ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವೀರ ರಾಣಿ ಚನ್ನಮ್ಮನ ನಾಡಿಗೆ ಬೇಟಿ ನೀಡಿದ್ದು, ನನಗೆ ಬಹಳ ಸಂತೋಷ ತಂದಿದೆ. 18 ನೇ ಶತಮಾನದ ಸ್ವಾತಂತ್ರ್ಯ ಪೂರ್ವದ ಕಾಲದಲ್ಲಿ ರಾಣಿ ಚನ್ನಮ್ಮ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರೇಪಿಸಿದರು. ದೇಶಕ್ಕೆ ಅವರ ಕೊಡುಗೆ ಅಪಾರ ಎಂದು ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ತಿಳಿಸಿದರು.
ಚೆನ್ನಮ್ಮನ ಕಿತ್ತೂರಿಗೆ ಮಂಗಳವಾರ (ಮಾ.8) ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರಾಣಿ ಚನ್ನಮ್ಮ ಇತಿಹಾಸವನ್ನು ಕೇಳಿದ್ದೇನೆ. ರಾಣಿ ಚನ್ನಮ್ಮಳ ನಾಡಿಗೆ ಭೇಟಿ ನೀಡುವ ಇಚ್ಛೆಯನ್ನು ಹೊಂದಿದ್ದೆ. ನಾನು ಕರ್ನಾಟಕ ರಾಜ್ಯದ ರಾಜ್ಯಪಾಲನಾದ ನಂತರ ಈ ಸುವರ್ಣ ಅವಕಾಶ ನನಗೆ ಲಭಿಸಿರುವುದರಿಂದ ಮತ್ತಷ್ಟು ಸಂತಸವಾಗಿದೆ ಎಂದು ತಿಳಿಸಿದರು.
ಅಂತರಾಷ್ಟ್ರೀಯ ಮಹಿಳಾ ದಿನದಂದು ಈ ಸ್ಥಳಕ್ಕೆ ಭೇಟಿ ನೀಡಿರುವುದು ನನ್ನ ಸೌಭಾಗ್ಯವಾಗಿದೆ. ಈ ಶುಭ ಸಂದರ್ಭದಲ್ಲಿ ಎಲ್ಲಾ ಮಹಿಳೆಯರಿಗೂ ಅಂತರರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳನ್ನು ಕೋರುತ್ತೇನೆ ಎಂದರು.
ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹಿಳೆಯರು ಹೋರಾಡಿದ್ದಾರೆ; ಅದರಲ್ಲಿ ರಾಣಿ ಚನ್ನಮ್ಮ ಅವರು ಒಬ್ಬರು.
ದೇಶದ ಸ್ವಾತಂತ್ರ್ಯಕ್ಕಾಗಿ ಅವರು ಮಾಡಿದಂತಹ ಸಂಘರ್ಷದಿಂದ ಸ್ವಾತಂತ್ರ್ಯ ದೊರೆತಿದೆ. ಅದಕ್ಕಾಗಿ ಅವರಿಗೆ ಹೃದಯ ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ತಿಳಿಸಿದರು.
ಚನ್ನಮ್ಮನ ಕಿತ್ತೂರು ಶಾಸಕರಾದ ಮಹಾಂತೇಶ ದೊಡ್ಡಗೌಡ್ರ, ಉಪ ವಿಭಾಗಾಧಿಕಾರಿ ಶಶಿಧರ್ ಬಗಲಿ ಮತ್ತಿತರ ಗಣ್ಯರು ರಾಜ್ಯಪಾಲರನ್ನು ಸನ್ಮಾನಿಸಿ, ಗೌರವಿಸಿದರು.
ಪಟ್ಟಣದಲ್ಲಿರುವ ವೀರರಾಣಿ ಕಿತ್ತೂರು ಚೆನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ರಾಜ್ಯಪಾಲರು, ಕೋಟೆಯನ್ನು ವೀಕ್ಷಿಸಿದರು.
ಬೆಳಗಾವಿಗೆ ಆಗಮಿಸಿದ ರಾಜ್ಯಪಾಲ ಗೆಹ್ಲೋಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ