
ಕೆಪಿಎಸ್ ಶಾಲೆಗಳಿಗೆ ಶಾಲಾಭಿವೃದ್ಧಿ ಸಮೀತಿ
ಕೆಪಿಎಸ್ ಶಾಲೆಗಳಿಗೆ 2 ಕೋಟಿ ರೂ. ಅನುದಾನ ಲಭ್ಯವಾಗುತ್ತಿದ್ದಂತೆ ಪೋಷಕ ಪ್ರತಿನಿಧಿಗಳನ್ನು ಹೊರತುಪಡಿಸಿ ಶಾಸಕರನ್ನು ಶಾಲಾಭಿವೃದ್ಧಿ ಸಮೀತಿಯ ಅಧ್ಯಕ್ಷರನ್ನಾಗಿಸಿ ಸರಕಾರ ಆದೇಶ ನೀಡಿರುವುದಕ್ಕೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಹಣ ಬಂದಕೂಡಲೇ ಜನಪ್ರತಿನಿಧಿಗಳ ಕಣ್ಣು ಕುಕ್ಕುತ್ತದೆ ಎಂದು ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ.
ಈ ಕುರಿತು ಕಾರವಾರದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ನೀಡಿರುವ ಪತ್ರಿಕಾ ಪ್ರಕಟಣೆ ಇಲ್ಲಿದೆ –
ಪೂರ್ವ ಪ್ರಾಥಮಿಕದಿಂದ ೧೨ ನೇ ತರಗತಿಯವರೆಗೆ ಗುಣಾತ್ಮಕ ಶಿಕ್ಷಣ ಒದಗಿಸಲು ಪ್ರಾರಂಭಿಸಿರುವ ಕೆ ಪಿ ಎಸ್ ಶಾಲೆಗಳಲ್ಲಿ ಈ ಹಿಂದೆ ಶಿಕ್ಷಣ ಹಕ್ಕು ಕಾಯಿದೆ ಹಾಗು ನಿಯಮಗಳ ಅನ್ವಯ ಪಾಲಕರಿಂದ ಆಯ್ಕೆಯಾದ ಪೋಷಕ ಪ್ರತಿನಿಧಿಯೊಬ್ಬರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವಂತೆ
೨೬ .೧೦.೨೦೨೧ ರಂದು ಹೊರಡಿಸಿದ ಸರಕಾರೀ ಆದೇಶದಲ್ಲಿ ತಿಳಿಸಲಾಗಿತ್ತು .
ಇದು ಕಾಯಿದೆ , ನಿಯಮ ಮತ್ತು ಸುತ್ತೋಲೆಗಳ ಅನ್ವಯ ಸರಿಯಾದ ಕ್ರಮಬದ್ಧ ತೀರ್ಮಾನವಾಗಿತ್ತು. ಇದರ ಜೊತೆಗೆ ಕ್ಷೇತ್ರದ ಶಾಸಕರು ಸಮಿತಿಯಲ್ಲಿ ಗೌರವಾಧ್ಯಕ್ಷರಾಗಿ ಇರುವಂತೆ ತಿಳಿಸಲಾಗಿತ್ತು .
ಇದಾದ ನಂತರ ಪ್ರತೀ ಕೆ ಪಿ ಎಸ್ ಶಾಲೆಗಳಿಗೆ ಅಭಿವೃದ್ಧಿಗಾಗಿ ೨ ಕೋಟಿ ಹಣ ಮಂಜೂರಾದ ಸುದ್ದಿ ಕೇಳಿದಾಕ್ಷಣ ಶಾಸಕರು ತಮ್ಮ ಅಧಿಕಾರ ದುರಪಯೋಗಪಡಿಸಿಕೊಂಡು ಸರಕಾರದ ಮೇಲೆ ಒತ್ತಡ ಹಾಕಿ ಹಿಂದಿನ ಕ್ರಮಬದ್ಧ ತೀರ್ಮಾನವನ್ನು ಅಸಿಂಧುಗೊಳಿಸಿ ಶಾಸಕರೇ ಅಧ್ಯಕ್ಷರಾಗಬೇಕೆಂಬ ತಿದ್ದುಪಡಿ ಆದೇಶವನ್ನು ದಿನಾಂಕ ೩೧.೦೧.೨೦೨೨ ರಂದು ಸರಕಾರ ಹೊರಡಿಸುವಂತೆ ಮಾಡಿದ್ದಾರೆ .
ಇದು ಅತ್ಯಂತ ಖಂಡನೀಯ . ಕಾನೂನಿನ ಅನ್ವಯ ಪೋಷಕರು ಅಧ್ಯಕ್ಷರಾಗ ಬೇಕಾದ ಜಾಗದಲ್ಲಿ ಕಾನೂನು ಬಾಹಿರವಾಗಿ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಕೇವಲ ಅಲ್ಲಿರುವ ಹಣವನ್ನು ದುರಪಯೋಗಪಡಿಸಿಕೊಂಡು ಹಣ ಮಾಡುವ ಉದ್ದೇಶವಾಗಿದೆ. ಶಾಸಕರನ್ನು ಶಾಲೆಯಲ್ಲಿ ಅಧ್ಯಕ್ಷರನ್ನಾಗಿ ಕೂರಿಸುವ ಈ ಧಿಡೀರ್ ಆದೇಶ ಭ್ರಷ್ಟಾಚಾರಕ್ಕೆ ದಾರಿಮಾಡಿ , ಪಕ್ಷ ರಾಜಕಾರಣಕ್ಕೆ ಎಡೆಮಾಡಿಕೊಟ್ಟು ,ಎಸ್ ಡಿ ಎಂ ಸಿ ಗಳ ರಚನೆಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡುತ್ತದೆ. ಶಾಸಕರ ಹಿಂಬಾಗಿಲನ ಈ ಪ್ರವೇಶ ಸಮುದಾಯದ, ಪೋಷಕರ ಸಹಭಾಗಿತ್ವವನ್ನು ನೆಪಮಾತ್ರ ಹಾಗು ನಾಮಕಾವಸ್ತೆಯಾಗಿಸುತ್ತದೆ . ಹಣ ಬರುವಕಡೆಗೆಲ್ಲಾ ರಾಜಕಾರಣಿಗಳು ಇರಬೇಕೆಂದು ಆದೇಶವನ್ನು ಮಾಡುವುದೇ. ದುರುದ್ದೇಶದ ಲಾಭಕ್ಕಾಗಿ ಎಂದು ಹಿಂದಿನ ಅನುಭವಗಳು ಮನವರಿಕೆ ಮಾಡಿವೆ .
ಪ್ರತಿಭಟಿಸಬೇಕಾದ ಮುಗ್ದ ಪೋಷಕರು ಶಾಸಕರಿಗೆ ಹೆದರಿ ತಮ್ಮ ಹಕ್ಕನ್ನು ಕಸಿದರೂ ಪ್ರತಿಭಟಿಸಲಾಗದೆ ಅಸಹಾಯಕರಾಗಿದ್ದಾರೆ. ಸರಕಾರ ಮೊದಲಿದ್ದಂತೆ ಆಯಾ ಶಾಲೆಯ ಪೋಷಕ ಪ್ರತಿನಿಧಿಗಳೇ ಕೆಪಿಎಸ್ ಶಾಲಾಭಿವೃದ್ಧಿ ಸಮೀತಿಗಳ ಅಧ್ಯಕ್ಷರಾಗಿಸಬೇಕು.
“ಈ ಕಾನೂನು ಬಾಹಿರ ಆದೇಶವನ್ನು ಕೂಡಲೇ ಹಿಂದಕ್ಕೆ ಪಡೆದು ೨೬.೧೦.೨೦೨೧ ರ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸಬೇಕೆಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಸರಕಾರವನ್ನು ಆಗ್ರಪಡಿಸುತ್ತದೆ”
—ಶಾಂತಿ ಎಮ್ ಮುಂಡರಗಿ
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಕಾರವಾರ ಜಿಲ್ಲೆ