Latest

ಜ.31ರಿಂದ ರಾತ್ರಿ ಕರ್ಫ್ಯೂ ತೆರವು; ಹಲವು ಮಾರ್ಗಸೂಚಿ ಸಡಿಲಿಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿ ಮಾಡಿದ್ದ ನೈಟ್ ಕjರ್ಫ್ಯೂ ನಿಯಮವನ್ನು ಜನವರಿ 31ರಿಂದ ತೆರವುಗೊಳಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ್ ಬೊಮಾಯಿ ನೇತೃತ್ವದಲ್ಲಿ ನಡೆದ ಕೋವಿಡ್ ಕುರಿತ ಸಭೆ ಬಳಿಕ ಮಾತನಾಡಿದ ಸಚಿವರು, ಜನವರಿ 31ರಿಂದ ನೈಟ್ ಕರ್ಫ್ಯೂ ತೆರವಿಗೆ ನಿರ್ಧರಿಸಲಾಗಿದೆ. ಕೋವಿಡ್ ಟಫ್ ರೂಲ್ಸ್ ನಲ್ಲಿ ಕೆಲ ಸಡಿಲಿಕೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಚಿತ್ರಮಂದಿರಗಳಲ್ಲಿ 50:50 ನಿಯಮ ಜಾರಿಗೊಳಿಸಲಾಗಿದೆ. ಕಚೇರಿಗಳಲ್ಲಿ ಶೇ.100ರಷ್ಟು ನೌಕರರಿಗೆ ಅನುಮತಿ ನೀಡಲಾಗಿದೆ. ಮಂದಿರ, ಮಸೀದಿ, ಚರ್ಚ್ ಗಳಲ್ಲಿ ಸೇವೆ ಪುನರಾರಂಭಗೊಳ್ಳಲಿದೆ ಆದರೆ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಜಾತ್ರೆ, ಪ್ರತಿಭಟನೆ, ರ್ಯಾಲಿಗಳಿಗೆ ನಿರ್ಬಂಧ ಮುಂದುವರೆಸಲಾಗುವುದು. ಜಿಮ್, ಈಜುಕೊಳಗಳಲ್ಲಿ ಶೇ.50ರಷ್ಟು ಜನರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಶಾಲೆಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿ ಸೋಮವಾರದಿಂದ ಶಾಲೆಗಳು ಪುನರಾರಂಭವಾಗಲಿದ್ದು, ಕೋವಿಡ್ ನಿಯಮಗಳ ಪಾಲನೆ ಕಡ್ಡಾಯವಾಗಿದೆ ಎಂದು ತಿಳಿಸಿದರು.

*ಕೋವಿಡ್ 19 ಸ್ಥಿತಿಗತಿ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಮುಖ್ಯಾಂಶಗಳು*

1. ಗುಣಮುಖರಾಗುತ್ತಿರುವವರ ಪ್ರಮಾಣ ಹೆಚ್ಚಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ.
2. ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಶೇ. 2ಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲು ತಜ್ಞರ ಸಭೆಯಲ್ಲಿ ತೀರ್ಮಾನಿಸಲಾಯಿತು.
3. ಜನವರಿ 31 ರಿಂದ ರಾತ್ರಿ ಕರ್ಫ್ಯೂ ರದ್ದು ಪಡಿಸಲು ನಿರ್ಧರಿಸಲಾಗಿದೆ.
4. ಬೆಂಗಳೂರು ನಗರದಲ್ಲಿ ಜನವರಿ 31 ರಿಂದ ಶಾಲೆ, ಕಾಲೇಜುಗಳನ್ನು ತೆರೆಯಲು ತೀರ್ಮಾನಿಸಲಾಯಿತು.
5. ಮೆಟ್ರೋ ರೈಲು ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ತಮ್ಮ ಆಸನ ಸಾಮರ್ಥ್ಯದಷ್ಟೇ ಪ್ರಯಾಣಿಕರೊಂದಿಗೆ ಕಾರ್ಯಾಚರಣೆ ನಡೆಸಬಹುದು.
6. ಪಬ್ ಗಳು, ಕ್ಲಬ್ ಗಳು, ರೆಸ್ಟೋರೆಂಟ್ ಗಳು, ಬಾರ್, ಹೋಟೆಲ್ ಗಳಲ್ಲಿ ಶೇ. 50 ಆಸನ ಸಾಮರ್ಥ್ಯದಡಿ ಕಾರ್ಯ ನಿರ್ವಹಿಸುವ ನಿರ್ಬಂಧವನ್ನು ಹಿಂಪಡೆಯಲಾಗುವುದು.
7. ಸಿನೆಮಾ, ಮಲ್ಟಿಪ್ಲೆಕ್ಸ್, ಥಿಯೇಟರ್ ಗಳು, ರಂಗಮಂದಿರಗಳು, ಆಡಿಟೋರಿಯಂ ಗಳು ಮತ್ತು ಇಂತರ ಸ್ಥಳಗಳಲ್ಲಿ ಶೇ. 50 ರ ಆಸನ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲಿವೆ.
8. ವಿವಾಹ ಸಮಾರಂಭಗಳಿಗೆ ತೆರೆದ ಸ್ಥಳದಲ್ಲಿ 300 ಜನರಿಗೆ ಹಾಗೂ ಮುಚ್ಚಿದ ಸ್ಥಳಗಳಲ್ಲಿ 200 ಜನರಿಗೆ ಅವಕಾಶ.
9. ಸರ್ಕಾರದ ಸಚಿವಾಲಯದಲ್ಲಿ ಶೇ. 50 ರಷ್ಟು ಸಿಬ್ಬಂದಿ ಕಾರ್ಯನಿರ್ವಹಿಸುವುದನ್ನು ರದ್ದು ಪಡಿಸಿ ಶೇ. ನೂರರಷ್ಟು ಸಿಬ್ಬಂದಿ ಕಾರ್ಯನಿರ್ವಹಿಸುವುದು.
10. ಧಾರ್ಮಿಕ ಸ್ಥಳಗಳಲ್ಲಿ ದರ್ಶನ ಹಾಗೂ ಸೇವೆಗೆ ಅವಕಾಶ ನೀಡಲಾಗುವುದು. ಶೇ. 50ರ ಸಾಮರ್ಥ್ಯದಲ್ಲಿ ಪ್ರವೇಶಾವಕಾಶ ಕಲ್ಪಿಸಲಾಗುವುದು.
11. ಎಲ್ಲ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ರ್ಯಾಲಿ, ಧರಣಿ, ಸಮಾವೇಶ, ಪ್ರತಿಭಟನೆಗಳಿಗೆ ಅವಕಾಶವಿಲ್ಲ.
12. ಸ್ವಿಮ್ಮಿಂಗ್ ಪೂಲ್, ಜಿಮ್ ಗಳು ಶೇ. 50 ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುವುದು.
13. ಸ್ಪೋಟ್ಸ್ ಕಾಂಪ್ಲೆಕ್ಸ್ ಮತ್ತು ಕ್ರೀಡಾಂಗಣಗಳಲ್ಲಿ ಶೇ. 50 ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುವುದು.
14. ಕೇರಳ, ಮಹಾರಾಷ್ಟ್ರ, ಗೋವಾ ಗಡಿಗಳಲ್ಲಿ ತೀವ್ರ ನಿಗಾ ವಹಿಸುವುದು.
15. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಶೇ. 25 ರಷ್ಟು ಹಾಸಿಗೆಗಳನ್ನು ನಿಗದಿಪಡಿಸಲು ನಿರ್ಧರಿಸಲಾಯಿತು.
16. ಕೋವಿಡ್ ಹೊರತು ಪಡಿಸಿ, ಇತರ ಚಿಕಿತ್ಸೆಗಳನ್ನು ಸಮರ್ಪಕವಾಗಿ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.

ಕೊರೋನಾ: ಶನಿವಾರ ಉನ್ನತಮಟ್ಟದ ಸಭೆ ಕರೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button