ಪ್ರಗತಿವಾಹಿನಿ ಸುದ್ದಿ; ಖಾನಾಪುರ: ತಾಲ್ಲೂಕಿನಲ್ಲಿ ಸಧ್ಯ ಪ್ರಗತಿಯಲ್ಲಿರುವ ಬೆಳಗಾವಿ ಪಣಜಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಶಕ್ಕೆ ಪಡೆದ ತಮ್ಮ ಭೂಮಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಹೀಗಾಗಿ ಸಧ್ಯ ತಮ್ಮ ಜಮೀನಿನಲ್ಲಿ ಕಾಮಗಾರಿಯನ್ನು ತಡೆಹಿಡಿದಿದ್ದು, ತಮಗೆ ನ್ಯಾಯಸಮ್ಮತವಾದ ರೀತಿಯಲ್ಲಿ ಪರಿಹಾರ ಸಿಗುವವರೆಗೆ ತಮ್ಮ ಜಮೀನಿನಲ್ಲಿ ಹೆದ್ದಾರಿ ಕಾಮಗಾರಿ ಆರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟಣದ ಉದ್ಯಮಿ ಚಂದ್ರಶೇಖರ ಶೆಟ್ಟಿ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆದ್ದಾರಿ ಭೂಸ್ವಾಧೀನ ಪ್ರಕ್ರಿಯೆಯ ಸಕ್ಷಮ ಅಧಿಕಾರಿಗಳು ಹೆದ್ದಾರಿಗೆ ಭೂಮಿ ನೀಡಿದವರ ಪೈಕಿ ರಾಜಕೀಯ ಹಿನ್ನೆಲೆ ಹೊಂದಿದ ವ್ಯಕ್ತಿಯೊಬ್ಬರ ಎನ್.ಎ ಅಲ್ಲದ ಜಮೀನನ್ನು ಎನ್.ಎ ಎಂದು ತೋರಿಸಿ ಹೆಚ್ಚಿಗೆ ಪರಿಹಾರ ಮಂಜೂರು ಮಾಡಿದ್ದಾರೆ. ಕೃಷಿ ಉದ್ದೇಶಕ್ಕಾಗಿ ಇರುವ ಖುಷ್ಕಿ ಜಮೀನಿಗೆ ಪ್ರತಿ ಚ.ಮೀಗೆ ರೂ.897 ಪರಿಹಾರ ಒದಗಿಸಿದ್ದಾರೆ. ಆದರೆ ಎನ್.ಎ ಲೇ ಔಟ್ ಇರುವ ತಮ್ಮ ಜಮೀನಿಗೆ ಪ್ರತಿ ಚ.ಮೀಗೆ ಕೇವಲ ರೂ.215 ಪರಿಹಾರ ನೀಡುವುದಾಗಿ ಭೂ ಸ್ವಾಧೀನ ಅಧಿಕಾರಿಗಳು ಇತ್ತೀಚೆಗೆ ತಮಗೆ ಪತ್ರ ಬರೆದಿದ್ದು, ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿರುವ ಅಧಿಕಾರಿಗಳ ನಡೆಯಿಂದ ತಮಗೆ ಅನ್ಯಾಯವಾಗಿದೆ ಎಂದು ವಿವರಿಸಿದರು.
1976ರಲ್ಲಿ ಪಟ್ಟಣದ ಹೊರವಲಯದಲ್ಲಿರುವ ಹಾಗೂ ಹತ್ತರಗುಂಜಿ ಗ್ರಾಮ ವ್ಯಾಪ್ತಿಯ ರಿ.ಸ ನಂ.16ರಲ್ಲಿ ಕೃಷಿ ಜಮೀನನ್ನು ಖರೀದಿಸಿದ್ದು, 1993-94ರಲ್ಲಿ ಸದರೀ ಜಮೀನನ್ನು ಎನ್.ಎ ಮಾಡಿಸಿ 2005ರಲ್ಲಿ ಲೇ ಔಟ್ ಅಪ್ರೂವಲ್ ಪಡೆಯಲಾಗಿದೆ.
2009ರಲ್ಲಿ ಹೆದ್ದಾರಿ ಅಗಲೀಕರಣಕ್ಕಾಗಿ ಮೋಜಣಿ ನಡೆಸಿದ ಅಧಿಕಾರಿಗಳು ತಮ್ಮ ಜಮೀನಿನ ಪೈಕಿ 3,338 ಚ.ಮೀ ಜಮೀನನ್ನು ಹೆದ್ದಾರಿ ಕಾಮಗಾರಿಗೆ ಬಳಸಿಕೊಳ್ಳಲು ಗುರುತಿಸಿದ್ದರು. ಲಕ್ಷಾಂತರ ಬೆಲೆಬಾಳುವ ತಮ್ಮ ಎನ್.ಎ ಲೇ ಔಟ್ ಬಡಾವಣೆಯ 33 ಗುಂಟೆಗಳಷ್ಟು ಜಮೀನನ್ನು ವಶಕ್ಕೆ ಪಡೆದು ಕಾಮಗಾರಿ ಕೈಗೊಂಡಿದ್ದರು. ಆದರೆ 2019ರವರೆಗೂ ತಮಗೆ ಹೆದ್ದಾರಿ ಪ್ರಾಧಿಕಾರದಿಂದ ಪರಿಹಾರ ಸಿಗದ ಕಾರಣ ಫೆಬ್ರುವರಿ 2019ರಲ್ಲಿ ಪರಿಹಾರಕ್ಕಾಗಿ ಭೂ ಸ್ವಾಧೀನ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಅವರಿಂದ ತಮಗೆ ಉತ್ತರ ಬರಲಿಲ್ಲ ಎಂದರು.
82 ವರ್ಷ ವಯಸ್ಸಿನ ತಮಗೆ ಅಧಿಕಾರಿಗಳಿಂದ ನ್ಯಾಯ ಸಿಗಲಿಲ್ಲ. ಹೀಗಾಗಿ 2021ರಲ್ಲಿ ಪ್ರಧಾನಿಗೆ, ಮುಖ್ಯಮಂತ್ರಿಗೆ ಮತ್ತು ಹೆದ್ದಾರಿ ಪ್ರಾಧಿಕಾರದ ಮುಖ್ಯ ಕಚೇರಿಗೆ ಮನವಿ ಸಲ್ಲಿಸಿದ್ದು, ಅವರಿಂದಲೂ ಸರಿಯಾದ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ 2021ರಲ್ಲಿ ಈ ವಿಷಯವಾಗಿ ಉಚ್ಛ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದು, ನ್ಯಾಯಾಲಯ 2021ರ ಆ.13ರಂದು ಆದೇಶ ಹೊರಡಿಸಿ 3 ತಿಂಗಳ ಒಳಗೆ ತಮಗೆ ಸೂಕ್ತ ಪರಿಹಾರ ಮಂಜೂರು ಮಾಡುವಂತೆ ಹೆದ್ದಾರಿ ಭೂಸ್ವಾಧೀನ ಪ್ರಕ್ರಿಯೆಯ ಅಧಿಕಾರಿಗಳಿಗೆ ತಿಳಿಸಿತ್ತು. ನ್ಯಾಯಾಲಯದ ಆದೇಶ ಹೊರಬಿದ್ದು ಆರು ತಿಂಗಳು ಕಳೆದರೂ ಭೂಸ್ವಾಧೀನ ಅಧಿಕಾರಿಗಳಿಂದ ತಮಗೆ ಪರಿಹಾರ ದೊರಕದ ಕಾರಣ ಹೆದ್ದಾರಿ ಕಾಮಗಾರಿ ಕೈಗೊಳ್ಳದಂತೆ ತಡೆ ಹಿಡಿದಿರುವುದಾಗಿ ಶೆಟ್ಟಿ ಮಾಹಿತಿ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ