Belagavi NewsBelgaum NewsEducationKannada NewsKarnataka NewsLatest

*ಬೆಳಗಾವಿಯ ‘ಪ್ರಯತ್ನ’ ಸಂಘಟನೆಯಿಂದ ಖಾನಾಪುರದ ಸರ್ಕಾರಿ ಪಿಯು ಕಾಲೇಜಿಗೆ 39 ಡೆಸ್ಕ್ ದೇಣಿಗೆ*

ಪ್ರಗತಿವಾಹಿನಿ ಸುದ್ದಿ: “ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಬೆಳಗಾವಿಯ ‘ಪ್ರಯತ್ನ’ ಸಂಘಟನೆಯಿಂದ ಒಟ್ಟು 39 ಡೆಸ್ಕ್ ಗಳನ್ನು ದೇಣಿಗೆ ರೂಪದಲ್ಲಿ ನೀಡಲಾಗಿದ್ದು, ಕಾಲೇಜಿನಲ್ಲಿ ಡೆಸ್ಕ್ ಗಳ ಕೊರತೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡ ಸಂಘಟನೆ ಈ ಸಾಮಾಜಿಕ ಕಾರ್ಯಕ್ಕೆ ಮುಂದಾಗಿದೆ” ಎಂದು ಪ್ರಯತ್ನ ಸಂಘಟನೆಯ ಅಧ್ಯಕ್ಷೆ ಶಾಂತಾ ಆಚಾರ್ಯ ಅಭಿಪ್ರಾಯ ಪಟ್ಟರು.

ಪಟ್ಟಣದ ಪಿಯು ಕಾಲೇಜು ಸಭಾಗೃಹದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡೆಸ್ಕ್ ಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು, “ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆಯೂ ಆಸಕ್ತಿ ಹೊಂದಬೇಕು. ಗಾಯನ, ನೃತ್ಯ, ಚಿತ್ರಕಲೆ, ಕ್ರೀಡೆ, ಸಾಹಿತ್ಯ, ಸಂಗೀತ, ಭಾಷಣ, ನಾಟಕ ಮತ್ತಿತರ ತಮ್ಮಿಷ್ಟದ ಮತ್ತು ತಮ್ಮಲ್ಲಿ ಅಡಗಿರುವ ಕಲೆಯನ್ನು ಆವಿಷ್ಕಾರಗೊಳಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಘಟನೆ ಕಳೆದ ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ” ಎಂದರು.

Home add -Advt

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಹಿರಿಯ ಪತ್ರಕರ್ತ ಎಂ.ಕೆ ಹೆಗಡೆ, “ಪ್ರತಿಯೊಬ್ಬರೂ ತಾವು ಕಲಿತ ಶಾಲೆಗೆ, ಕಾಲೇಜಿಗೆ, ಊರಿಗೆ, ಶಿಕ್ಷಕರಿಗೆ ಮತ್ತು ವಿಶೇಷವಾಗಿ ಹೆತ್ತವರಿಗೆ ಗೌರವ ನೀಡುವುದನ್ನು ರೂಢಿಸಿಕೊಳ್ಳಬೇಕು. ತಾವು ದೊಡ್ಡವರಾದ ಮೇಲೆ ತಮ್ಮನ್ನು ಈ ಮಟ್ಟಕ್ಕೆ ತಂದ ಸಮಾಜಕ್ಕೆ ತಮ್ಮ ಕೈಲಿಂದ ಸಾಧ್ಯವಾದ ಸಾಮಾಜಿಕ ಕಾರ್ಯ ಮಾಡುವುದನ್ನು ಮರೆಯಬಾದರು” ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ವತಿಯಿಂದ ಸಂಘಟನೆಯ ಪದಾಧಿಕಾರಿಗಳನ್ನು ಗೌರವಿಸಿ ಅಭಿನಂದಿಸಲಾಯಿತು. ಪ್ರಯತ್ನ ಸಂಘಟನೆಯ ಸದಸ್ಯರಾದ ಸುಮಾ ಹೊಂಡದ, ಲತಾ ಕಟ್ಟಿ, ಶೀಲಾ ದೇಶಪಾಂಡೆ, ವೀಣಾ ಕುಲಕರ್ಣಿ, ಶುಭಾ ಕಡಗದಕೈ, ವರದಾ ಭಟ್, ಪದ್ಮಾ ವೇರ್ಣೇಕರ, ಬೀನಾ ರಾವ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಸನ್ನ ಕುಲಕರ್ಣಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಾಚಾರ್ಯ ಎಸ್.ಕೆ ಅಕಿವಾಟ ಸ್ವಾಗತಿಸಿದರು. ಎಫ್.ಡಿ ತಳವಾರ ನಿರೂಪಿಸಿದರು. ಎಸ್.ಎಸ್ ಚಿಂಚಣಿ ವಂದಿಸಿದರು.

Related Articles

Back to top button