Latest

ಕನ್ನಡದಲ್ಲಿ ತಿಳಿಸಿದರೆ ಪರಿಣಾಮಕಾರಿ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ:

‘ವಿಜ್ಞಾನ ಮತ್ತು ವೈದ್ಯಕೀಯ ವಿಷಯ, ಸಂಗತಿಗಳನ್ನು ಕನ್ನಡ ಭಾಷೆಯಲ್ಲಿ ತಿಳಿಸಿದರೆ ಜನಸಾಮಾನ್ಯರಿಗೆ ಪರಿಣಾಮಕಾರಿಯಾಗಿ ಮುಟ್ಟುತ್ತದೆ’ ಎಂದು ಮೂಡಲಗಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್.ಎ. ಶಾಸ್ತ್ರೀಮಠ ಹೇಳಿದರು.
ಇಲ್ಲಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ತಂತ್ರಜ್ಞಾನ ಇಲಾಖೆ, ಚಿಕ್ಕೋಡಿ ಜಿಲ್ಲಾ ವಿಜ್ಞಾನ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ ಮಟ್ಟದ ವಿಜ್ಞಾನ ಪದವಿ ಹಾಗೂ ಬಿ.ಇಡಿ. ವಿದ್ಯಾರ್ಥಿಗಳ ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆ 2019 ಇದರ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಗಾಳಿ, ನೀರು ಎಷ್ಟು ಮುಖ್ಯವೋ ಜನರು ವಿಜ್ಞಾನದ ಬಗ್ಗೆ ತಿಳಿದುಕೊಳ್ಳುವುದು ಅಷ್ಟೆ ಅವಶ್ಯವಿದೆ ಎಂದರು.
ಜನರಲ್ಲಿ ಮೂಢನಂಬಿಕೆಗಳನ್ನು ದೂರಮಾಡಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವಲ್ಲಿ ವಿಜ್ಞಾನ ಸಾಹಿತ್ಯವು ವಿಫುಲವಾಗಿ ರಚನೆಯಾಗಬೇಕು ಎಂದರು.
ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಯೋಜಕ ಡಾ. ವಿ.ಆರ್. ದೇವರಡ್ಡಿ ಮಾತನಾಡಿ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೆಚ್ಚು ಆಸಕ್ತಿಯನ್ನು ಬೆಳೆಸಲು ರಾಜ್ಯ ವಿಜ್ಞಾನ ಪರಿಷತ್ತು ಮೂಲಕ ಸ್ಪರ್ಧೆಯನ್ನು ಸಂಘಟಿಸಲಾಗಿದೆ ಎಂದರು.
ಅತಿಥಿಯಾಗಿ ಜೆ.ಜೆ. ರಫಾಯಿ, ಸತೀಶ ಬಿ.ಎಸ್, ಸಿದ್ದಲಿಂಗ ಮಲ್ಲೇಶ ವೇದಿಕೆಯಲ್ಲಿದ್ದರು.
ಬೆಳಗಾವಿಯ ಸಜನಾ ವಿಜ್ಞಾನ ಕೇಂದ್ರದ ಸಹ ಸಂಚಾಲಕ ವೈ.ಎಂ. ಸನದಿ, ಚಿಕ್ಕೋಡಿ ಜಿಲ್ಲಾ ವಿಜ್ಞಾನ ಸಮಿತಿ ಕಾರ್ಯದರ್ಶಿ ಜಿ.ಬಿ. ನೇಸರಗಿ, ಉಪಾಧ್ಯಕ್ಷ ಪಿ.ಎ. ಸಿದ್ನಾಳ, ಆರ್.ಎಂ. ದೇಶಪಾಂಡೆ, ಎಲ್.ವಿ. ಕಮತ ಇದ್ದರು.
ಸಜನಾ ವಿಜ್ಞಾನ ಕೇಂದ್ರದ ಸಂಚಾಲಕ ರಾಜಶೇಖರ ಪಾಟೀಲ ನಿರೂಪಿಸಿದರು.

ವಿಜೇತರು: ಭೌತಶಾಸ್ತ್ರ: ಶಿವಲೀಲಾ ಸಂಗನಗೌಡರ, ಬೈಲಹೊಂಗಲ (ಪ್ರಥಮ), ಅಶ್ವಿನಿ ಕುಲಕರ್ಣಿ, ಬಾಗಲಕೋಟ (ದ್ವಿತೀಯ), ರಸಾಯನಶಾಸ್ತ್ರ: ಗೀತಾ ಮಾಳಗಿ, ಬೈಲಹೊಂಗಲ (ಪ್ರಥಮ), ದೀಪಾ ಸರಗಣಾಚಾರಿ, ಬಾಗಲಕೋಟ (ದ್ವಿತೀಯ). ಗಣಿತಶಾಸ್ತ್ರ: ಲಕ್ಷ್ಮೀ ತೋಟಗಿ, ಬೈಲಹೊಂಗಲ (ಪ್ರಥಮ), ಜ್ಞಾನದೇವ ಥರಗರ, ಬೆಳಗಾವಿ (ದ್ವಿತೀಯ). ಜೀವಶಾಸ್ತ್ರ: ಸುಕೃತಾ ಪಟ್ಟಣಶೆಟ್ಟಿ, ಸಿಂದಗಿ (ಪ್ರಥಮ), ಗೋದಾವರಿ ದೀಕ್ಷಿತ, ಬೆಳಗಾವಿ (ದ್ವಿತೀಯ). ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button