವರು ಕ್ಷೇತ್ರವನ್ನೇ ಸುತ್ತದಿರುವುದು, ಇನ್ನೊಂದು ಈ ಬಾರಿ ಚಿಕ್ಕೋಡಿ ಬಿಟ್ಟು ಬೆಳಗಾವಿಗೆ ಬರಲು ಪ್ರಯತ್ನಿಸಿರುವುದು.
ಪ್ರಕಾಶ ಹುಕ್ಕೇರಿ ಚಿಕ್ಕೋಡಿ ಕ್ಷೇತ್ರದ ಶಾಸಕರಾಗಿ ಅದ್ಭುತವಾದ ಕೆಲಸ ಮಾಡಿದ್ದಾರೆ. ಸರಕಾರ ಯಾವುದೇ ಇರಲಿ ಕ್ಷೇತ್ರಕ್ಕೆ ಕೆಲಸ ತಂದಿದ್ದಾರೆ. ಕ್ಷೇತ್ರದ ಜನರೊಂದಿಗೆ ಸತತ ಸಂಪರ್ಕ ಹೊಂದಿದ್ದರು. ಹಾಗಾಗಿ ಚಿಕಕೋಡಿ-ಸದಲಗಾ ಕ್ಷೇತ್ರ ಅವರಿಗೆ ಅತ್ಯಂತ ಸುರಕ್ಷಿತ ಎನ್ನುವ ಮಟ್ಟಿಗೆ ಬೆಳೆಸಿಕೊಂಡಿದ್ದರು. ಸಂಸದರಾದ ಮೇಲೆಯೂ ಚಿಕ್ಕೋಡಿ -ಸದಲಗಾ ವಿಧಾನಸಭಾ ಕ್ಷೇತ್ರಕ್ಕೆ ಸಾಕಷ್ಟು ಕೆಲಸ ತಂದಿದ್ದಾರೆ.
ಆದರೆ ಸಚಿವರಾಗಿ, ನಂತರ ಸಂಸದರಾಗಿ ಅವರು ಆಯಾ ಸ್ಥಾನಗಳಿಗೆ ನ್ಯಾಯ ಒದಗಿಸಲು ವಿಫಲರಾದರು. ಸಚಿವರಾದಾಗಲೂ, ಸಂಸದರಾದಾಗಲೂ ಅವರು ತಮ್ಮನ್ನು ಚಿಕ್ಕೋಡಿ-ಸದಲಗಾ ವಿಧಾನ ಸಭಾ ಕ್ಷೇತ್ರಕ್ಕಷ್ಟೆ ತಮ್ಮನ್ನು ಸೀಮಿತಗೊಳಿಸಿಕೊಂಡರು. ಸಚಿವರಾಗಿ ರಾಜ್ಯ ಸುತ್ತಲಿಲ್ಲ, ಸಂಸದರಾಗಿ ಲೋಕಸಭಾ ಕ್ಷೇತ್ರ ಸುತ್ತಲಿಲ್ಲ.
ಕಳೆದ 5 ವರ್ಷದ ಅವಧಿಯಲ್ಲಿ ಅವರು ಕ್ಷೇತ್ರದ ತಾಲೂಕುಗಳಾದ ಅಥಣಿ, ರಾಯಬಾಗ, ಕಾಗವಾಡ, ಹುಕ್ಕೇರಿಗಳಿಗೆ ಭೇಟಿ ನೀಡಿದ್ದು ತೀರಾ ಕಡಿಮೆ. ಸ್ವ ಸಾಮರ್ಥ್ಯದಿಂದ ಕೆಲಸ ತಂದಿದ್ದಂತೂ ಇನ್ನೂ ಕಡಿಮೆ. ಹಾಗಾಗಿ ತಮ್ಮದೇ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರಿಂದ ವಿರೋಧ ಎದುರಿಸಬೇಕಾಗಿದೆ. ಅವರು ಬೆಳಗಾವಿ ಕ್ಷೇತ್ರಕ್ಕೆ ವಲಸೆ ಬಲು ಪ್ರಯತ್ನಿಸಿದ್ದು ಇದೇ ಹಿನ್ನೆಲೆಯಲ್ಲಿರಬಹುದು.
ಪ್ರಕಾಶ ಹುಕ್ಕೇರಿ ಚಿಕ್ಕೋಡಿ ಬಿಟ್ಟು ಬೆಳಗಾವಿ ಕ್ಷೇತ್ರ ಕೇಳಿ ಮತ್ತೊಂದು ತಪ್ಪು ಮಾಡಿದರು. ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡರು. ಇದು ವಿರೋಧಿಗಳಿಗೆ ಆಹಾರವಾಯಿತು.
ಶಾಸಕರ ಲೆಕ್ಕದಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಸಮಬಲ ಹೊಂದಿವೆ. ಎರಡೂ ಪಕ್ಷಗಳಲ್ಲಿ ತಲಾ 4 ಶಾಸಕರಿದ್ದಾರೆ. ಆದರೆ ಶಾಸಕರ ಬಲವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಪ್ರಕಾಶ ಹುಕ್ಕೇರಿ ನಿರ್ಲಕ್ಷ್ಯ ತೋರಿದರು. ಶಾಸಕರೊಂದಿಗೆ ಉತ್ತಮ ಬಾಂಧವ್ಯ ಬೆಸೆದುಕೊಳ್ಳಲಿಲ್ಲ. ಕಾಗವಾಡ ಮತ್ತು ಅಥಣಿ ಶಾಸಕರಂತೂ ಬಹಿರಂಗವಾಗಿಯೇ ಕಿಡಿಕಾರಿದ್ದರು. ಈ ಎರಡೂ ಕ್ಷೇತ್ರ ಕಳೆದ ಬಾರಿ ಕಾಂಗ್ರೆಸ್ ಕೈಯಲ್ಲಿರಲಿಲ್ಲ.
ಪ್ರಕಾಶ ಹುಕ್ಕೇರಿ ಪರ ಮಗ, ಶಾಸಕ ಗಣೇಶ ಹುಕ್ಕೇರಿ ಹಾಗೂ ಸ್ಥಳೀಯ ಮುಖಂಡರು ತೊಡಗಿದ್ದರೆ, ಜೊಲ್ಲೆ ಪರ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮೊದಲಾದವರು ಓಡಾಡುತ್ತಿದ್ದಾರೆ. ಕತ್ತಿ ಸಹೋದರರು ಈವರೆಗೂ ಸಂಪೂರ್ಣವಾಗಿ ತಮ್ಮನ್ನು ಪ್ರಚಾರದಲ್ಲಿ ತೊಡಗಿಸಿಕೊಂಡಿಲ್ಲ.
ಈ ಬಾರಿ ನರೇಂದ್ರ ಮೋದಿ ಅಲೆ ಬಲವಾಗಿರುವುದು ಕೂಡ ಪ್ರಕಾಶ ಹುಕ್ಕೇರಿಗೆ ಹಿನ್ನಡೆಯಾಗಿದೆ. ಇವೆಲ್ಲವನ್ನೂ ಮೀರಿ ಅವರು ಹೇಗೆ ಹೋರಾಡುತ್ತಾರೆ ಎನ್ನುವುದೇ ಕುತೂಹಲದ ಸಂಗತಿಯಾಗಿದೆ.
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಹಾಗೂ ಎಲ್ಲಾ ಗ್ರುಪ್ ಗಳಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ