Latest

ಚುನಾವಣಾ ಜಾಹೀರಾತು: ಪೂರ್ವಾನುಮತಿ ಕಡ್ಡಾಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏ. ೨೨ ಹಾಗೂ ೨೩ ರಂದು ಅಭ್ಯರ್ಥಿಗಳು/ಸಂಸ್ಥೆಗಳು ಅಥವಾ ಯಾವುದೇ ವ್ಯಕ್ತಿಯು ದಿನಪತ್ರಿಕೆಗಳಲ್ಲಿ ಯಾವುದೇ ರೀತಿಯ ಚುನಾವಣಾ ಜಾಹೀರಾತು ಪ್ರಕಟಿಸಬೇಕಾದರೆ ಸದರಿ ಜಾಹೀರಾತಿಗೆ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯ(ಎಂಸಿಎಂಸಿ) ಕಡೆಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ  ಡಾ.ವಿಶಾಲ್ ಆರ್ ಅವರು ತಿಳಿಸಿದರು.
ಚುನಾವಣಾ ಜಾಹೀರಾತು ಪ್ರಕಟಿಸಲು ಬಯಸುವ ಅಭ್ಯರ್ಥಿಗಳು ಏಪ್ರಿಲ್ ೨೨ ಹಾಗೂ ೨೩ ರಂದು ಮುದ್ರಣ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸಬೇಕಾದರೆ ಜಾಹೀರಾತಿನ ಎರಡು ಸ್ವಯಂ ದೃಢೀಕೃತ ಪ್ರತಿಗಳೊಂದಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಏಪ್ರಿಲ್ ೨೦, ೨೦೧೯ರೊಳಗೆ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ(ಎಂಸಿಎಂಸಿ)ಗೆ ಅರ್ಜಿ ಸಲ್ಲಿಸಬೇಕು.
ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಜಾಹೀರಾತುಗಳನ್ನು ಪ್ರಕಟಿಸಲು ಜಿಲ್ಲಾಮಟ್ಟದ ಎಂಸಿಎಂಸಿ ಕಡೆಯಿಂದ ಪೂರ್ವಾನುಮತಿ ಪಡೆಯದ ಅಭ್ಯರ್ಥಿಗಳ ಜಾಹೀರಾತುಗಳನ್ನು ಸ್ಥಳೀಯ, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ದಿನಪತ್ರಿಕೆಗಳು ಪ್ರಕಟಿಸಬಾರದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಪೂರ್ವಾನುಮತಿಗೆ ಅರ್ಜಿ ಲಭ್ಯ:
ಏಪ್ರಿಲ್ ೨೨ ಹಾಗೂ ೨೩ ರಂದು ಮುದ್ರಣ ಮಾಧ್ಯಮದಲ್ಲಿ ಪ್ರಕಟಿಸಲು ಪೂರ್ವಾನುಮತಿ ಪಡೆಯಲು ಅಗತ್ಯವಿರುವ ನಿಗದಿತ ನಮೂನೆಯ ಅರ್ಜಿ ನಮೂನೆಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ’ವಾರ್ತಾಭವನ’ ನ್ಯಾಯಾಲಯ ಆವರಣ, ಬೆಳಗಾವಿ- ಈ ಕಚೇರಿಯಿಂದ ಪಡೆಯಬಹುದು.

ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಿಗೆ ಮಾರ್ಗಸೂಚಿ:
ಮತದಾನಕ್ಕೆ ನಿಗದಿಪಡಿಸಿರುವ ಅವಧಿ ಕೊನೆಗೊಳ್ಳುವ ೪೮ ಗಂಟೆಗಳ ಮುಂಚೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ (ಟಿವಿ, ಸಿನಿಮಾಟೋಗ್ರಾಫ್, ದೃಶ್ಯಶ್ರವಣ) ಚುನಾವಣಾ ಸಂಬಂಧಿ ವಿಷಯಗಳ ಪ್ರಸಾರವನ್ನು ಪ್ರಜಾಪ್ರತಿನಿಧಿ ಕಾಯ್ದೆ-೧೯೫೧ ರ ಕಲಂ ೧೨೬ ರ ಪ್ರಕಾರ ನಿಷೇಧಿಸಲಾಗಿದೆ.
ಚುನಾವಣಾ ಸಂಬಂಧಿ ವಿಷಯ ಎಂದರೆ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಅಥವಾ ಪರಿಣಾಮ ಬೀರುವಂತಹ ವಿಷಯಗಳಾಗಿರುತ್ತವೆ.
ಈ ಕಾಯ್ದೆಯನ್ನು ಉಲ್ಲಂಘಿಸುವವರಿಗೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹ ಶಿಕ್ಷೆ ಅಥವಾ ದಂಡ ಅಥವಾ ದಂಡ ಮತ್ತು ಶಿಕ್ಷೆ ಎರಡನ್ನೂ ವಿಧಿಸಬಹುದಾಗಿದೆ.

ಟಿವಿ/ರೇಡಿಯೋ/ಕೇಬಲ್ ನೆಟವರ್ಕ ಮತ್ತು ಎಲ್ಲ ಡಿಜಿಟಲ್ ಮಾಧ್ಯಮಗಳು ಮತದಾನಪೂರ್ವ ೪೮ ಗಂಟೆಗಳ ಅವಧಿಯಲ್ಲಿ ಚುನಾವಣೆ ಸಂಬಂಧಿ ವಿಷಯಗಳು ಪ್ರಸಾರ ಮಾಡದಂತೆ ಕ್ರಮವಹಿಸಬೇಕು.
ಕಾರ್ಯಕ್ರಮದಲ್ಲಿ ಭಾಗವಹಿಸುವವರು(ಪ್ಯಾನಲಿಸ್ಟ್) ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರ ಅಥವಾ ವಿರೋಧವಾಗಿರುವ ಅಭಿಪ್ರಾಯಗಳು/ಮನವಿಗಳು ಮತ್ತು ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವಂತಹ ವಿಷಯಗಳನ್ನು ಕೂಡ ಪ್ರಸಾರ ಮಾಡಕೂಡದು.
ನಿಗದಿತ ೪೮ ಗಂಟೆಗಳ ಅವಧಿಯಲ್ಲಿ ಒಪಿನಿಯನ್ ಪೋಲ್ ಫಲಿತಾಂಶ ಪ್ರಕಟಿಸುವುದು. ಚರ್ಚೆ ಅಥವಾ ವಿಶ್ಲೇಷಣೆ ಏರ್ಪಡಿಸುವುದು. ಅದೇ ರೀತಿ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಸಾರ ಮಾಡುವುದು ಕೂಡ ಪ್ರಜಾಪ್ರತಿನಿಧಿ ಕಾಯ್ದೆ-೧೯೫೧ ರ ಕಲಂ ೧೨೬ ರ ವ್ಯಾಪ್ತಿಯಲ್ಲಿ ಬರುತ್ತದೆ.
ಲೋಕಸಭಾ ಚುನಾವಣೆ-೨೦೧೯ರ ಅಂಗವಾಗಿ ಏಪ್ರಿಲ್ ೨೩ ಮತದಾನ ನಡೆಯಲಿದೆ. ಆದ್ದರಿಂದ ಎಲ್ಲ ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮಗಳು ಏಪ್ರಿಲ್ ೨೧ ರ ಸಂಜೆ ೬ ಗಂಟೆಯಿಂದ ಏಪ್ರಿಲ್ ೨೩ ರ ಸಂಜೆ ೬.೩೦ ಗಂಟೆಯವರೆಗೆ ಮೇಲ್ಕಂಡ ನಿರ್ದೇಶನಗಳನ್ನು ಪಾಲಿಸುವಂತೆ ಬೆಳಗಾವಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಡಾ.ವಿಶಾಲ್ ಆರ್ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button