Kannada NewsKarnataka NewsLatest

ಮುಖ್ಯಮಂತ್ರಿ ಬೊಮ್ಮಾಯಿಗೆ ಪತ್ರ ಬರೆದ ಬೆಳಗಾವಿ ಪ್ರೊಫೇಶನಲ್ ಫೋರಂ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ನಗರದಿಂದ ಸಾಂಬ್ರಾ ವಿಮಾನ ನಿಲ್ದಾಣ ಸಂಪರ್ಕಿಸುವ ರಸ್ತೆಯನ್ನು ಚತುಷ್ಪತ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಬೇಕೆಂದು ಇಲ್ಲಿಯ ಪ್ರೊಫೇಶನಲ್ ಫೋರಮ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ.
ಫೋರಂ ಅಧ್ಯಕ್ಷ ಡಾ.ಎಚ್.ಬಿ.ರಾಜಶೇಖರ ಮತ್ತು ಪದಾಧಿಕಾರಿಗಳು ಈ ಪತ್ರ ಬರೆದಿದ್ದು, ಪ್ರಸಕ್ತ ಬಜೆಟ್ ನಲ್ಲಿ 50 ಕೋಟಿ ರೂ. ಒದಗಿಸಿ ಈ ವರ್ಷವೇ ಕಾಮಗಾರಿ ಆರಂಭಿಸುವಂತೆ ವಿನಂತಿಸಿದ್ದಾರೆ.
ಪತ್ರದ ಪೂರ್ಣ ವಿವರ ಹೀಗಿದೆ: 
ಬೆಳಗಾವಿ ನಗರವು ಕರ್ನಾಟಕದ ಎರಡನೇಯ ರಾಜಧಾನಿ ಎಂದು ಈಗಾಗಲೇ ಘೋಷಿಸಲ್ಪಟ್ಟಿರುವುದನ್ನು ತಮ್ಮ ಗಮನಕ್ಕೆ ತರಬಯಸುತ್ತಾ, ಇಲ್ಲಿ ರಾಜ್ಯದ ಎರಡನೇ ಶಕ್ತಿ ಕೇಂದ್ರವಾದ ಸುವರ್ಣ ವಿಧಾನ ಸೌಧವನ್ನು ಕೂಡ ಕಟ್ಟಲಾಗಿದೆ. ಪ್ರತಿ ವರ್ಷ ಚಳಿಗಾಲದ ಶಾಸಕಾಂಗದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಅಧಿವೇಶನದಲ್ಲಿ ಭಾಗವಹಿಸಲು ಬರುವಂತಹ ಅನೇಕ ಗಣ್ಯವ್ಯಕ್ತಿಗಳು ಹಾಗೂ ಜನಪ್ರತಿನಿಧಿಗಳು ಸಾಂಬ್ರಾ ವಿಮಾನ ನಿಲ್ದಾಣದಿಂದ ಸುಮಾರು 10 ಕಿ ಮೀ ಅಂತರಗಳನ್ನು ರಾಯಚೂರ ಬಾಚಿ ರಾಹೆ-20 ರ ಮೇಲೆ ಚಲಿಸಿ ರಾಷ್ಟ್ರೀಯ ಹೆದ್ದಾರಿ 4ರ ಮೂಲಕ ಸಂಚರಿಸಿ ಸುವರ್ಣ ವಿಧಾನ ಸೌಧಕ್ಕೆ ತಲುಪಬೇಕಾಗುವುದು.
ಅಲ್ಲದೇ ರಾಷ್ಟ್ರದ ಇತರ ಭಾಗಗಳಿಂದ ಬೆಳಗಾವಿ, ವಿಜಯಪೂರ, ಬಾಗಲಕೋಟ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರ ಸಾಂಗಲಿಗೆ ಬರುವಂತಹ ಗಣ್ಯವ್ಯಕ್ತಿಗಳು ಕೂಡ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಳಗಾವಿ ಮೂಲಕವೇ ಸಂಚರಿಸುತ್ತಾರೆ.
ಸಾಂಬ್ರಾ, ವಿಮಾನ ನಿಲ್ದಾಣವು ಉತ್ತರ ಕರ್ನಾಟಕದ ಎರಡನೇ ಅತಿ ದೊಡ್ಡ ವಿಮಾನ ನಿಲ್ದಾಣವಾಗಿದ್ದು, ಇಲ್ಲಿ ದಿನಾಲು 18 ವಿಮಾನಗಳ ಆಗಮನ ಮತ್ತು ನಿರ್ಗಮನವಾಗುವುದು, ಇದರಿಂದಾಗಿ ವಿಮಾನ ನಿಲ್ದಾಣಕ್ಕೆ ಹೋಗುವ ಮತ್ತು ಬರುವ ವಾಹನಗಳಿಂದ ರಾಹೆ -20 (ರಾಯಚೂರ ಬಾಚಿ) ಅಂದರೆ ಬೆಳಗಾವಿಯಿಂದ ಸಾಂಬ್ರಾವರೆಗಿನ ರಸ್ತೆಯ ಮೇಲೆ ವಿಪರೀತ ವಾಹನ ಸಂಚಾರವು ಉಂಟಾಗುತ್ತಿದೆ.
ಈ ಕಾರಣದಿಂದಾಗಿ ಉಂಟಾಗುವ ವಾಹನ ದಟ್ಟಣೆಯ ಜೊತೆಗೆ ಗೋವಾ ಮತ್ತು ಮಹಾರಾಷ್ಟ್ರ ಹಾಗೂ ಕರ್ನಾಟಕದ ಇತರರ ಭಾಗಗಳಿಂದ ಬಂದು ಬಾಗಲಕೋಟ ವಿಜಯಪೂರದ ಕಡೆಗೆ ಸಂಚರಿಸುವ ವಾಹನಗಳು ಕೂಡ ಇದೇ ರಸ್ತೆಯ ಮೇಲೆ ಸಂಚರಿಸುತ್ತವೆ. ಸಾಂಬ್ರಾದಲ್ಲಿ ಏರಪೋರ್ಟ ಸ್ಟೇಶನದಿಂದ ವಾಯುದಳದ ತರಬೇತಿ ಸಂಸ್ಥೆ ಇರುತ್ತದೆ, ಅಲ್ಲದೇ ಈ ಮೇಲಿನ ವಾಹನಗಳ ಜೊತೆಯಲ್ಲಿ ಸ್ಥಳೀಯ ವಾಹನಗಳು ಕೂಡ ಸೇರಿಕೊಂಡು ವಿಪರೀತ ವಾಹನ ಸಾಂದ್ರತೆಯಿಂದಾಗಿ ವಾಹನ ಸಂಚಾರದಲ್ಲಿ ಅನೇಕ ಅಡಚಣೆಗಳು ಉಂಟಾಗುತ್ತಿದೆ.
ವಾಹನ ಸಂಚಾರವು ಅತೀ ನಿಧಾನವಾಗಿರುತ್ತದೆ. ಸಧ್ಯ ಈ ರಸ್ತೆಯ ಮೇಲೆ ವಾಹನ ಗಣತಿ 2020ರ ಪ್ರಕಾರ 28, 104 ಪಿ.ಸಿ.ಯು ವಾಹನಗಳು ಸಂಚರಿಸುತ್ತಿದ್ದು, ಇದು ಚತುಸ್ಪಥ ರಸ್ತೆಗೆ ಅವಶ್ಯಕವಾಗಿ ಬೇಕಾಗಿರುವಂತಹ 20,000 ಪಿ.ಸಿ.ಯು ಗಳಿಗಿಂತ ಅಧಿಕವಾಗಿದೆ. ಆದ್ದರಿಂದ ಈ 10.ಕಿ.ಮೀ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುವದು ಅತಿ ಅವಶ್ಯವಾಗಿರುತ್ತದೆ.
ಈ ಕಾಮಗಾರಿಯನ್ನು ಕೈಗೊಳ್ಳಲು ಬೇಕಾಗುವ ಹೆಚ್ಚಿನ ಭೂಮಿಯ ಭಾಗವು ಈಗಾಗಲೇ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿ ಇರುತ್ತದೆ. ಅದರಿಂದ ರಸ್ತೆಯನ್ನು ಚತುಷ್ಪತಗೊಳಿಸಲು ಕೇವಲ ರಸ್ತೆಯ ನಿರ್ಮಾಣಕ್ಕಾಗಿ ಅನುದಾನವನ್ನು ಒದಗಿಸಿದ್ದಲ್ಲಿ ಲೋಕೋಪಯೋಗಿ ಇಲಾಖೆಯಿಂದಲೇ ಈ ರಸ್ತೆಯ ಅಭಿವೃದ್ಧಿಯನ್ನು ಕೈಗೊಳ್ಳಬಹುದಾಗಿದೆ
ಈ ರಸ್ತೆಯ ಅಗಲೀಕರಣ ಕಾಮಗಾರಿಯು ವಿಮಾನ ನಿಲ್ದಾಣ ಸಂಪರ್ಕಿಸುವ ಸಂಚಾರವನ್ನು ಸರಳ ಮತ್ತು ಶೀಘ್ರಗೊಳಿಸುವದರೊಂದಿಗೆ ಅಧಿವೇಶನ ಅವಧಿಯಲ್ಲಿ ಬರುವ ಗಣ್ಯ ಮಾನ್ಯ ವ್ಯಕ್ತಿಗಳ ಸಂಚಾರವು ಸುಗಮ ಮತ್ತು ಸುರಕ್ಷಿತಗೊಳಿಸಿದಂತಾಗುತ್ತದೆ. ಅಲ್ಲದೇ ಬೆಳಗಾವಿ ನಗರವು ಕೃಷಿ, ಕೈಗಾರಿಕಾ, ಶೈಕ್ಷಣಿಕ, ಸಾಂಸ್ಕೃತಿಕ, ಹಾಗೂ ರಕ್ಷಣಾ ಮತ್ತು ವೈದ್ಯಕೀಯ ಹಾಗೂ ಸಾಮಾಜಿಕ ದೃಷ್ಟಯಿಂದ ಉತ್ತರ ಕರ್ನಾಟಕದ ಮಹಾರಾಷ್ಟ್ರ ಮತ್ತು ಗೋವಾ ಗಡಿಯಲ್ಲಿಯ ಮಹತ್ವದ ನಗರವಾಗಿದ್ದು, ಈ ರಸ್ತೆಯ ನಿರ್ಮಾಣದಿಂದ ನಗರದ ಮತ್ತು ಸುತ್ತಮುತ್ತಲಿನ ಭೂಭಾಗದ ಸರ್ವೋನ್ಮುಕ ಅಭಿವೃದ್ಧಿಗೆ ಪೂರಕವಾಗುವದು ಎಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ.
ಈಗೀನ ಅತೀಯಾದ ವಾಹನ ಸಾಂದ್ರತೆಯಿಂದಾಗಿ ಅನೇಕ ಅಪಘಾತಗಳು ಸಂಭವಿಸುತ್ತಿದ್ದು, ಈ 10 ಕಿ.ಮೀ ರಸ್ತೆಯನ್ನು ಸಂಚರಿಸಲು ಸುಮಾರು ಅರ್ಧ ಘಂಟೆಗಳ ಕಾಲಾವಕಾಶ ಬೇಕಾಗುವದು. ಅಲ್ಲದೇ ಈ ಭಾಗದ ಕೃಷಿ, ಔದ್ಯೋಗಿಕ, ಶೈಕ್ಷಣಿಕ ಹಾಗೂ ಇನ್ನಿತರ ಕ್ಷೇತ್ರಗಳ ಅಭಿವೃದ್ಧಿಗಳು ಕೂಡ ಕುಂಠಿತಗೊಂಡಿದೆ. ಆದ್ದರಿಂದ ಈ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗಳು ಕೂಡ ಕುಂಠಿತಗೊಂಡಿದೆ. ಆದ್ದರಿಂದ ಈ ಎಲ್ಲ ಕ್ಷೇತ್ರಗಳ ಶೀಘ್ರ ಅಭಿವೃದ್ಧಿಗಾಗಿ ಮತ್ತು ಸುಗಮ ವಾಹನ ಸಂಚಾರಕ್ಕಾಗಿ ಈ ರಸ್ತೆಯನ್ನು ಚತುಷ್ಪತ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸುವತ್ತ ಈ ವರ್ಷದ ಆಯವ್ಯಯದಲ್ಲಿ ರೂ. 100 ಕೋಟಿ ಅಂದಾಜುದೊಂದಿಗೆ ರೂ. 50 ಕೋಟಿಗಳ ಅನುದಾನವನ್ನು ಒದಗಿಸಿ ಕಾಮಗಾರಿಯನ್ನು ಪ್ರಸಕ್ತ ವರ್ಷದಲ್ಲಿ ಕೈಗೆತ್ತಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳುವಂತೆ ತಮ್ಮಲ್ಲಿ ಬೆಳಗಾವಿ ನಾಗರೀಕರ, ಸಂಘ ಸಂಸ್ಥೆಗಳ ಮತ್ತು ಇನ್ ಸ್ಟಿಟ್ಯೂಟ್ ಆಫ್ ಇಂಜಿನೀಯರ್ಸ್ ಮತ್ತು ಪ್ರೊಫೇಶನಲ್ ಫೋರಂ ಬೆಳಗಾವಿ ಇವರ ವತಿಯಿಂದ ವಿನಂತಿಸಲಾಗಿದೆ.

 

ಇಲ್ಲಿದೆ ಪತ್ರ –  Request Letter

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button