ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ರಾಷ್ಟ್ರಾದ್ಯಂತ ನಡೆಯುತ್ತಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳು ಜೋರಾಗಿ ನಡೆಯುತ್ತಿದೆ. ಚುನಾವಣೆ ಆಯೋಗ ಇದಕ್ಕಾಗಿ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದೆ.
ಇದರ ಜೊತೆಗೇ ಅಲ್ಲಲ್ಲಿ ಜನರು, ಸಂಘಸಂಸ್ಥೆಗಳು ತಮ್ಮದೇ ರೀತಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಕೈಯಿಂದ ಹಣಹಾಕಿ ಪ್ರಚಾರ ಮಾಡುತ್ತಿರುವವರೂ ಸಾಕಷ್ಟಿದ್ದಾರೆ.
ಬೆಳಗಾವಿಯಲ್ಲಿ ಕಳೆದ ವಿಧಾನಸಭೆ ಚುನಾವಣೆ ವೇಳೆಗೆ ಶುರುವಾದ ಬೆಳಗಾವಿ ವೋಟ್ಸ್ 100% ಎನ್ನುವ ಅಭಿಯಾನ ಈ ಬಾರಿಯೂ ಜೋರಾಗಿಯೇ ಮುಂದುವರಿದಿದೆ. ವಾಕಥಾನ್, ಬೈಕ್ ರ್ಯಾಲಿ, ಸೈಕಲ್ ರ್ಯಾಲಿ, ಬೀದಿ ನಾಟಕ ಮೊದಲಾದವುಗಳ ಮೂಲಕ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ.
ಇದರೊಂದಿಗೆ ಬೆಳಗಾವಿ ಉದ್ಯಮಿ ದಿಲೀಪ ಚಿಂಡಕ ಹೊಸ ಮಾದರಿಯಲ್ಲಿ ಮತದಾನ ಜಾಗೃತಿ ಮಾಡುತ್ತಿದ್ದಾರೆ. ಅವರು ವೆಗಾ ಹೆಲ್ಮೆಟ್ ಎನ್ನುವ ಅಂತಾರಾಷ್ಟ್ರೀಯ ಮಟ್ಟದ ಹೆಲ್ಮೆಟ್ ಉತ್ಪಾದನಾ ಕಂಪನಿ ನಡೆಸುತ್ತಿದ್ದಾರೆ.
ಕಳೆದ 15 ದಿನದಿಂದ ತಮ್ಮ ಸಂಸ್ಥೆಯಲ್ಲಿ ತಯಾರಾಗುವ ಹೆಲ್ಮೆಟ್ ಮೇಲೆ ಮತ್ತು ಹೆಲ್ಮೆಟ್ ಬಾಕ್ಸ್ ಮೇಲೆ `ವೋಟ್ ಫಾರ್ ಬೆಟರ್ ಇಂಡಿಯಾ'
ಎನ್ನುವ ಸಂದೇಶ ಮುದ್ರಿಸುತ್ತಿದ್ದಾರೆ.
ವೆಗಾ ಕಂಪನಿಯಲ್ಲಿ ಪ್ರತಿದಿನ ಸುಮಾರು 12 ಸಾವಿರ ಹೆಲ್ಮೆಟ್ ಉತ್ಪಾದನೆಯಾಗುತ್ತಿದ್ದು, ಅವುಗಳಲ್ಲಿ ನಿತ್ಯವೂ 6 ಸಾವಿರ ಹೆಲ್ಮೆಟ್ ಮೇಲೆ ಮತದಾನದ ಸಂದೇಶ ಹಾಕಲಾಗುತ್ತಿದೆ. ಕೆಲವು ಗ್ರಾಹಕರು ತಮಗೆ ಅಂತಹ ಸಂದೇಶ ಇರುವ ಹೆಲ್ಮೆಟ್ ಬೇಡ ಎಂದಲ್ಲಿ ಮಾತ್ರ ಅವರಿಗೆ ಸಂದೇಶವಿಲ್ಲದ ಹೆಲ್ಮೆಟ್ ನೀಡಲಾಗುತ್ತದೆ. ಆದರೆ ಪ್ರತಿಯೊಂದು ಬಾಕ್ಸ್ ಮೇಲೆ ಕಡ್ಡಾಯವಾಗಿ ಸಂದೇಶ ಮುದ್ರಿಸಲಾಗುತ್ತಿದೆ. ತನ್ಮೂಲಕ ದೇಶಾದ್ಯಂತ ಮತದಾನ ಜಾಗೃತಿ ಸಂದೇಶ ರವಾನಿಸುತ್ತಿದ್ದಾರೆ.
ಮನಸ್ಸಿದ್ದಲ್ಲಿ ಮಾರ್ಗ ಎನ್ನುವಂತೆ ಈ ರೀತಿಯಲ್ಲೂ ಮತದಾನ ಜಾಗೃತಿ ಮಾಡಬಹುದೆನ್ನುವುದನ್ನು ಚಿಂಡಕ್ ತೋರಿಸಿಕೊಟ್ಟಿದ್ದಾರೆ.
ಸ್ವಯಂ ಪ್ರೇರಣೆಯಿಂದ ನಾನು ಈ ರೀತಿಯ ಸಂದೇಶವನ್ನು ಹಾಕುತ್ತಿದ್ದೇನೆ. ಇದಕ್ಕಾಗಿ ಯಾವುದೇ ಶುಲ್ಕ ಪಡೆಯುತ್ತಿಲ್ಲ. ರಾಷ್ಟ್ರಾದ್ಯಂತ ಹೆಲ್ಮೆಟ್ ಮೂಲಕ ಮತದಾನದ ಸಂದೇಶ ಕಳುಹಿಸಲಾಗುತ್ತಿದೆ.
-ದಿಲೀಪ ಚಿಂಡಕ್
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ ಹಾಗೂ ನಿಮ್ಮ ಪರಿಚಿತರಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ