*ಗ್ರಾಮೀಣ ಪ್ರದೇಶಗಳಲ್ಲಿ ವೃತ್ತಿ ರಂಗಭೂಮಿ ಇನ್ನೂ ಜೀವಂತವಾಗಿದೆ: ಕೆ.ಎಂ. ಜಾನಕಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗ್ರಾಮೀಣ ಪ್ರದೇಶಗಳಲ್ಲಿ ವೃತ್ತಿ ರಂಗಭೂಮಿ ಇನ್ನೂ ಜೀವಂತವಾಗಿದ್ದು, ವೃತ್ತಿ ರಂಗಭೂಮಿ, ಕಲೆ ಮತ್ತು ಕಲಾವಿದರನ್ನು ಗೌರವಿಸುವ ಅಗತ್ಯವಿದೆ. ಶಾಲಾ-ಕಾಲೇಜುಗಳ ಕಾರ್ಯಕ್ರಮಗಳಲ್ಲಿಯೂ ಇಂತಹ ಕಲಾ ಪ್ರದರ್ಶನಗಳಿಗೆ ಅವಕಾಶ ನೀಡಬೇಕು ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಕೆ.ಎಂ. ಜಾನಕಿ ಹೇಳಿದರು.
ನಗರದಲ್ಲಿ ಕರ್ನಾಟಕ ಸರ್ಕಾರದ ವೃತ್ತಿ ರಂಗಭೂಮಿ ರಂಗಾಯಣ, ದಾವಣಗೆರೆ ವತಿಯಿಂದ ಆಯೋಜಿಸಿದ್ದ ‘ಅಭಿನಯ ಸಮೇತ ರಂಗ ಸಂಗೀತ ತರಬೇತಿ ಶಿಬಿರದ’ ಸಮಾರೋಪ ಸಮಾರಂಭದಲ್ಲಿ ರಂಗ ಪ್ರದರ್ಶನವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ವೃತ್ತಿ ರಂಗಭೂಮಿಯು ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿದೆ. ಅಭಿನಯ, ಸಂಗೀತ ಹಾಗೂ ರಂಗಕಲೆಯ ಮೂಲಕ ಜನರನ್ನು ರಂಜಿಸುವುದರ ಜೊತೆಗೆ ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಕಾರ್ಯವನ್ನು ವೃತ್ತಿ ರಂಗಭೂಮಿ ಮಾಡುತ್ತಿದೆ. ಇಂತಹ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸಲು ಎಲ್ಲರೂ ಕೈಜೋಡಿಸಬೇಕು ಎಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಮಾತನಾಡಿ, ವೃತ್ತಿ ರಂಗಭೂಮಿ ಹೊಸ ರೂಪವನ್ನು ಕಂಡುಕೊಂಡು ವರ್ತಮಾನದ ಅಗತ್ಯಗಳಿಗೆ ತಕ್ಕಂತೆ ಮುನ್ನಡೆಯುತ್ತಿದೆ. ರಂಗಾಯಣವು ಇದೇ ಆಶಯದೊಂದಿಗೆ ವೃತ್ತಿ ರಂಗಭೂಮಿಯ ವೈಭವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವೃತ್ತಿ ರಂಗಭೂಮಿ ನಡೆದು ಬಂದ ಹಾದಿ ಹಾಗೂ ಅದರ ಬೆಳವಣಿಗೆಯನ್ನು ವಿವರಿಸಿದರು.
ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ, ಖ್ಯಾತ ಸಾಹಿತಿ ಹಾಗೂ ಪತ್ರಕರ್ತ ಡಾ. ಸರ್ಜು ಕಾಟ್ಕರ್, ರಂಗ ಸಮಾಜದ ಸದಸ್ಯ ಮಹಾಂತೇಶ್ ಗಜೇಂದ್ರಗಡ, ಸಾಹಿತಿ ಯು.ಆರ್. ಪಾಟೀಲ್, ಹಿರಿಯ ಸಾಹಿತಿ ಪ್ರೊ. ಬಸವರಾಜ ಜಗಜಂಪಿ, ಸಾಹಿತಿ ಹಾಗೂ ನಾಟಕಕಾರ ಡಿ.ಎಸ್. ಚೌಗಲೆ, ರಂಗ ಚಿಂತಕ ಡಾ. ರಾಮಕೃಷ್ಣ ಮರಾಠ, ರಂಗತಜ್ಞ ಸುಭಾಷ್ ಏಣಗಿ, ಶಿಬಿರ ನಿರ್ದೇಶಕ ರಾಜಪ್ರಭು ಧೋತ್ರೆ, ನಾಟಕಕಾರ ಶಿರೀಷ್ ಜೋಶಿ ಹಾಗೂ ಶಿಬಿರ ಸಂಚಾಲಕ ಎನ್. ನಟರಾಜ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆ ಹಾಗೂ ರಂಗಾಯಣದ ನಾಂದಿ ಗೀತೆಯನ್ನು ಹಾಡಲಾಯಿತು. ವೃತ್ತಿ ರಂಗಭೂಮಿ ರಂಗಾಯಣದ ವಿಶೇಷಾಧಿಕಾರಿ ರವಿಚಂದ್ರ ಸ್ವಾಗತಿಸಿದರು.
ಡಾ. ಸರಜೊ ಕಾಟ್ಕರ್ ಸ್ಮರಣಿಕೆ ಪುಸ್ತಕ ಬಿಡುಗಡೆ ಮಾಡಿದರು. ಶಿಬಿರಾರ್ಥಿಗಳು ವೃತ್ತಿ ರಂಗಭೂಮಿಯ ವೈಭವವನ್ನು ನೆನಪಿಸುವ ಹಲವು ಪೌರಾಣಿಕ ನಾಟಕಗಳ ಪ್ರಮುಖ ದೃಶ್ಯಗಳನ್ನು ಅಭಿನಯ, ಸಂಗೀತ ಹಾಗೂ ಸಮೂಹಗೀತೆಗಳೊಂದಿಗೆ ಮನೋಜ್ಞವಾಗಿ ಪ್ರಸ್ತುತಪಡಿಸಿದರು. ಕಲಾವಿದರ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಕೊನೆಯಲ್ಲಿ ಆಶಾ ಯಂಕನಮರಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



