Belagavi NewsBelgaum NewsEducationKarnataka NewsLatest

*ಖಾನಾಪುರದ ಕೆ.ಎಲ್.ಇ ಬಿ.ಸಿ.ಎ ಕಾಲೇಜಿನ 80 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ: ಪ್ರಾ.ಆನಂದ ತಾಂವಶಿ*

ಪ್ರಗತಿವಾಹಿನಿ ಸುದ್ದಿ: “ಪಟ್ಟಣದ ಕೆ.ಎಲ್.ಇ ಸಂಸ್ಥೆಯ ಬಿ.ಸಿ.ಎ ಕಾಲೇಜಿನಲ್ಲಿ ಬಿ.ಸಿ.ಎ ಅಂತಿಮ ಸೆಮಿಸ್ಟರ್ ಓದುತ್ತಿರುವ 80 ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಭಾಗವಹಿಸಿ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ನಿರ್ವಹಿಸಲು ಆಯ್ಕೆಗೊಂಡಿದ್ದಾರೆ” ಎಂದು ಕಾಲೇಜಿನ ಪ್ರಾಂಶುಪಾಲ ಆನಂದ ತಾವಂಶಿ ಹೇಳಿದರು.

ಪಟ್ಟಣದ ಕೆ.ಎಲ್.ಇ ಬಿ.ಸಿ.ಎ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಿಮ ಸೆಮಿಸ್ಟರ್ ಬಿ.ಸಿ.ಎ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಕ್ಯಾಂಪಸ್ ಸಂದರ್ಶನದಲ್ಲಿ ಭಾಗವಹಿಸಿದ್ದ ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳು ವಾರ್ಷಿಕ ಕನಿಷ್ಠ 4 ಲಕ್ಷದಿಂದ ಗರಿಷ್ಠ 7 ಲಕ್ಷದವರೆಗೆ ಪ್ಯಾಕೇಜ್ ಘೋಷಿಸಿ ನೇಮಕಾತಿ ಮಾಡಿಕೊಂಡಿವೆ. ಇದು ಕಾಲೇಜಿನ ಪಾಲಿಗೆ ಸಂತಸದ ಸಂಗತಿ” ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತ ಪ್ರಸನ್ನ ಕುಲಕರ್ಣಿ ಮಾತನಾಡಿ, “ತಾಲ್ಲೂಕಿನ ಗ್ರಾಮೀಣ ಭಾಗದ ಮತ್ತು ಕೃಷಿ ಕುಟುಂಬದಿಂದ ಬಂದ ವಿದ್ಯಾರ್ಥಿಗಳು ಅಂತಿಮ ವರ್ಷದ ಪದವಿ ಓದುವ ಸಂದರ್ಭದಲ್ಲೇ ಕೈತುಂಬ ಸಂಬಳ ನೀಡುವ ಕೆಲಸ ಪಡೆದು ವೃತ್ತಿ ಜೀವನಕ್ಕೆ ಕಾಲಿಡುತ್ತಿರುವುದು ಉತ್ತಮ ಬೆಳವಣಿಗೆ. ಚಿಕ್ಕ ವಯಸ್ಸಿನಲ್ಲಿ ಕೆಲಸ ಪಡೆದ ವಿದ್ಯಾರ್ಥಿಗಳು ತಾವು ಪಡೆದ ಕೆಲಸವನ್ನು ಶೃದ್ಧೆಯಿಂದ ಮಾಡಬೇಕು. ನಿಷ್ಠೆಯಿಂದ ಕೆಲಸ ನಿರ್ವಹಿಸಿ ತಾವು ಕಲಿತ ಕಾಲೇಜಿಗೆ, ಶಿಕ್ಷಕರಿಗೆ, ಊರಿಗೆ ಮತ್ತು ಹೆತ್ತವರಿಗೆ ಕೀರ್ತಿ ತರಬೇಕು” ಎಂದು ಕರೆ ನೀಡಿದರು.

Home add -Advt

ಕಾರ್ಯಕ್ರಮದ ಅಂಗವಾಗಿ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಕಾಲೇಜಿನ ವತಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪಾಲಕರು ತಮ್ಮ ಮಕ್ಕಳ ಭವಿಷ್ಯ ರೂಪಿಸಿದ ಕಾಲೇಜಿನ ಪ್ರಾಚಾರ್ಯರು ಮತ್ತು ಉಪನ್ಯಾಸಕರ ಕಾರ್ಯವೈಖರಿಗೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯೆ ರೂಪಾ ಕುಲಕರ್ಣಿ, ಉಪನ್ಯಾಸಕರಾದ ಶಿವಾಲಿ ಪುಠಾಣಿ, ಗಾಯತ್ರಿ ಪತ್ರಿ,. ತೇಜಶ್ರೀ ಪಾಟೀಲ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ, ಪಾಲಕರು, ವಿದ್ಯಾರ್ಥಿಗಳು ಇದ್ದರು. ಸ್ಟೇಲಾ ಫರ್ನಾಂಡಿಸ್ ಕಾರ್ಯಕ್ರಮ ನಿರ್ವಹಿಸಿದರು.

Related Articles

Back to top button