Kannada NewsKarnataka NewsLatest

ಬೆಳಗಾವಿ ಬಿಜೆಪಿ ಬಿಕ್ಕಟ್ಟು: ಮಧ್ಯಸ್ಥಿಕೆ ವಹಿಸುವ ಸುಳಿವು ನೀಡಿದ ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಗೋಕಾಕ – ಬೆಳಗಾವಿ ಬಿಜೆಪಿಯಲ್ಲಿ ಉಂಟಾಗಿರುವ ಬಿಕ್ಕಟ್ಟು ಪರಿಹರಿಸಲು ಮಧ್ಯಸ್ಥಿಕೆ ವಹಿಸುವ ಸುಳಿವನ್ನು ಮಾಜಿ ಸಚಿವ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷ್ಮಣ ಸವದಿ, ಜೊಲ್ಲೆ ಸೇರಿದಂತೆ ಎಲ್ಲರೂ ಒಟ್ಟಾಗಿ ಕುಳಿತು ಮಾತನಾಡಿ ಒಂದಾಗಿ ಬಿಜೆಪಿಯನ್ನು ಮುಂದೆ ತೆಗೆದುಕೊಂಡು ಹೋಗಬೇಕಾಗಿದೆ ಎಂದರು.

ನಿಮ್ಮನ್ನೇ ದೂರ ಇಟ್ಟು ಮೀಟಿಂಗ್ ಮಾಡಿದ್ದಾರಲ್ವಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಯಾರಾದರೂ ಮಧ್ಯಸ್ಥಿಕೆ ವಹಿಸಲೇಬೇಕಲ್ವ. ಎಲ್ಲ ನಾಯಕರಲ್ಲಿ ನಾನು ವಿನಂತಿ ಮಾಡುತ್ತೇನೆ ಎಲ್ಲರೂ ಶಾಂತವಾಗಿ ಕುಳಿತು, ಚರ್ಚಿಸಿ ಒಂದಾಗಿ ಹೋಗುತ್ತೇವೆ ಎಂದು ಹೇಳಿದರು.

ಅರ್ಧ ರಾಜ್ಯ ಕಟ್ಟುವ ಲೀಡರ್ ಗಳು ಇಲ್ಲೇ ಇದ್ದಾರೆ. ಹಾಗಾಗಿ ವಿವಾದವನ್ನು ರಾಜ್ಯಮಟ್ಟಕ್ಕೆ ಒಯ್ಯುವ ಅಗತ್ಯವಿಲ್ಲ. ನಾವೇ ಕುಳಿತು ಬಗೆಹರಿಸುತ್ತೇವೆ. ಆದಷ್ಟು ಬೇಗ ಸಭೆ ಸೇರಲಾಗುವುದು ಎಂದು ಬಾಲಚಂದ್ರ ತಿಳಿಸಿದರು.

ಬಿಜೆಪಿಯಿಂದ ಕಾಂಗ್ರೆಸ್ ಗೆ, ಕಾಂಗ್ರೆಸ್ ನಿಂದ ಬಿಜೆಪಿಗೆ ಪಕ್ಷಾಂತರ ಮಾಡುವ ವದಂತಿ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಗೊತ್ತಿರುವ ವಿಷಯವನ್ನಷ್ಟೇ ನಾನು ಮಾತನಾಡುತ್ತೇನೆ. ಪಕ್ಷಾಂತರಗಳ ಕುರಿತು ನನಗೆ ಮಾಹಿತಿ ಇಲ್ಲ.  ನಾನಂತೂ ಭಾರತೀಯ ಜನತಾ ಪಾರ್ಟಿ ಬಿಟ್ಟು ಹೊಗುವುದಿಲ್ಲ. ಇಲ್ಲೇ ಬಿ ಫಾರ್ಮ್ ಪಡೆದು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೇಳಿದರು.

ನ್ಯಾಯಾಲಯದಲ್ಲಿ ಪ್ರಕರಣ ಬಗೆಹರಿದ ನಂತರ ರಮೇಶ ಜಾರಕಿಹೊಳಿ ಸಚಿವರಾಗುವುದು ಖಚಿತ ಎಂದೂ ಬಾಲಚಂದ್ರ ತಿಳಿಸಿದರು. ಸಣ್ಣ ವಿಷಯ ನ್ಯಾಯಾಲಯದಲ್ಲಿ ವಿಳಂಬವಾಗುತ್ತಿದೆ. ಅದು ಯಾಕೆ ವಿಳಂಬವಾಗುತ್ತಿದೆ ಗೊತ್ತಿಲ್ಲ. ಅದು ತೀರ್ಮಾನವಾದನಂತರ ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ಗ್ಯಾರಂಟಿ  ಎಂದು ಹೇಳಿದರು.

ಆಯಾ ಜಿಲ್ಲೆಯವರಿಗೆ ಉಸ್ತುವಾರಿ ಕೊಡಬಾರದೆನ್ನುವುದು ಪಕ್ಷದ ನಿರ್ಧಾರ. ಹಾಗಾಗಿ ಗೋವಿಂದ ಕಾರಜೋಳ ಬೆಳಗಾವಿ ಜಿಲ್ಲಾ ಉಸ್ತುವಾರಿಯಾಗಿದ್ದಾರೆ. ಅವರಿಗೆ ಎಲ್ಲರೂ ಸಹಕಾರ ಕೊಡೋಣ. ಪಕ್ಷ ಸಂಘಟನೆ ಮತ್ತು ಜಿಲ್ಲೆಯ ಅಭಿವೃದ್ಧಿ ಮಾಡೋಣ ಎಂದರು.

ಕಾಂಗ್ರೆಸ್ ನಾಯಕರೇ ಮೊದಲು ಪಕ್ಷದ ಬಾಗಿಲು ಭದ್ರಪಡಿಸಿಕೊಳ್ಳಿ; ತಿರುಗೇಟು ನೀಡಿದ ಬಿಜೆಪಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button