ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಆಂಧ್ರಪ್ರದೇಶದಿಂದ ಕರ್ನಾಟಕದ ಮೂಲಕ ಮಹಾರಾಷ್ಟ್ರಕ್ಕೆ ರಕ್ತ ಚಂದನ ಸಾಗಿಸುತ್ತಿದ್ದ ಲಾರಿಯೊಂದನ್ನು ಮಹಾರಾಷ್ಟ್ರ ಪೊಲೀಸರು ವಶಕ್ಕೆಪಡೆದುಕೊಂಡು ಚಾಲಕನನ್ನು ಬಂಧಿಸಿದ್ದಾರೆ. ೨.೪೫ ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ರಕ್ತ ಚಂದನ ಮತ್ತು ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.
ಕರ್ನಾಟಕದ ಆನೇಕಲ್ ಮೂಲದ ಯಾಸೀನ್ ಇನಾಯತಉಲ್ಲಾ ಬಂಧಿತ ಆರೋಪಿ. ಈ ಭಯಂಕರ ಕಳ್ಳಸಾಗಣೆಯಲ್ಲಿ ಬಹಳಷ್ಟು ಜನ ಶಾಮೀಲಾಗಿರುವ ಶಂಕೆಯಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.
*ಹಣ್ಣು ಸಾಗಿಸುವ ಲಾರಿ*
ಹಣ್ಣು ಸಾಗಾಟ ಮಾಡುವ ಲಾರಿಯಲ್ಲಿ ರಕ್ತ ಚಂದನ ಸಾಗಾಟ ಮಾಡಲಾಗುತ್ತಿದ್ದು ಜನ ಈ ಪ್ರಕರಣವನ್ನು ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಸೂಪರ್ ಹಿಟ್ ಚಲನಚಿತ್ರ ಅಲ್ಲು ಅರ್ಜುನ್‌ರ ಪುಷ್ಪ ಸಿನೇಮಾಕ್ಕೆ ಹೋಲಿಸುತ್ತಿದ್ದಾರೆ. ಪುಷ್ಪದಲ್ಲಿ ಹಾಲು ಸಾಗಿಸುವ ಲಾರಿಯಲ್ಲಿ ರಕ್ತ ಚಂದನ ಸಾಗಿಸಲಾಗುತ್ತದೆ. ಈ ಪ್ರಕರಣದಲ್ಲಿ ಹಣ್ಣು ಸಾಗಿಸುವ ಲಾರಿಯಲ್ಲಿ ಸಾಗಾಟ ಮಾಡಲಾಗಿದೆ.
*ಮೂರು ರಾಜ್ಯ ದಾಟಿದ ರಕ್ತ ಚಂದನ*
ರಕ್ತ ಚಂದನದ ದಿಮ್ಮಿಗಳನ್ನು ಆಂದ್ರದಿಂದ ಕರ್ನಾಟಕ ಗಡಿ ದಾಟಿಸಿ ಅಲ್ಲಿಂದ ಬೆಳಗಾವಿ ಮೂಲಕ ಹಾದು ಮಹಾರಾಷ್ಟ್ರ ಗಡಿ ದಾಟಿಸಲಾಗಿದೆ. ಆದರೆ ಆಂದ್ರ ಮತ್ತು ಕರ್ನಾಟಕದಲ್ಲಿ ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳ ಕೈಗೆ ಸಿಕ್ಕಿಬೀಳದಿರುವುದು ಅನುಮಾನಕ್ಕೆ ಕಾರಣವಾಗಿದೆ.
ನಮಗೆ ಖಚಿತ ಮೂಲಗಳಿಂದ ಮಾಹಿತಿ ಬಂದ ಆಧಾರದಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ದಾಳಿ ನಡೆಸಿದ್ದೆವು. ೨.೪೫ ಕೋಟಿ ಮೌಲ್ಯದ ಒಟ್ಟು ೮ ಟನ್ ತೂಕದ ರಕ್ತ ಚಂದನ ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದೇವೆ ಎಂದು ಮೀರಜ್‌ನ ಎಸ್‌ಪಿ ದೀಕ್ಷಿತ್ ಗೇಡಮ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಉಪ ಪೊಲೀಸ್ ಆಯುಕ್ತ ಅಶೋಕ್ ವಿರಕರ್ ಮತ್ತು ಸಹಾಯಕ ಪೊಲಿಸ್ ನಿರಿಕ್ಷಕ ರವಿರಾಜ್ ಫಡನವಿಸ್ ಸೇರಿದಂತೆ ಹಲವು ಅಧಿಕಾರಿಗಳು, ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ