ಸಿಎಂ ದೆಹಲಿ ಪ್ರವಾಸ ಸೋಮವಾರಕ್ಕೆ ಮುಂದೂಡಿಕೆ: ಬಜೆಟ್ ಸರಣಿ ಸಭೆಗೆ ಅನಿಶ್ಚಿತತೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ನಾಳೆಯೇ ದೆಹಲಿಗೆ ತೆರಳುವುದಾಗಿ ಬೆಳಗ್ಗೆ ತಿಳಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೀಗ ಸೋಮವಾರ ದೆಹಲಿಗೆ ಹೋಗುವುದಾಗಿ ತಿಳಿಸಿದ್ದಾರೆ.

ಸಂಸದರು ಬಜೆಟ್ ಪೂರ್ವಭಾವಿ ಸಭೆಯನ್ನು ಸೋಮವಾರ ಆಯೋಜಿಸುವಂತೆ ವಿನಂತಿಸಿದ್ದರಿಂದ ಸೋಮವಾರ ದೆಹಲಿಗೆ ತೆರಳುತ್ತೇನೆ ಎಂದು ಅವರು ಈಗ ಸ್ವಲ್ಪಹೊತ್ತಿನ ಮೊದಲು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೋಮವಾರದಿಂದ ಆರಂಭವಾಗಲಿದ್ದ ಬಜೆಟ್ ಪೂರ್ವ ವಿವಿಧ ಇಲಾಖೆಗಳ ಸರಣಿ ಸಭೆ ಅನಿಶ್ಚಿತವಾಗಿದೆ. ಸೋಮವಾರದಿಂದ ನಿರಂತರವಾಗಿ ಒಂದೊಂದು ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳ ಸಭೆಯನ್ನು ಮುಖ್ಯಮಂತ್ರಿಗಳು ಕರೆದಿದ್ದರು. ಹಾಗಾಗಿ ಸಚಿವರು ತಮ್ಮ ಬೇರೆ ಕಾರ್ಯಕ್ರಮಗಳನ್ನು ಈ ಸಭೆಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂದು ತಿಳಿಸಲಾಗಿತ್ತು.

ಸೋಮವಾರ ಸಿಎಂ ದೆಹಲಿಗೆ ಹೊರಟಿರುವುದಿರಂದ ಬಜೆಟ್ ಪೂರ್ವಭಾವಿ ಸಭೆಯ ದಿನಗಳು ಪುನರ್ ರೂಪಿತವಾಗಬೇಕಿದೆ.

ಸಚಿವಸಂಪುಟ ವಿಸ್ತರಣೆ ಗಡಿಬಿಡಿ

ನಾಳೆಯೇ ದೆಹಲಿಗೆ ಹೊಗುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗ್ಗೆ ತಿಳಿಸಿದ್ದರಿಂದ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಸಚಿವಾಕಾಂಕ್ಷಿಗಳಲ್ಲಿ ಕೆಲವರು ದೆಹಲಿಗೆ ತೆರಳಲು ಸಿದ್ಧರಾಗಿದ್ದರು.

ದೆಹಲಿಗೆ ತೆರಳಿ ಲಾಬಿ ನಡೆಸಲು ಪ್ರಯತ್ನ ನಡೆದಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ದೆಹಲಿಗೆ ತೆರಳಲು ಗೋವಾಕ್ಕೆ ಪ್ರಯಾಣ ಬೆಳೆಸಿದ್ದಾರೆನ್ನಲಾಗಿದೆ. ಗೋವಾದಿಂದ ವಿಮಾನದ ಮೂಲಕ ಅವರು ದೆಹಲಿಗೆ ಹೋಗುವ ಸಾಧ್ಯತೆ ಇದೆ. ಬೆಳಗ್ಗೆಯೇ ಗೋಕಾಕದಿಂದ ಗೋವಾಕ್ಕೆ ಹೋರಟಿದ್ದಾರೆ ಎನ್ನಲಾಗುತ್ತಿದೆ.

ಮುಖ್ಯಮಂತ್ರಿಗಳ ಪ್ರವಾಸ ಪಟ್ಟಿ ಬದಲಾಗಿದ್ದರಿಂದ ಅವರು ವಾಪಸ್ ಬರಲಿದ್ದಾರೋ ಅಥವಾ ದೆಹಲಿಗೆ ತೆರಳಲಿದ್ದಾರೋ ಕಾದು ನೋಡಬೇಕಿದೆ. ಬೆಂಗಳೂರಿನಲ್ಲೂ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಅನೇಕರು ಲಾಬಿ ಆರಂಭಿಸಿದ್ದಾರೆ.

ನಾಳೆಯೇ ದೆಹಲಿಗೆ ಹೊರಟೆ ಎಂದ ಬೊಮ್ಮಾಯಿ: ರಾಜ್ಯ ರಾಜಕೀಯದಲ್ಲಿ ಮತ್ತೆ ಗದ್ದಲ ಶುರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button