ಪ್ರಗತಿವಾಹಿನಿ ಸುದ್ದಿ, ನವದೆಹಲಿ – ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗಿನಿಂದ ಇಂದಿನವರೆಗೂ ಕಾಶ್ಮೀರದ ವಿಚಾರ ಜ್ವಲಂತ ಸಮಸ್ಯೆಯಾಗಿ ಕಾಡುತ್ತಲೇ ಇದೆ. ಸಾವಿರಾರು ಯೋಧರು ಕಾಶ್ಮೀರವನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ಪ್ರಾಣ ತೆತ್ತು ಹುತಾತ್ಮರಾಗಿದ್ದಾರೆ.
ಆದರೆ ಭಾರತದಲ್ಲಿ ತಮ್ಮ ಶಾಖೆ ತೆರೆದು ದುಡ್ಡು ಮಾಡುವ ಕೆಲ ವಿದೇಶಿ ಕಂಪನಿಗಳು ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನದ ಪರವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಹೇಳಿಕೆ ನೀಡುತ್ತ ತಮಗೆ ನೀಡಿದ ಸ್ವಾತಂತ್ರ್ಯದ ಮಿತಿಯನ್ನು ಮೀರುತ್ತಿವೆ. ಭಾರತದ ಐಕ್ಯತೆಗೆ, ಯೋಧರ ಬಲಿದಾನಕ್ಕೆ ಅಪಹಾಸ್ಯ ಮಾಡುತ್ತಿರುವ ಇಂಥಹ ಕಂಪನಿಗಳು ಭಾರತದಲ್ಲಿ ವ್ಯವಹಾರ ನಡೆಸಲು ಅವಕಾಶ ಕೊಡಬೇಕೆ ?
ಇಂಥಹ ಕಂಪನಿಗಳನ್ನು ಭಾರತದಿಂದ ಓಡಿಸಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಪ್ರಾರಂಭವಾಗಿದೆ.
ಹುಂಡೈ ಆಯ್ತು ಈಗ ಕೆಎಫ್‌ಸಿ ಸರದಿ
ಫೆ. ೫ರಂದು ಕೆಎಫ್‌ಸಿ (ಕೆಂಟಕಿ ಫ್ರೈಡ್ ಚಿಕನ್) ಪಾಕಿಸ್ತಾನ ಹ್ಯಾಂಡಲ್‌ನಿಂದ ಫೇಸ್ ಬುಕ್‌ನಲ್ಲಿ ಮಾಡಲಾದ ಪೋಸ್ಟ್ ಒಂದು ಅಕ್ಷರಶಃ ಭಾರತೀಯರ ರಕ್ತ ಕುದಿಸಿದೆ. ಕಾಶ್ಮೀರ ಎಂದಿಗೂ ಕಾಶ್ಮೀರಿಗಳಿಗೆ ಸೇರಿದ್ದು ( Kashmir belongs to kashmiris ) ಎಂದು ದಪ್ಪ ಅಕ್ಷರಗಳಲ್ಲಿ ಬರೆಯಲಾದ ಈ ಪೋಸ್ಟ್ ನಲ್ಲಿ ಮೇಲ್ಭಾಗದಲ್ಲಿ ನಾವು ನಮ್ಮ ಆಲೋಚನೆಗಳನ್ನು ಎಂದೂ ದೂರ ಮಾಡುವುದಿಲ್ಲ, ಮುಂದಿನ ದಿನಗಳಲ್ಲಿ ಕಾಶ್ಮೀರದಲ್ಲಿ ಶಾಂತಿ ನೆಲೆಸುವ ಭರವಸೆ ಇದೆ ಎಂದೂ ಬರೆಯಲಾಗಿದೆ.
ಕೆಎಫ್‌ಸಿಯ ಈ ಪೋಸ್ಟ್ ಬಗ್ಗೆ ಟ್ವಿಟರ್‌ನಲ್ಲಿ ಭಾರತೀಯರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತೀಯರಿಂದ ಅಸಮಧಾನ ವ್ಯಕ್ತವಾಗುತ್ತಿದ್ದಂತೆ ಪಾಕ್‌ನ ಕೆಎಫ್‌ಸಿ ಪೋಸ್ಟನ್ನು ಅಳಿಸಿದೆ. ಆದರೆ ಅಷ್ಟರೊಳಗೇ ಸ್ಕ್ರೀನ್ ಶಾಟ್ ತೆಗೆದಿರುವ ನೆಟ್ಟಿಗರು ಅದರ ಸಮೇತ ಆಕ್ರೋಶವನ್ನು ಹೊರ ಹಾಕಿ ಕೆಎಫ್‌ಸಿಯ ಚಳಿ ಬಿಡಿಸುತ್ತಿದ್ದಾರೆ.
ಇಂಥಹ ಕಂಪನಿಗಳಿಗೆ ಭಾರತದಲ್ಲಿ ವ್ಯಾಪಾರ ಮಾಡಲು ಏಕೆ ಅವಕಾಶ ಕೊಡುತ್ತೀರಿ, ಇವರ ಅಂಗಡಿಗಳನ್ನು ಬಂದ್ ಮಾಡಿ ದೇಶದಿಂದ ಹೊರ ಹಾಕಿ ಎಂದು ಟ್ವಿಟರ್‌ನಲ್ಲಿ ಅಭಿಯಾನ ಪ್ರಾರಂಭಗೊಂಡಿದೆ.
ಇದೇ ಮೊದಲಲ್ಲ, ಕಳೆದ ವರ್ಷವೂ ಫೆ. ೫ರಂದು ಕೆಎಫ್‌ಸಿಯ ಪಾಕಿಸ್ತಾನ ಹ್ಯಾಂಡಲ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಇದೇ ರೀತಿ ಕಾಶ್ಮೀರದ ವಿಚಾರದಲ್ಲಿ ಪಾಕ್ ಪರ ಧೋರಣೆಯ ಮೆಸೇಜ್ ಹಾಕಲಾಗಿತ್ತು ಎಂದು ನೆಟ್ಟಿಗರು ಆರೋಪಿಸಿದ್ದಾರೆ.
ಹುಂಡೈ ಕೂಡ ಹೀಗೆಯೇ ವರ್ತಿಸಿದೆ.
ಇನ್ನು ಪ್ರಸಿದ್ಧ ಕಾರ್ ತಯಾರಿಕಾ ಕಂಪನಿ ದಕ್ಷಿಣ ಕೋರಿಯಾದ ಹುಂಡೈ ಕೂಡ ಕಾಶ್ಮೀರದ ವಿಚಾರದಲ್ಲಿ ಪಾಕ್ ಬೆನ್ನು ತಟ್ಟಿದೆ. ಫೆ. ೫ರಂದು ಹುಂಡೈನ ಪಾಕಿಸ್ತಾನ ಶಾಖೆ ಕಾಶ್ಮೀರದ ಸಹೋದರರ ಬಲಿದಾನದ ದಿನ ಎಂದು ಮೆಸೇಜ್ ಹಾಕಿದೆ. ನೆಟ್ಟಿಗರು ಹುಂಡೈ ವಿರುದ್ಧ ಸಹ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಮಾದದ ಬಳಿಕ ಕ್ಷಮೆ ಕೋರುವ ನಾಟಕ
ವಿದೇಶಿ ಕಂಪನಿಗಳಿಗೆ ಭಾರತದಷ್ಟು ಸುರಕ್ಷಿತ ಮತ್ತು ಬೃಹತ್ ಮಾರುಕಟ್ಟೆ ಪಾಕಿಸ್ತಾನ ಸೇರಿದಂತೆ ವಿಶ್ವದ ಯಾವ ರಾಷ್ಟ್ರದಲ್ಲೂ ಸಿಗುವುದಿಲ್ಲ. ಭಾರತದಲ್ಲಿ ವಹಿವಾಟು ಮಾಡುತ್ತ ಹೇರಳವಾಗಿ ಹಣ ಗಳಿಸುತ್ತವೆ. ಆದರೆ ಕೆಲ ಕಂಪನಿಗಳು ಪಾಕ್ ಪರ ನಿಲುವು ತಳೆಯುವುದು ವಿದೇಶಿ ಕಂಪನಿಗಳ ದ್ವಂದ್ವ ನೀತಿಗೆ ಸಾಕ್ಷಿಯಾಗಿದೆ.
ಇನ್ನು ಹೀಗೆ ಸಾಮಾಜಿಕ ಜಾಲ ತಾಣಗಳಲ್ಲಿ ಪಾಕ್ ಪರ ಸಂದೇಶಗಳನ್ನು ಹಾಕಿ ಬಳಿಕ ಕ್ಷಮೆ ಕೋರುವ ಚಾಳಿ ಇಂಥಹ ಕಂಪನಿಗಳಿಗಿದೆ. ಪ್ರಸ್ತುತ ಕೆಎಫ್‌ಸಿ ಮತ್ತು ಹುಂಡೈ ಸಹ ಆಗಿರುವ ಪ್ರಮಾದದ ಬಗ್ಗೆ ಕ್ಷಮೆ ಕೋರಿವೆ. ನಾವು ಭಾರತದ ಐಕ್ಯತೆಯನ್ನು ಗೌರವಿಸುತ್ತೇವೆ. ಭಾರತ ಹುಂಡೈಗೆ ಎರಡನೇ ತವರು ಎಂದು ಹುಂಡೈ ಸಮಜಾಯಿಶಿ ನೀಡಿದೆ. ಇನ್ನು ಕೆಎಫ್‌ಸಿ ಸಹ ಇದೇ ರೀತಿಯಲ್ಲಿ ಕ್ಷಮೆ ಕೋರಿ ಮೆಸೇಜ್ ಹಾಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ