ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಯುವ ಸಮುದಾಯವು ಸಂವಿಧಾನಾತ್ಮಕ ಕರ್ತವ್ಯಗಳನ್ನು ನಿಭಾಯಿಸಿ ‘ಏಕ ಭಾರತ ಶ್ರೇಷ್ಠ ಭಾರತ’ ನಿರ್ಮಿಸುವ ಗುರಿಯನ್ನು ಹೊಂದಬೇಕಿದೆ. ಭಾರತಕ್ಕೆ ವಿಶ್ವಗುರುವಿನ ಗೌರವವನ್ನು ಮತ್ತೆ ದೊರಕಿಸಿಕೊಡುವ ನಿಟ್ಟಿನಲ್ಲಿ ನಾವೆಲ್ಲರೂ ದೃಢಹೆಜ್ಜೆಯನ್ನು ಇಡಬೇಕಿದೆ ಎಂದು ಘನತೆವೆತ್ತ ರಾಜ್ಯಪಾಲರಾದ ಥಾವರಚಂದ್ ಗೆಹ್ಲೊಟ್ ಅವರು ಕರೆ ನೀಡಿದರು.
ಸುವರ್ಣ ವಿಧಾನಸೌಧ ಸೆಂಟ್ರಲ್ ಸಭಾಂಗಣದಲ್ಲಿ ಬುಧವಾರ (ಮಾ.9) ನಡೆದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ 9 ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜ್ಞಾನ ಗಳಿಸುವುದು ಶಿಕ್ಷಣದ ಮೂಲ ಉದ್ದೇಶವಾಗಿದೆ. ಶಿಕ್ಷಣದಿಂದ ಸರ್ವಾಂಗೀಣ ಪ್ರಗತಿಗೆ ಸುಲಭ ದಾರಿ ದೊರಕುತ್ತದೆ. ಹೊಸ ಹೊಸ ಆವಿಷ್ಕಾರಗಳನ್ನು ಅರಿತುಕೊಳ್ಳಲು ಶಿಕ್ಷಣ ಅತ್ಯಗತ್ಯವಾಗಿದೆ.
ಸ್ವಯಂ ಉದ್ಯೋಗದ ಕಡೆಗೆ ಒಲವು ಬೆಳೆಸಿ ದೇಶದ ಪ್ರಗತಿಗೆ ಕೈಜೋಡಿಸಲು ಶಿಕ್ಷಣ ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ.
ಸ್ವಾವಲಂಬಿ ಬದುಕು ಮತ್ತು ಸ್ವಾವಲಂಬಿ ಭಾರತ ನಿರ್ಮಾಣದ ದಿಸೆಯಲ್ಲಿ ಯುವ ಸಮುದಾಯವನ್ನು ಕೊಂಡೊಯ್ಯಲು ಉನ್ನತ ಶಿಕ್ಷಣ ಅತ್ಯಗತ್ಯವಾಗಿದೆ.
ವಿದ್ಯಾರ್ಥಿಗಳು ಶಿಕ್ಷಣದ ಬಳಿಕ ತಮ್ಮ ಸಮಾಜ ಮತ್ತು ದೇಶದ ಬಗ್ಗೆ ಗೌರವಾದರಗಳನ್ನು ಬೆಳೆಸಿಕೊಂಡು ಆತ್ಮ ಸಂತೃಪ್ತಿಯ ಜತೆಗೆ ಉತ್ತಮ ಬದುಕು ರೂಪಿಸಿಕೊಳ್ಳಬೇಕು.
ಘಟಿಕೋತ್ಸವ ಸಮಾರಂಭದ ಹಿನ್ನಲೆಯು ಇಂದು ನಿನ್ನೆಯದಲ್ಲ; ಗುರುಕುಲದ ಕಾಲದಿಂದ ನಿರಂತರವಾಗಿ ನಡೆದುಬರುತ್ತಿದೆ. ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಇದೊಂದು ಖುಷಿ ಮತ್ತು ಭಾವನಾತ್ಮಕ ದಿನವಾಗಿದೆ.
ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚೆನ್ನಮ್ಮನ ಹೆಸರಿನ
ರಾಣಿ ಚೆನ್ನಮ್ಮ ವಿವಿಗೆ ಚನ್ನಮ್ಮನ ಹೋರಾಟವು ಪ್ರೇರಣಾಶಕ್ತಿಯಾಗಲಿ. ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಕರ್ಮಭೂಮಿ ನೋಡಿದ್ದ ನನಗೆ ರಾಣಿ ಚೆನ್ನಮ್ಮ ಕರ್ಮಭೂಮಿಗೆ ಭೇಟಿ ನೀಡಿದ ಬಳಿಕ ಧನ್ಯತಾಭಾವನೆ ಮೂಡಿತು. ಸ್ವಾತಂತ್ರ್ಯ ಉಳಿಸಿಕೊಂಡು ಹೋಗಲು ರಾಣಿ ಚೆನ್ನಮ್ಮ ಮತ್ತಿತರ ತ್ಯಾಗ ಮತ್ತು ಹೋರಾಟ ನಮಗೆ ಪ್ರೇರಣಾದಾಯಕವಾಗಿದೆ ಎಂದರು.
ಸರಕಾರ ನೀಡಿರುವ 127 ಎಕರೆ ಜಾಗೆಯಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಆದಷ್ಟು ಬೇಗ ನಿರ್ಮಿಸುವ ಮೂಲಕ ಎಲ್ಲ ಸೌಕರ್ಯಗಳು ವಿದ್ಯಾರ್ಥಿಗಳಿಗೆ ಲಭಿಸುವಂತಾಗಲಿ ಎಂದು ಘನತೆವೆತ್ತ ರಾಜ್ಯಪಾಲರಾದ ಥಾವರಚಂದ್ ಗೆಹ್ಲೊಟ್ ಅವರು ಆಶಿಸಿದರು.
ಮೂವರಿಗೆ ಗೌರವ ಡಾಕ್ಟರೇಟ್:
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಮಹನೀಯರಮ್ನು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
ಪದ್ಮಶ್ರೀ ಪುರಸ್ಕೃತರಾದ ಡಾ. ಹೆಚ್.ಸುದರ್ಶನ ಬಲ್ಲಾಳ ಇವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ” ಡಾಕ್ಟರ್ ಆರ್ ಸೈನ್ಸ್ “, ವಾದಿರಾಜ ಬಿ.ದೇಶಪಾಂಡೆ ಇವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ” ಡಾಕ್ಟರ್ ಆರ್ ಲೆಟರ್ಸ್” ಗೌರವ ಡಾಕ್ಟರೇಟ್ ಪದಿವಿಯನ್ನು ಪ್ರದಾನ ಮಾಡಲಾಯಿತು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಪಂಡಿತ್ ರಾಜೀವ ತಾರಾನಾಥ ಇವರಿಗೆ ಭಾರತೀಯ ಸಂಗೀತ ಕ್ಷೇತ್ರದಲ್ಲಿ “ಡಾಕ್ಟರ್ ಆಪ್ ಲೆಟರ್ಸ್” ಪ್ರಕಟಿಸಲಾಗಿದ್ದು, ಅವರು ಅನುಪಸ್ಥಿತರಿದ್ದರು.
ಭವಿಷ್ಯದ ಸವಾಲು ಎದುರಿಸಲು ಯುವ ಸಮುದಾಯ ಅಣಿಗೊಳಿಸಲು ಕರೆ:
ಘಟಿಕೋತ್ಸವ ಭಾಷಣವನ್ನು ಮಾಡಿದ ನವದೆಹಲಿಯ ಅಂತರ್ ರಾಷ್ಟ್ರೀಯ ಜೆನೆಟಿಕ್ ಎಂಜಿನಿಯರಿಂಗ್ ಮತ್ತು ಬಯೋಟೆಕ್ನಾಲಜಿ ಕೇಂದ್ರದ ನಿರ್ದೇಶಕ ಮತ್ತು ನ್ಯಾಕ್ ಕಾರ್ಯಕಾರಿ ಸಮಿತಿಯ ಚೇರಮನ್ ಪ್ರೊ.ವಿ.ಎಸ್.ಚೌಹಾನ್ ಅವರು, ಜ್ಞಾನವನ್ನು ಸೃಷ್ಟಿಸುವುದರ ಜತೆಗೆ ಮನುಕುಲದ ಭವಿಷ್ಯದ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಯುವ ಸಮುದಾಯವನ್ನು ಅಣಿಗೊಳಿಸುವುದು ಉನ್ನತ ಶಿಕ್ಷಣದ ಉದ್ದೇಶವಾಗಿದೆ ಎಂದು ಅಭಿಪ್ರಾಯಪಟ್ಟರು.
ಭಾರತದ ಉನ್ನತ ಶೈಕ್ಷಣಿಕ ವ್ಯವಸ್ಥೆಯು ಜಗತ್ತಿನ ಎರಡನೇ ಸ್ಥಾನದಲ್ಲಿದ್ದರೂ ಸಂಕೀರ್ಣಾವಸ್ಥೆಯಲ್ಲಿದೆ. ಪ್ರಸ್ತುತ ದೇಶದಲ್ಲಿ 960ಕ್ಕೂ ಅಧಿಕ ವಿಶ್ವವಿದ್ಯಾಲಯ; 45 ಸಾವಿರ ಕಾಲೇಜುಗಳಲ್ಲಿ 3.7 ಕೋಟಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.
ಬ್ರಿಟೀಷರು ಭಾರತ ಬಿಟ್ಟು ತೆರಳಿದ ಈ 75 ವರ್ಷಗಳಲ್ಲಿ ಶೈಕ್ಷಣಿಕವಾಗಿ ದೇಶ ಅಗಾಧ ಸಾಧನೆಗೈದಿದೆ. ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವ ಕೆಲಸವನ್ನು ಶಿಕ್ಷಣ ಮಾಡಿದೆ.
ಆದಾಗ್ಯೂ ಹಲವಾರು ಕಂದಕಗಳಿವೆ. ಶ್ರೀಮಂತರು-ಬಡವರ ನಡುವಿನ ಅಂತರ ಹೆಚ್ಚಿದೆ. ನಾವು ಸರಕಾರಿ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದವರು. ಈಗ ಸಂಕೀರ್ಣ ಸಮಯದಲ್ಲಿದ್ದೇವೆ. ಎರಡು ವರ್ಷಗಳಲ್ಲಿ ಕೋವಿಡ್ ವೈರಸ್ ನಿಂದ ಹತ್ತಾರು ಬದಲಾವಣೆಗಳಾಗಿವೆ.
ಪ್ರತಿ ಹತ್ತು ವರ್ಷಗಳ ಅವಧಿಯಲ್ಲಿ ಒಂದೊಂದು ಬಗೆಯ ಸಾಂಕ್ರಾಮಿಕಗಳು ಕಾಣಿಸಿಕೊಳ್ಳುತ್ತಿವೆ. ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕ ಸ್ಥಿತಿಗತಿಗಳ ಮೇಲೆ ಇದರ ಪರಿಣಾಮವನ್ನು ಅರಿತುಕೊಳ್ಳಲು ವರ್ಷಗಟ್ಟಲೇ ಬೇಕಾಗುತ್ತಿದೆ.
ವಿಜ್ಞಾನ ತ್ವರಿತಗತಿಯಲ್ಲಿ ಬೆಳೆಯುತ್ತಿದ್ದು, ಇದರಿಂದಾಗಿ ಲಸಿಕೆ ಮತ್ತಿತರ ಸೌಲಭ್ಯಗಳನ್ನು ಪಡೆಯುವುದು ಸುಲಭ ಸಾಧ್ಯವಾಗುತ್ತಿದೆ. ಭಾರತದಂತಹ ದೇಶದಲ್ಲಿ ವಿವಿಧ ಬಗೆಯ ಲಸಿಕೆ ದೊರೆಯುತ್ತಿರುವುದಕ್ಕೆ ನಾವು ಹೆಮ್ಮೆ ಪಡಬೇಕು.
ಸ್ವಾಮಿ ವಿವೇಕಾನಂದರ ಕನಸಿನಂತೆ ಸೂಕ್ತ ಅವಕಾಶಗಳು; ನ್ಯಾಯ, ನೈತಿಕ ಮೌಲ್ಯಗಳೊಂದಿಗೆ ಭಾರವು ಸದೃಢವಾಗುವುದರ ಜತೆಗೆ ನಿಜವಾದ ಅರ್ಥದಲ್ಲಿ ವಿಶ್ವ ನಾಯಕನಾಗಿ ಹೊರಹೊಮ್ಮುವುದು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯಕ್ಕೆ ಅಗತ್ಯ ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸುವ ಕೆಲಸವಾಗಬೇಕಿದೆ ಎಂದು ಪ್ರೊ.ವಿ.ಎಸ್.ಚೌಹಾನ್ ಅವರು ಹೇಳಿದರು.
ಕಡಿಮೆ ಅವಧಿಯಲ್ಲಿ ರಾಣಿ ಚೆನ್ನಮ್ಮ ವಿವಿ ಅಪೂರ್ವ ಸಾಧನೆ ಮಾಡಿದೆ. ಹೊಸ ಕ್ಯಾಂಪಸ್ ನಿರ್ಮಾಣ ಮತ್ತಷ್ಟು ಪ್ರಗತಿಗೆ ಪೂರಕವಾಗಲಿದೆ.
ಉನ್ನತ ಶಿಕ್ಷಣ ಕ್ಷೇತ್ರವು ತನ್ನ ಜವಾಬ್ದಾರಿ ಅರಿತುಕೊಂಡು ಕೌಶಲ್ಯಾಧಾರಿತ ಶಿಕ್ಷಣ ಒದಗಿಸಬೇಕಿದೆ ಎಂದು ಪ್ರೊ.ವಿ.ಎಸ್.ಚೌಹಾನ್ ಪ್ರತಿಪಾದಿಸಿದರು.
ವಿದ್ಯಾರ್ಥಿಗಳು ತಮ್ಮದೇ ಗುರಿಯನ್ನು ಹೊಂದಿ ನಿರಂತರ ಕಠಿಣಶ್ರಮ, ಶಿಸ್ತು ಹಾಗೂ ಪ್ರಾಮಾಣಿಕತೆಯ ಮೂಲಕ ಸಾಧನೆಯ ಕಡೆಗೆ ಹೆಜ್ಜೆ ಹಾಕಬೇಕು ಎಂದು ಅವರು ಕಿವಿಮಾತು ಹೇಳಿದರು.
ಅತಿಥಿಗಳನ್ನು ಸ್ವಾಗತಿಸಿ, ವಿಶ್ವವಿದ್ಯಾಲಯದ ಪ್ರಗತಿ ವರದಿಯನ್ನು ಮಂಡಿಸಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ರಾಮಚಂದ್ರೇಗೌಡ ಅವರು, ವಿಶ್ವವಿದ್ಯಾಲಯ ಹಾಗೂ ಅದರ ಸಂಯೋಜಿತ ಎಲ್ಲ ಕಾಲೇಜುಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಸಂಪೂರ್ಣವಾಗಿ ಅನುಷ್ಢಾನಗೊಳಿಸಲಾಗಿದೆ ಎಂದು ಹೇಳಿದರು.
ಪ್ರಸಕ್ತ ವರ್ಷ 3 ಗೌರವ ಡಾಕ್ಟರೇಟ್; 86 ಡಾಕ್ಟರೇಟ್; 2749 ಸ್ನಾತಕೋತ್ತರ ಹಾಗೂ 35484 ಸ್ನಾತಕ ಪದವಿಗಳನ್ನು ಮತ್ತು 188 ಡಿಪ್ಲೋಮಾ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಗುತ್ತಿದೆ.
ಅನುತ್ತೀರ್ಣರಾಗಿದ್ದ ವಿದ್ಯಾರ್ಥಿಗಳಿಗೆ ವಿವಿ ದಶಮಾನೋತ್ಸವ ಸವಿನೆನಪಿಗಾಗಿ ಮತ್ತೇ ಪರೀಕ್ಷೆ ಬರೆಯುವ ಸುವರ್ಣಾವಕಾಶ ಕಲ್ಪಿಸಲಾಗಿತ್ತು. ಈ ಅವಕಾಶ ಬಳಸಿಕೊಂಡು 3798 ವಿದ್ಯಾರ್ಥಿಗಳ ಪೈಕಿ 2848 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಸರಕಾರವು ಒದಗಿಸಿರುವ 127 ಎಕರೆ ಜಾಗೆಯಲ್ಲಿ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ನಿರ್ಮಾಣ ಕೆಲಸ ಆರಂಭಗೊಂಡಿದೆ.
ವಿವಿಯಲ್ಲಿ ಸಂಪೂರ್ಣ ಇ-ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಕುಲಪತಿ ಪ್ರೋ. ರಾಮಚಂದ್ರೇಗೌಡ ವಿವರಿಸಿದರು.
ಕುಲಸಚಿವ ಪ್ರೊ.ಬಸವರಾಜ ಪದ್ಮಶಾಲಿ ಅತಿಥಿಗಳನ್ನು ಪರಿಚಯಿಸಿದರು. ಕುಲಸಚಿವ(ಮೌಲ್ಯಮಾಪನ) ಪ್ರೊ.ವೀರನಗೌಡ ಪಾಟೀಲ, ಹಣಕಾಸು ಅಧಿಕಾರಿ ಪ್ರೊ.ಡಿ.ಎನ್.ಪಾಟೀಲ, ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಹತ್ತು ಸುವರ್ಣ ಪದಕ , 86 ಪಿ.ಎಚ್.ಡಿ ಪದವಿ ಪ್ರದಾನ:
ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ಸೌಮ್ಯ ಕುಂಬಾರ ಅವರಿಗೆ ಎರಡು ಸುವರ್ಣ ಪದಕ; ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಶ್ವೇತಾ ಬಸವರಾಜ ಗುಲನ್ನವರ ಒಂದು ಸುವರ್ಣ ಪದಕ; ಬಾಗಲಕೋಟೆಯ ಬಿ.ವಿ.ವಿ ಮ್ಯಾನೆಜ್ಮೆಂಟ್ ಸ್ಟಡಿಸ್ ವಿದ್ಯಾರ್ಥಿನಿ ಸಪ್ನಾ ಕಜೂರ ಒಂದು ಸುವರ್ಣ ಪದಕ ಹಾಗೂ ನಿಪ್ಪಾಣಿಯ ಕೆ.ಎಲ್.ಇ.ಎಸ್ ಜಿ.ಐ ಬಾಗೇವಾಡಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜ್ ನ ವಿದ್ಯಾರ್ಥಿನಿ ಜ್ಯೋತಿ ಅರುಣ ಚಾವನ ಅವರಿಗೆ ಒಂದು ಸುವರ್ಣ ಪದಕ ಹೀಗೆ ಒಟ್ಟು ಸ್ನಾತಕೋತ್ತರ ವಿಭಾಗದಲ್ಲಿ ನಾಲ್ಕು ವಿದ್ಯಾರ್ಥಿಗಳು ಐದು ಸುವರ್ಣ ಪದಕಗಳನ್ನು ನೀಡಲಾಯಿತು.
ಬೆಳಗಾವಿಯ ಕೆ.ಎಲ್.ಎಸ್ ಗೋಗಟೆ ಕಾಲೇಜ್ ಆಫ್ ಕಾಮರ್ಸ್ ನ ವಿದ್ಯಾರ್ಥಿನಿ ಅಕ್ಷತಾ ಬಾಲಕೃಷ್ಣ ಭಟ್ ಒಂದು ಸುವರ್ಣ ಪದಕ ಹಾಗೂ ಜಮಖಂಡಿಯ ತುಂಗಳ ಸ್ಕೂಲ್ ಆಪ್ ಬೆಸಿಕ್ ಆ್ಯಂಡ್ ಅಪ್ಲೈಡ್ ಸೈನ್ಸ್ ವಿದ್ಯಾರ್ಥಿನಿ ಸಾವಿತ್ರಿ ಹಿರೇಮಠ ಒಂದು ಸುವರ್ಣ ಪದಕ ಒಟ್ಟು ಸ್ನಾತಕ ವಿಭಾಗದಲ್ಲಿ ಎರಡು ಸುವರ್ಣ ಪದಕಗಳು; ಎಸ್.ಸಿ.ಪಿ ಕಲಾ ಮತ್ತು ಡಿ.ಡಿ.ಎಸ್ ಕಾಮರ್ಸ್ ಕಾಲೇಜ್ ನ ವಿದ್ಯಾರ್ಥಿನಿ ಗಾಯತ್ರಿ ಶಿವಲಿಂಗಪ್ಪ ಬಾಗೇವಾಡಿ ಒಂದು ಸುವರ್ಣ ಪದಕ, ಗೋಕಾಕನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನ ವಿದ್ಯಾರ್ಥಿನಿ ಸವಿತಾ ಪರಕನಟ್ಟಿ ಒಂದು ಸುವರ್ಣ ಪದಕ ಹಾಗೂ ಸವದತ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನ ವಿದ್ಯಾರ್ಥಿ ಸುರೇಶ ಮಲಕಪ್ಪ ಬಿದರಿ ಒಂದು ಸುವರ್ಣ ಪದಕ, ಒಟ್ಟು ಮೂರು ಸ್ನಾತಕ ಕಲಾ ವಿಭಾಗದ ವಿಷಯವಾರು ಸುವರ್ಣ ಪದಕ ಪಡೆದುಕೊಂಡರು.
ಒಟ್ಟು ಹತ್ತು ಸುವರ್ಣ ಪದಕಗಳನ್ನು ಒಂಬತ್ತು ಜನ ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಯಿತು. ಕಲಾ, ವಾಣಿಜ್ಯ, ಶಿಕ್ಷಣ ಮತ್ತು ವಿಜ್ಞಾನ ವಿಷಯದಲ್ಲಿ ಉನ್ನತ ಪದವಿ ಪಡೆದ 86 ಜನ ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ ಪದವಿಯನ್ನು ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ