ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಿದ್ಯಾರ್ಥಿಗಳು ಶ್ರಮಪಟ್ಟು, ಸವಾಲುಗಳನ್ನು ಎದುರಿಸಿ ಆ ಮೂಲಕ ಕಲಿತ ವಿದ್ಯೆ ಶಾಶ್ವತವಾದುದು ಮತ್ತು ಅರ್ಥ ಪೂರ್ಣವಾಗಿರುತ್ತದೆ ಎಂದು ಆರ್. ಎಲ್. ವಿಜ್ಞಾನ ಮಹಾವಿದ್ಯಾಲಯದ ಭೌತ ವಿಜ್ಞಾನ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ. ಶಿವಪ್ಪ ದಳವಾಯಿ ಅಭಿಪ್ರಾಯಪಟ್ಟರು.
ಅವರು ಇಂದು ಶಿವಬಸವ ನಗರದ ಡಾ. ಸ. ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಬೆಳಗಾವಿ ಅಸೋಸಿಯೇಷನ್ ಫಾರ್ ಸೈನ್ಸ್ ಎಜ್ಯುಕೇಶನ್ ಇವುಗಳ ಸಹಯೋಗದಲ್ಲಿ ಆಯೋಜಿಸಿದ್ದ ಬೇಸಿಗೆ ವಿಜ್ಞಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬಿ.ಕೆ. ಕಾಲೇಜಿನ ಭೌತ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಡಿ. ಎನ್. ಮಿಸಾಳೆ ಮಾತನಾಡಿ, ಮಕ್ಕಳಲ್ಲಿ ವಿಜ್ಞಾನ ವಿಷಯದ ಕುರಿತು ಆಸಕ್ತಿ ಕೆರಳಿಸಿ, ಕುತೂಹಲ ಹುಟ್ಟಿಸಿ, ಆಟಿಕೆ ಮತ್ತು ಚಟುವಟಿಕೆಗಳ ಮೂಲಕ ವಿಷಯ ಬೋಧನೆ ಮಾಡಿದರೆ ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದರು.
ಬೆಳಗಾವಿ ಅಸೋಸಿಯೇಷನ್ ಫಾರ್ ಸೈನ್ಸ್ ಎಜ್ಯುಕೇಶನ್ ಕಾರ್ಯದರ್ಶಿ ರಾಜನಂದ ಘಾರ್ಗಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಆರ್.ಎಲ್. ವಿಜ್ಞಾನ ಮಹಾವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಯು.ಆರ್. ರಜಪೂತ, ಉಪನ್ಯಾಸಕರಾದ ಸುಷ್ಮಾ ಕಟ್ಟಿ, ಶ್ರೀಧರ ವಡಗಾವಿ ಉಪಸ್ಥಿತರಿದ್ದರು. ರಾಜಶೇಖರ ಪಾಟೀಲ ನಿರೂಪಿಸಿ ವಂದಿಸಿದರು. ಇದೇ ವೇಳೆ ಶೂನ್ಯ ನೆರಳು ದಿನದ ವಿಶೇಷತೆಯನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತೋರಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ