ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಸಂಹಿತೆ ಪಾಲಿಸಬೇಕು. ಹಿಜಾಬ್ ಹಾಗೂ ಕೇಸರಿ ಶಾಲುಗಳಿಗೆ ಅವಕಾಶವಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹಿಜಾಬ್ ವಿವಾದ ಹೈಕೋರ್ಟ್ ನಲ್ಲಿದೆ. ಹಾಗಾಗಿ ಹೈಕೋರ್ಟ್ ತೀರ್ಪು ಬರುವವರೆಗೆ ಈಗಿರುವ ಸಮವಸ್ತ್ರ ಸಂಹಿತೆಯನ್ನೇ ಪಾಲಿಸಬೇಕು. ಈ ಕುರಿತು ಸುತ್ತೋಲೆ ಪ್ರಕಟಿಸಿದ್ದೇವೆ ಎಂದರು.
ಹೈಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ಸಿಎಂ ಅಡ್ವಕೇಟ್ ಜನರಲ್ ಜತೆ ಚರ್ಚಿಸಿ ಮಾಹಿತಿ ಪಡೆದಿದ್ದಾರೆ. ಸರ್ಕಾರದ ನಿಲುವನ್ನು ಕೋರ್ಟ್ ಗೆ ತಿಳಿಸುವಂತೆ ಎಜಿಗೆ ಸೂಚಿಸಿದ್ದಾರೆ. ತೀರ್ಪು ಬರುವವರೆಗೂ ಸಮವಸ್ತ್ರ ಸಂಹಿತೆ ಪಾಲಿಸಬೇಕು ಎಂಬುದು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದ್ದೇವೆ. ಮಕ್ಕಳ ವಿದ್ಯಾಭ್ಯಾಸ, ಶಿಕ್ಷಣಕ್ಕೆ ಯಾವುದೇ ರೀತಿ ತೊಂದರೆಯಾಗಬಾರದು. ಶಾಲಾ-ಕಾಲೇಜುಗಳು ಸಹೋದರತ್ವ ಬೆಳೆಸಲು ಪೂರಕವಾಗಬೇಕು ಹೊರತು ಇಂತಹ ವಿಚಾರಗಳ ಬಗ್ಗೆ ಚರ್ಚೆ ಸರಿಯಲ್ಲ ಎಂದು ಹೇಳಿದರು.
ಕರಾವಳಿ ಭಾಗದ ಕಾಲೇಜುಗಳಲ್ಲಿ ಹಿಜಾಬ್ ವಿವಾದ ವಿಚಾರವಾಗಿ ಮಾತನಾಡಿದ ಸಚಿವರು, ಕಾಲೇಜಿಗೆ ಸೇರುವಾಗಲೇ ವಿದ್ಯಾರ್ಥಿಗಳು ವಸ್ತ್ರಸಂಹಿತೆ ಒಪ್ಪಿ ಸಹಿ ಹಾಕಿರುತ್ತಾರೆ. ಕಳೆದ ಒಂದುವರೆ ವರ್ಷದಿಂದ ಸಮವಸ್ತ್ರ ಧರಿಸಿ ಬಂದಿದ್ದಾರೆ. ಇದೀಗ ಜನವರಿಯಿಂದ ಸಮಸ್ಯೆ ಆರಂಭವಾಗಿದೆ. ಇದರ ಹಿಂದೆ ಯಾರದ್ದೋ ಕೈವಾಡವಿದೆ ಎಂದರು.
ಇನ್ನು ಉಡುಪಿ ಶಾಸಕ ರಘುಪತಿ ಭಟ್ ವಿರುದ್ಧ ಅನಗತ್ಯ ಆರೋಪ ಸರಿಯಲ್ಲ. ಅವರು ವಿದ್ಯಾರ್ಥಿಗಳಿಗೆ ಹಲವು ಬಾರಿ ಮನವೊಲಿಸಲು ಯತ್ನಿಸಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಬಾರದು ಎಂದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದಾರೆ. ಅವರು ಎಸ್ ಡಿಎಂಸಿ ಅಧ್ಯಕ್ಷರಾಗಿ ಶಾಲೆ ಅಭಿವೃದ್ಧಿಯನ್ನೂ ಮಾಡಿದ್ದಾರೆ. ಹೀಗಾಗಿ ವಿನಾಕಾರಣ ಆರೋಪ ಬೇಡ. ಹಿರಿಯ ನಾಯಕರು, ಶಾಸಕರು ಎಲ್ಲರೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಶಿಕ್ಷಣ, ಭವಿಷ್ಯದ ಬಗ್ಗೆ ವಿಚಾರ ಮಾಡಬೇಕು ಹಿಜಾಬ್, ಕೇಸರಿ ಶಾಲು ಇಂತಹ ಸಮಸ್ಯೆಗಳಿಗೆ ಅವಕಾಶ ನೀಡಬಾರದು ಎಂದು ತಿಳಿಸಿದರು.
ಮತ್ತೆ ತಾರಕಕ್ಕೇರಿದ ಹಿಜಾಬ್, ಕೇಸರಿ ಶಾಲು ವಿವಾದ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ