ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದ್ದು ನಾಡಿನ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು ಇದರ ಕಾರ್ಯಗಳು ಶ್ಲಾಘನೀಯವಾಗಿವೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದ್ದಾರೆ.
ರಾಮದುರ್ಗದಲ್ಲಿ ತಾಲೂಕು ಪಂಚಾಯತಿ ಸಭಾಭವನದಲ್ಲಿ ಜರುಗಿದ ರಾಮದುರ್ಗ ತಾಲೂಕು ಕಸಾಪ ಕಾರ್ಯಚಟುವಟಿಕೆಗಳ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಅವರು ಹಿರೇಕೊಪ್ಪ ಕೆ.ಎಸ್ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಡಾ.ಡಿ.ಎಸ್.ಕರ್ಕಿ ಸಾಹಿತ್ಯ ಭವನ ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಸಾಹಿತ್ಯ ಕ್ಷೇತ್ರಕ್ಕೆ ರಾಮದುರ್ಗ ತಾಲೂಕು ಮಹತ್ವದ ಕೊಡುಗೆ ನೀಡಿದ್ದು ಅವುಗಳ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮಗಳು ಜರುಗಬೇಕು. ಇಂದಿನ ವಿದ್ಯಾರ್ಥಿಗಳಲ್ಲಿ ಸಾಹಿತ್ಯಕ ಆಸಕ್ತಿ ಮೂಡಿಸುವ ರಚನಾತ್ಮಕ ಕಾರ್ಯವನ್ನು ಸಾಹಿತ್ಯ ಪರಿಷತ್ತು ಮಾಡಲಿ ಎಂದು ಹಿರಿಯ ಸಾಹಿತಿ ಪ್ರೊ.ವೆಂಕಟೇಶ ಹುಣಸೀಕಟ್ಟಿ ನುಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್ ಅಲಾಸೆ ಮಾತನಾಡಿ ತಾಲೂಕಿನ ಪ್ರತಿ ಶಾಲೆಗಳಲ್ಲಿ ಸಾಹಿತ್ಯ ಪರಿಷತ್ತು ಮಕ್ಕಳಿಗಾಗಿ ಕಾರ್ಯಕ್ರಮ ಹಮ್ಮಿಕೊಂಡರೆ ಇಲಾಖೆಯ ವತಿಯಿಂದ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆ ನಡೆಸಲು ಸ್ವಂತ ಕಟ್ಟಡದ ಅಗತ್ಯವಿದ್ದು ಸರಕಾರದಿಂದ ಉಚಿತವಾಗಿ ನಿವೇಶನ ಪಡೆದರೆ ಅಗತ್ಯ ಅನುದಾನವನ್ನು ಕೇಂದ್ರ ಪರಿಷತ್ತಿನಿಂದ ಮಂಜೂರು ಮಾಡಿಸುವುದಾಗಿ ಹೇಳಿದರು.
ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಮೇಶ ಅರಕೇರಿ, ಶಿಕ್ಷಕರ ಸಂಘದ ಅಧ್ಯಕ್ಷ ಎಮ್.ಎಸ್.ನಿಜಗುಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಬೆಳಗಾವಿ ಜಿಲ್ಲಾದ್ಯಕ್ಷ ಮೋಹನ ಬಸನಗೌಡ ಪಾಟೀಲ ವೇದಿಕೆ ಮೇಲಿದ್ದರು.
ತಾಲೂಕು ಅಧ್ಯಕ್ಷ ಪಾಂಡುರಂಗ ಜಟಗನ್ನವರ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ಕೆ.ಎನ್.ಯಡ್ರಾವಿ ಸ್ವಾಗತಿಸಿದರು. ಶಿಕ್ಷಕ ಎನ್.ಎನ್.ಮೂಗನೂರ, ವಿಶಾಲಾಕ್ಷಿ ಚಿಕ್ಕೋಡಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಆರ್.ಕೆ.ಬಿಕ್ಕಣ್ಣವರ ವಂದಿಸಿದರು.
13ಕ್ಕೆ ಮಂಜುಗುಣಿಯಲ್ಲಿ ನೌಕಾ ವಿಹಾರೋತ್ಸವ, ಅಶ್ವ ರಥೋತ್ಸವ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ