ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಕನ್ನಡ ಹೋರಾಟಗಾರ ರಾಮ ಬಾಳಪ್ಪ ವನ್ನೂರ (51)ಸೋಮವಾರ ನಿಧನರಾದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕರಾಗಿದ್ದ ರಾಮು, ಬೆಳಗಾವಿಯ ಗಡಿ ಸಮಸ್ಯೆಯ ಹೋರಾಟದಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದರು. ನಾಡು, ನುಡಿ, ಜಲದ ರಕ್ಷಣೆಯ ಸಲುವಾಗಿ ಬೆಂಗಳೂರು, ದೆಹಲಿವರೆಗೆ ಹೋಗಿ ಹೋರಾಟ ಮಾಡಿದ ಇವರ ಮೇಲೆ 18 ಕೇಸುಗಳು ಇದ್ದವು. ಅದರಲ್ಲಿ 15 ಕೇಸುಗಳನ್ನು ಸರಕಾರ ಹಿಂಪಡೆದಿದೆ. ಕನ್ನಡದ ನಾಡು ನುಡಿಯ ಹೋರಾಟದಲ್ಲಿ ಭಾಗವಹಿದ್ಧಕ್ಕಾಗಿ ಅನೇಕ ಸಲ ಹಿಂಡಲಗಾ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದರು.
ಇವರು ಕಲಿತದ್ದು ಕೇವಲ 5 ನೇ ತರಗತಿ. ಇವರು ಕಟ್ಟಾ ಕನ್ನಡದ ಅಭಿಮಾನಿಗಳು. ಸಂತಿಬಸ್ತವಾಡ ಗ್ರಾಮ ಪಂಚಾಯತ್ ಸದಸ್ಯರಾಗಿ ಎರಡನೆಯ ಅವಧಿಗೆ ಆಯ್ಕೆ ಆಗಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದರು. ಸಂತಿಬಸ್ತವಾಡ ಗ್ರಾಮದ ಜನರ ಮನಸ್ಸನ್ನು ಗೆದ್ದಿರುವ ಇವರ ಅಂತ್ಯ ಸಂಸ್ಕಾರಕ್ಕೆ ಜನ ಸಾಗರವೆ ಹರಿದು ಬಂದಿತು.
ಇವರು ತಮ್ಮ ಉಪ ಜೀವನಕ್ಕೆ ಟ್ರಕ್ ನ್ನು ಓಡಿಸುತ್ತಿದ್ದರು. ಇದರಿಂದ ಬಂದ ಹಣದಿಂದ ಜೀವನ ನಡೆಸುತ್ತಿದ್ದರು. ಇವರು ತಾಯಿ , ಪತ್ನಿ, 3 ಮಕ್ಕಳು ಅಪಾರ ಬಂಧುಗಳನ್ನು ಅಗಲಿದ್ದಾರೆ.
ಇವರ ಅಂತಿಮ ಸಂಸ್ಕಾರಕ್ಕೆ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಮಹಾದೇವ ತಳವಾರ, ಸುರೇಶ ಗವನ್ನವರ, ರಾಜು ನಾಸಿಪುಡಿ, ಗಣೇಶ್ ರೋಕಡೆ, ದೇವೆಂದ್ರ ತಳವಾರ, ಬಾಳು ಜಡಗಿ, ಗ್ರಾಮ ಪಂಚಾಯತ್ ಅಧ್ಯಕ್ಷರು ವಿಠ್ಠಲ ಅಂಕಲಗಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಂಜಯ ಚನ್ನವರ. ಗ್ರಾಮ ಪಂಚಾಯತ್ ಸರ್ವ ಸದಸ್ಯರು, ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ