ನಾನು ಅವರ ಹಾಗೆ ಬೇಜವಾಬ್ದಾರಿಯಿಂದ ಮಾತನಾಡಲ್ಲ ಎಂದ ಬಸವರಾಜ ಬೊಮ್ಮಾಯಿ; ಯಾರ ಹಾಗೆ?

ʼನಾನು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಅದರ ಬಗ್ಗೆ ಮಾತನಾಡಲು ನಾನು ಸಿದ್ಧವಿಲ್ಲ. ಅವರ ಹಾಗೆ ಬೇಜವಾಬ್ದಾರಿಯಿಂದ ಮಾತನಾಡಲು ಸಾಧ್ಯವಿಲ್ಲʼ

-ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂದೆ ಹೋಗಿದ್ದಾರೆ ಎಂದು ಎಲ್ಲೋ ಒಂದು ಕಡೆ ಸಿದ್ದರಾಮಯ್ಯ ಅವರಿಗೆ ಅಭದ್ರತೆ ಕಾಡುತ್ತಿದೆ. ಇವರ ತಿಕ್ಕಾಟದಿಂದ ಮುಂದಿನ ದಿನಗಳಲ್ಲಿ ಬಹಳಷ್ಟ ಜನ ಕಾಂಗ್ರೆಸ್ ಪಕ್ಷವನ್ನು ತೊರೆಯಲಿದ್ದಾರೆಯೇ ಹೊರೆತು ಅಲ್ಲಿ ಹೋಗುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಚುನಾವಣೆ ಸಂದರ್ಭದಲ್ಲಿ ಸಚಿವರು ಕಾಂಗ್ರೆಸ್ ಪಕ್ಷಕ್ಕೆ ವಲಸೆ ಬರಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪುನರುಚ್ಚರಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ʼಮೊದಲು ಶಾಸಕರು ನಿರಂತರ ಸಂಪರ್ಕದಲ್ಲಿದ್ದಾರೆʼ -ʼಬಂದೇ ಬಿಡುತ್ತಾರೆʼಎಂದರು. ಈಗ ಚುನಾವಣಾ ಸಂದರ್ಭದಲ್ಲಿ ಬರಲಿದ್ದಾರೆ ಎನ್ನುತ್ತಿದ್ದಾರೆ. ಅಂದರೆ ಮೊದಲು ಮಾತನಾಡಿದ್ದು ಸುಳ್ಳು ಎಂದು ಸ್ಷಷ್ಟವಾಗುತ್ತದೆ.

ಯಾವ ಶಾಸಕರು ಬರುತ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ಕಾಂಗ್ರೆಸ್‍ನಲ್ಲಿ ಆಂತರಿಕವಾಗಿ ಸ್ಪರ್ಧೆ ಇದೆ. ಡಿ.ಕೆ.ಶಿವಕುಮಾರ್, ಅವರು, ಇವರ ಬಳಿ ಮಾತನಾಡಿದ್ದೇನೆ ಎಂದು ಅಲ್ಲಲ್ಲಿ ಸುದ್ದಿ ಮಾಡುತ್ತಾರೆ ಎಂದರು.

*ಕಾಂಗ್ರೆಸ್ ಅಪ್ರಸ್ತುತವಾಗಲಿದೆ:*

ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಅಸ್ತಿತ್ವವೇ ಇಲ್ಲ. ಪಂಜಾಬ್‍ನಲ್ಲಿ ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ. ಗೋವಾದಲ್ಲಿ ಅಧಿಕಾರಕ್ಕೆ ಬರುವ ಪರಿಸ್ಥಿತಿಯೇ ಇಲ್ಲ. ಹೀಗಾಗಿ ಈ ಐದೂ ರಾಜ್ಯಗಳ ಚುನಾವಣೆಯಾದ ಮೇಲೆ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಅಪ್ರಸ್ತುತ ಆಗಲಿದೆ. ರಾಷ್ಟ್ಟಮಟ್ಟದಲ್ಲಿ ಒಂದು ಪಕ್ಷ ಅಪ್ರಸ್ತುತವಾದಾಗ ಅದರ ಕರಿನೆರಳು ರಾಜ್ಯದ ಕಾಂಗ್ರೆಸ್ ಮೇಲೂ ಹಾಗೂ ರಾಜಕಾರಣದ ಮೇಲೂ ಆಗಲಿದೆ. ಅದರ ಪರಿಣಾಮವನ್ನು ಬರುವ ದಿನಗಳಲ್ಲಿ ಕಾಣಲಿದ್ದೇವೆ ಎಂದರು.
ಡಿ.ಕೆ.ಶಿವಕುಮಾರ್ ಹಾಗೂ ಸಿದ್ಧರಾಮಯ್ಯನವರು ಪೈಪೋಟಿ ಮೇಲೆ ಹೇಳಿಕೆಗಳನ್ನು ನೀಡುತ್ತಿದ್ದಾರೆಯೇ ಎನ್ನುವ ಮಾಧ್ಯಮಗಳ ಪ್ರಶ್ನೆಗೇ ಉತ್ತರಿಸುತ್ತಾ, ಅದು ಆಂತರಿಕ ಪೈಪೋಟಿ ಅಷ್ಟೇ ಸದ್ದು. ಇದರಲ್ಲಿ ಯಾವುದೇ ಸತ್ಯಾಂಶವೂ ಇಲ್ಲ ವಾಸ್ತವಾಂಶವೂ ಇಲ್ಲ. ಆ ಭೂಮಿಕೆಯೇ ಇಲ್ಲ ಎಂದರು.
ಬಿಜೆಪಿ ಸಂಪರ್ಕದಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆಯೇ ಎಂಬ ಪ್ರಶ್ನೆಗೆ , ನಾನು ಎಲ್ಲಿಯೂ ಈ ರೀತಿ ಹೇಳಿಲ್ಲ ಎಂದರು.

ರಮೇಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಅವರ ಬಳಿ ಯಾರು ಸಂಪರ್ಕದಲ್ಲಿದ್ದಾರೆ ಎಂದು ವಿಚಾರಣೆ ಮಾಡುವುದಾಗಿ ತಿಳಿಸಿದರು. ನಿಮ್ಮ ಸಂಪರ್ಕದಲ್ಲಿ ಯಾರಾದರೂ ಇದ್ದಾರೆಯೇ ಎಂಬ ಪ್ರಶ್ನೆಗೆ – ʼನಾನು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಅದರ ಬಗ್ಗೆ ಮಾತನಾಡಲು ನಾನು ಸಿದ್ಧವಿಲ್ಲ. ಅವರ ಹಾಗೆ ಬೇಜವಾಬ್ದಾರಿಯಿಂದ ಮಾತನಾಡಲು ಸಾಧ್ಯವಿಲ್ಲʼ ಎಂದರು.

ರಮೇಶ್ ಜಾರಕಿಹೊಳಿಯವರು ಆಪರೇಷನ್ ಕಮಲದ ಉಸ್ತುವಾರಿ ವಹಿಸಿಕೊಂಡಂತೆ ಮಾತನಾಡುತ್ತಿದ್ದು, ಎಲ್ಲಿ ಹೋದರೂ 15- 20 ಜನ ಬರಲಿದ್ದಾರೆ ಎನ್ನುತ್ತಾರೆ. ನಳಿನ್ ಕುಮಾರ್ ಕಟೀಲ್ ಸಹ ಅದನ್ನೇ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಅದೆಲ್ಲಾ ಗೊತ್ತಿರುವ ವಿಚಾರ ಎಂದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಚುನಾವಣೆ ಬಳಿಕ ನಮ್ಮನ್ನು ಬಿಟ್ಟು ಯಾರೂ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅದು ಅವರ ಸದಾಶಯ ಯಾವಾಗಲೂ ಹಾಗೆಯೇ ಇರುತ್ತದೆ. ಅತಂತ್ರವಾದರೆ ಅವರು ಸ್ವತಂತ್ರರಾಗುತ್ತಾರೆ ಎಂದು ಸಹಜವಾಗಿ ಆಶಿಸುತ್ತಾರೆ ಎಂದರು.

ರಮೇಶ ಜಾರಕಿಹೊಳಿ ಹೇಳಿದ ಆ ಮೂವರು ಯಾರು? ಅವನೊಬ್ಬ ಯಾರು?: ಎಲ್ಲರ ಕಡೆಗೂ ಅನುಮಾನದ ದೃಷ್ಟಿ

12 ಜಿಲ್ಲೆ, 3000 ಪಂಚಾಯಿತಿಗಳಲ್ಲಿ ಇಂದಿನಿಂದ ಹೊಸ ಯೋಜನೆ – ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button