Latest

ರಮೇಶ ಮನವೊಲಿಸುವ ಪ್ರಯತ್ನ ಕೈ ಮಿರಿದೆ; ಲಖನ್ ಮುಂದಿನ ಅಭ್ಯರ್ಥಿ

ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ:

ರಮೇಶ ಜಾರಕಿಹೊಳಿ ಈಗಾಗಲೆ ಕಾಂಗ್ರೇಸ್ ಪಕ್ಷದಿಂದ ದೂರವಿದ್ದು ಪಕ್ಷದ ಪರವಾಗಿ ಪ್ರಚಾರ ಹಾಗೂ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿಲ್ಲ. ಇದು ಈಗಾಗಲೆ ಹೈಕಮಾಂಡ್ ಗಮನಕ್ಕೂ ತಲುಪಿದೆ. ರಮೇಶ ಜಾರಕಿಹೊಳಿ  ಮನಸ್ಸು ಬದಲಾಯಿಸುವ ಪ್ರಯತ್ನ ಈಗ ಕೈಮೀರಿ ಹೋಗಿದೆ ಎಂದು ಅರಣ್ಯ ಖಾತೆ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಅಲ್ಲದೆ, ರಮೇಶ್ ಕಾಂಗ್ರೇಸ್ ಪಕ್ಷಕ್ಕೆ ರಾಜಿನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಿದರೆ ಗೋಕಾಕ ಕ್ಷೇತ್ರದಲ್ಲಿ ಲಖನ ಜಾರಕಿಹೊಳಿ  ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗುತ್ತಾರೆ  ಎಂದೂ ಅವರು ತಿಳಿಸಿದ್ದಾರೆ.


ಅವರು ಇಂದು ಘಟಪ್ರಭಾಕ್ಕೆ ಲೋಕಸಭೆಯ ಕಾಂಗ್ರೇಸ್ ಅಭ್ಯರ್ಥಿ  ಸಾಧುನವರ್ ಪರವಾಗಿ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ, ರಮೇಶ ಜಾರಕಿಹೊಳಿ  ಯಾವ ಕಾರಣಕ್ಕೆ ಪಕ್ಷ ಬಿಡುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ನಾನು ಜಾರಕಿಹೊಳಿ ಕುಟುಂಬದಲ್ಲಿ ರಾಜಕೀಯ ಗುರುವಾಗಿದ್ದರು ಸಹ ಈಗ ನನ್ನ ಕೈಮೀರಿದೆ ಎಂದರು.

ಗೋಕಾಕದಲ್ಲಿ ಕಾಂಗ್ರೇಸ್ ಪಕ್ಷ ಬಲ ಪಡಿಸುವ ಉದ್ದೇಶದಿಂದ ಪಕ್ಷವನ್ನು ಸಂಘಟಿಸುತ್ತಿದ್ದೇನೆ. ಜಾರಕಿಹೊಳಿ ಸಹೋದರರು ಎಲ್ಲರೂ ಒಂದೇ ಎನ್ನುವುದು ಸುಳ್ಳು. ರಾಜಕೀಯದಿಂದ ಎಲ್ಲರೂ ಬೇರೆ ಬೇರೆಯಾಗಿದ್ದೇವೆ. ಇದರಿಂದ ಜಾರಕಿಹೊಳಿ ಅಭಿಮಾನಿಗಳಲ್ಲಿ ಗೊಂದಲವಾಗಿರುವುದು ನಿಜ. ಹಾಗೆಯೇ ಮುಂದೆ ಗೋಕಾಕ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರ ಮಧ್ಯೆ ಸ್ಪರ್ಧೆಯಾಗುವುದರಲ್ಲಿ ಯಾವುದೆ ಸಂಶಯವಿಲ್ಲವೆಂದು ಹೇಳಿದರು.
ಬ್ರಾಹ್ಮಣರ ಬಗ್ಗೆ ನಾನು ಆಡಿದ ಮಾತುಗಳ ಬಗ್ಗೆ ಅವರು ಸರಿಯಾಗಿ ತಿಳಿದುಕೊಂಡಿಲ್ಲ.  ಯಾವುದಾದರು ಒಂದು ತುಣುಕನ್ನು ಹಿಡಿದುಕೊಂಡು ಮಾತನಾಡುವುದರಲ್ಲಿ ಅರ್ಥವಿಲ್ಲ. ಅವರು ಬಹಿರಂಗ ಚರ್ಚೆಗೆ ಬಂದರೆ ನಾನು ಅವರಿಗೆ ಉತ್ತರವನ್ನು ನೀಡಲು ಸಿದ್ಧನಿದ್ಧೇನೆ ಎಂದು ಇದೇ ಸಂದರ್ಭದಲ್ಲಿ ಸತೀಶ್ ಹೇಳಿದರು.
ಈ ಸಂದರ್ಭದಲ್ಲಿ ರಾಮಣ್ಣ ಹುಕ್ಕೇರಿ, ಪ್ರಕಾಶ ಡಾಂಗೆ, ಸುಲ್ತಾನಸಾಬ ಕಬ್ಬೂರ, ಸುರೇಶ ಬೊಸ್ಲೆ, ಈರಣ್ಣ ಕಲಕುಟಗಿ, ಮುನ್ನಾ ಸೌದಾಗರ, ಕೆಎಚ್‌ಐ ಶಿಂಧೆ, ಅಣ್ಣಪ್ಪ ಹುನಗುಂದ ಹಾಗೂ ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್ ಸದಸ್ಯರು, ಮುಸ್ಲಿಂ ಮುಖಂಡರು ಹಾಜರಿದ್ದರು.

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button