Latest

‘ಕೆಜಿಎಫ್​ 2’ ಟ್ರೇಲರ್​ ರಿಲೀಸ್​ಗೆ ಬರ್ತಿದ್ದಾರೆ ಸ್ಟಾರ್​ ನಿರೂಪಕ ಕರಣ್​ ಜೋಹರ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಿರೂಪಣೆಯಲ್ಲಿ ಕರಣ್​ ಜೋಹರ್​ ಅವರ ಅನುಭವ ದೊಡ್ಡದು. ಈಗ ಅವರು ‘ಕೆಜಿಎಫ್​: ಚಾಪ್ಟರ್​ 2’ ಟ್ರೇಲರ್​ ಬಿಡುಗಡೆ ಸಮಾರಂಭದ ನಿರೂಪಣೆ ಮಾಡಲು ಒಪ್ಪಿಕೊಂಡಿದ್ದಾರೆ.

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಸ್ಥಾನ ಪಡೆದಿರುವ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭ ಆಗಿದೆ. ಚಿತ್ರದ ಪ್ರಚಾರಕ್ಕಾಗಿ ಹತ್ತು-ಹಲವು ಪ್ಲ್ಯಾನ್​ಗಳನ್ನು ಮಾಡಿಕೊಳ್ಳಲಾಗಿದೆ. ಆ ಪೈಕಿ ಟ್ರೇಲರ್​ (KGF Chapter 2 Trailer) ರಿಲೀಸ್​ ಕಾರ್ಯಕ್ರಮದ ಬಗ್ಗೆ ದೊಡ್ಡ ಮಟ್ಟದ ಕಾತರ ಮೂಡಿದೆ. ಯಾಕೆಂದರೆ ಇದು ಪ್ಯಾನ್​ ಇಂಡಿಯಾ ಸಿನಿಮಾ. ಎಲ್ಲ ರಾಜ್ಯಗಳಲ್ಲೂ ‘ಕೆಜಿಎಫ್​ ಚಾಪ್ಟರ್​ 2’ ಚಿತ್ರ ಧೂಳೆಬ್ಬಿಸುವುದು ಖಚಿತ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆಯೇ ‘ಕೆಜಿಎಫ್​ 2’ ಟ್ರೇಲರ್​ ಬಿಡುಗಡೆ ಮಾಡಲು ‘ಹೊಂಬಾಳೆ ಫಿಲ್ಮ್ಸ್’ ನಿರ್ಧರಿಸಿದೆ. ಟ್ರೇಲರ್​ ಬಿಡುಗಡೆ ಕಾರ್ಯಕ್ರಮದ ನಿರೂಪಣೆಗೆ ಕರಣ್​ ಜೋಹರ್​ (Karan Johar) ಅವರನ್ನು ಆಹ್ವಾನಿಸಲಾಗುತ್ತಿದೆ. ಈ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಹಲವು ವರ್ಷಗಳಿಂದ ಅನೇಕ ಪ್ರತಿಷ್ಠಿತ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ ಅನುಭವ ಕರಣ್​ ​ಜೋಹರ್​ ಅವರಿಗೆ ಇದೆ. ಈಗ ಅವರು ಕನ್ನಡ ಸಿನಿಮಾದ ಸಲುವಾಗಿ ಬೆಂಗಳೂರಿಗೆ ಬಂದು ನಿರೂಪಣೆ ಮಾಡಲಿದ್ದಾರೆ. ಯಶ್​ ಅಭಿಮಾನಿಗಳು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಟ್ರೇಲರ್​ ಬಿಡುಗಡೆ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಕಾದಿದ್ದಾರೆ. ಈ ಇವೆಂಟ್​ನಲ್ಲಿ ನಟ ಶಿವರಾಜ್​ಕುಮಾರ್ ಅವರು ಮುಖ್ಯ ಅತಿಥಿ ಆಗಿರಲಿದ್ದಾರೆ ಎಂಬುದು ಕೂಡ ವಿಶೇಷ.

ಬೆಂಗಳೂರಿನಲ್ಲಿ ಮಾ.27ರಂದು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಟ್ರೇಲರ್​ ಲಾಂಚ್​ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ನಿರ್ದೇಶಕ ಪ್ರಶಾಂತ್​ ನೀಲ್​, ನಿರ್ಮಾಪಕ ವಿಜಯ್​ ಕಿರಗಂದೂರು, ಕಲಾವಿದರಾದ ಯಶ್​, ಸಂಜಯ್​ ದತ್​, ರವೀನಾ ಟಂಡನ್​, ಶ್ರೀನಿಧಿ ಶೆಟ್ಟಿ ಮುಂತಾದವರು ಭಾಗಿ ಆಗಲಿದ್ದಾರೆ. ಬೇರೆ ಬೇರೆ ರಾಜ್ಯಗಳಿಂದ ಪತ್ರಕರ್ತರನ್ನು ಆಹ್ವಾನಿಸಲಾಗಿದೆ. ಅದ್ದೂರಿಯಾಗಿ ನಡೆಯುವ ಈ ಕಾರ್ಯಕ್ರಮವನ್ನು ಕರಣ್​ ಜೋಹರ್​ ನಡೆಸಿಕೊಡಲಿದ್ದಾರೆ.

ನಿರೂಪಣೆಯಲ್ಲಿ ಕರಣ್​ ಜೋಹರ್​ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ‘ಕಾಫಿ ವಿಥ್​ ಕರಣ್​’, ‘ಕಾಲಿಂಗ್​ ಕರಣ್​’, ‘ವಾಟ್​ ದ ಲವ್​’ ಮುಂತಾದ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಬಾಲಿವುಡ್​ನ ಅನೇಕ ಅವಾರ್ಡ್​ ಫಂಕ್ಷನ್​ಗಳನ್ನು ಅವರು ನಿರೂಪಿಸಿದ್ದಾರೆ. ‘ಹಿಂದಿ ಬಿಗ್​ ಬಾಸ್​ ಒಟಿಟಿ’ ಶೋ ಕೂಡ ಕರಣ್​ ಜೋಹರ್​ ಅವರ ನಿರೂಪಣೆಯಲ್ಲೇ ಮೂಡಿಬಂದಿತ್ತು. ತುಂಬ ಲವಲವಿಕೆಯಿಂದ ಅವರು ಮಾಡುವ ನಿರೂಪಣೆ ಜನರಿಗೆ ಸಖತ್​ ಇಷ್ಟ ಆಗುತ್ತದೆ. ಆದರೆ ಅದೆಲ್ಲವೂ ಹಿಂದಿ ಸಿನಿಮಾಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು. ಈ ಬಾರಿ ಅವರು ಕನ್ನಡ ಸಿನಿಮಾದ ಈ ಕಾರ್ಯಕ್ರಮವನ್ನು ಹೇಗೆ ನಿರೂಪಿಸಬಹುದು ಎಂಬ ಕೌತುಕ ಮನೆ ಮಾಡಿದೆ.

ಪ್ರಶಾಂತ್​ ನೀಲ್​ ನಿರ್ದೇಶನದ ಈ ಸಿನಿಮಾ ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಗಳಿಗೂ ಡಬ್​ ಆಗಿ ಏ.14ರಂದು ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಈಗಾಗಲೇ ರಿಲೀಸ್​ ಆಗಿರುವ ‘ತೂಫಾನ್​..’ ಹಾಡು ಧೂಳೆಬ್ಬಿಸುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button