ಮಾಸ್ಕೋ – ಉಕ್ರೇನ್ ಮೇಲಿನ ರಷ್ಯಾ ದಾಳಿಗೆ ವಿಶ್ವವೇ ವಿರೋಧ ವ್ಯಕ್ತಪಡಿಸುತ್ತಿದೆ. ಇನ್ನೊಂದೆಡೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ರಷ್ಯಾದ ನಡೆಯನ್ನು ಬೆಂಬಲಿಸಲೂ ಆಗದೆ ವಿರೋಧಿಸಲೂ ಆಗದೆ ಇಕ್ಕಟ್ಟಿಗೆ ಸಿಲುಕಿದೆ. ಆದರೆ ಪುಟಿನ್ ಸರಕಾರದಲ್ಲಿ ಸದಸ್ಯನೂ ಆಗಿರುವ ಭಾರತೀಯ ಮೂಲದ ಅಭಯ್ಕುಮಾರ್ ಪುಟಿನ್ ನಡೆಯನ್ನು ಬೆಂಬಲಿಸಿ ಅಧೀಕೃತ ಹೇಳಿಕೆ ನೀಡಿದ್ದಾರೆ.
ಮೂಲತಃ ಬಿಹಾರದವರಾದ ಅಭಯ್ಕುಮಾರ್ ಸಿಂಗ್ ರಷ್ಯಾದಲ್ಲಿ ನೆಲೆಸಿದ್ದು ಅಲ್ಲಿನ ಸರಕಾರದ ಸದಸ್ಯರೂ ಆಗಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ರ ಆಪ್ತರಲ್ಲಿ ಒಬ್ಬರಾಗಿರುವ ಅಭಯ್ ಕುಮಾರ್ ಸಿಂಗ್ ಪುಟಿನ್ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ ರಷ್ಯಾ ಸೈನ್ಯ ಕೇವಲ ಉಕ್ರೇನ್ ಸೈನ್ಯದ ವಿರುದ್ಧ ಹೋರಾಟ ನಡೆಸುತ್ತಿದೆಯೇ ವಿನಃ ಉಕ್ರೇನ್ನ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿಲ್ಲ ಎಂದು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಅಣ್ವಸ್ತ್ರ ದಾಳಿ ಇಲ್ಲ
ರಷ್ಯಾ ಅಣ್ವಸ್ತ್ರ ದಾಳಿಗೆ ಮುಂದಾಗಿದೆಯೇ ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ಜಗತ್ತು ರಷ್ಯಾದ ಅಣ್ವಸ್ತ್ರ ಯುದ್ಧದ ಕುರಿತು ಭಯಪಡಬೇಕಿಲ್ಲ. ಅಧ್ಯಕ್ಷ ಪುಟಿನ್ ಈ ಕುರಿತು ಖಚಿತವಾಗಿ ಹೇಳಿದ್ದಾರೆ. ರಷ್ಯಾ ಅಣ್ವಸ್ತ್ರ ದಾಳಿಗೆ ತಾನಾಗಿಯೇ ಮುಂದಾಗುವುದಿಲ್ಲ. ಆದರೆ ವಿರೋಧಿ ದೇಶಗಳು ದಾಳಿ ನಡೆಸಿದಲ್ಲಿ ರಷ್ಯಾ ಯಾವ ಮಟ್ಟದ ಯುದ್ಧಕ್ಕೂ ಸಿದ್ಧವಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಭಾರತವು ರಷ್ಯಾದ ಮಿತ್ರ ರಾಷ್ಟ್ರವಾಗಿದ್ದು ಉಕ್ರೇನ್ನಲ್ಲಿರುವ ಯಾವುದೇ ಭಾರತೀಯ ನಾಗರೀಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸೈನ್ಯಕ್ಕೆ ಅಧ್ಯಕ್ಷ ಪುಟಿನ್ ಸೂಚನೆ ನೀಡಿದ್ದಾರೆ. ಅಲ್ಲದೇ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ತಮ್ಮ ದೇಶಕ್ಕೆ ವಾಪಸ್ ತೆರಳಲು ಅಡ್ಡಿಪಡಿಸದಂತೆ ಅಧ್ಯಕ್ಷ ಪುಟಿನ್ ಸೂಚಿಸಿದ್ದಾರೆ ಎಂಬುದಾಗಿ ಸಿಂಗ್ ಹೇಳಿದ್ದಾರೆ.
ಸಿಂಗ್ ಹಿನ್ನೆಲೆ
ಅಭಯ್ಕುಮಾರ್ ಸಿಂಗ್ ಬಿಹಾರದ ಪಾಟ್ನಾ ಮೂಲದವರಾಗಿದ್ದು ಎಂಬಿಬಿಎಸ್ ಓದಲು ರಷ್ಯಾಗೆ ತೆರಳಿದ್ದರು. ಎಂಬಿಬಿಎಸ್ ಮುಗಿಸಿ ವಾಪಸ್ ಪಾಟ್ನಾಗೆ ಬಂದು ಕೆಲ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ್ದರು.
ಆದರೆ ನಂತರದಲ್ಲಿ ವಾಪಸ್ ರಷ್ಯಾಗೆ ತೆರಳಿ ವ್ಯಾಪಾರ ಶುರು ಮಾಡಿದ ಅವರು, ನಂತರದಲ್ಲಿ ಅಲ್ಲಿನ ರಾಜಕೀಯ ಕ್ಷೇತ್ರಕ್ಕೆ ಧುಮುಕಿದರು. ಪುಟಿನ್ರ ಯುನೈಟೆಡ್ ರಷ್ಯಾ ಪಾರ್ಟಿಯ ಸದಸ್ಯರಾಗಿ ಕುರರ್ಸಕ್ ಕ್ಷೇತ್ರದಿಂದ ಆಯ್ಕೆಯಾದರು. ಅವರ ಸ್ಥಾನ ಭಾರತದ ವಿಧಾನಸಭಾ ಸದಸ್ಯರ ಸ್ಥಾನಕ್ಕೆ ಸಮನಾದದ್ದಾಗಿದೆ. ಅಲ್ಲದೇ ಸಿಂಗ್ ರಷ್ಯಾದ ಪ್ರಮುಖ ಔಷಧ ಉದ್ಯಮಿ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಖ್ಯಾತಿ ಪಡೆದಿದ್ದಾರೆ.
ದ್ವಿತೀಯ ಪಿಯುಸಿ ವೇಳಾಪಟ್ಟಿಯಲ್ಲಿ ಬದಲಾವಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ