ಪ್ರಗತಿ ವಾಹಿನಿ ಸುದ್ದಿ ಚೆನ್ನೈ –
ಶಿಕ್ಷಕಿಯೊಬ್ಬಳು ತಾನು ಪಾಠ ಮಾಡುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿಯನ್ನೇ ಪ್ರೀತಿಸಿ ಮದುವೆಯಾಗಿ ಜೈಲು ಸೇರಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ತಿರುಚನಾಪಳ್ಳಿಯ ಶಾಲೆಯೊಂದರ ಶಿಕ್ಷಕಿ ಶರ್ಮಿಳಾ ತಾನು ಕಲಿಸುತ್ತಿದ್ದ ೧೧ನೇ ತರಗತಿಯ ೧೭ ವರ್ಷದ ಬಾಲಕನನ್ನೇ ಪ್ರೀತಿ ಮಾಡಿದ್ದಾಳೆ. ಇವರಿಬ್ಬರ ನಡುವಿನ ಪ್ರೀತಿ ಹೆಮ್ಮರವಾಗಿ ಬೆಳೆದು ಮದುವೆಯವರೆಗೂ ಹೋಗಿದೆ. ಈಗ ಶಿಕ್ಷಕಿ ಶರ್ಮಿಳಾ ಪೋಕ್ಸೊ ಕಾಯ್ದೆಯಡಿ ಜೈಲು ಸೇರಿದ್ದಾಳೆ.
ಬಾಲಕ ಕಳೆದ ಕೆಲ ತಿಂಗಳಿಂದ ಶರ್ಮಿಳಾ ಜೊತೆ ವಿಪರೀತವಾಗಿ ಫೋನ್‌ನಲ್ಲಿ ಮಾತಾಡುತ್ತಿದ್ದುದನ್ನು ಬಾಲಕನ ತಂದೆ ತಾಯಿ ಗಮನಿಸಿದ್ದರು. ಆದರೆ ಅವರಿಗೆ ಅದು ಶಿಕ್ಷಕಿ ಶಿಷ್ಯನ ಸಂಬಂಧ ಎಂದಷ್ಟೇ ತಿಳಿದಿದ್ದರು.
ಆದರೆ ಮಾ.೫ರಂದು ಕಾಲೇಜಿಗೆ ಹೋದ ಬಾಲಕ ವಾಪಸ್ ಮನೆಗೆ ಬಂದಿಲ್ಲ. ಈ ಕುರಿತು ಪೊಲೀಸರಿಗೆ ಬಾಲಕನ ಕುಟುಂಬದವರು ದೂರು ನೀಡಿದ್ದರು. ಅಲ್ಲದೇ ಅದೇ ದಿನ ಶಿಕ್ಷಕಿ ಶರ್ಮಿಳಾ ಕೂಡ ಶಾಲೆಗೆ ಬಂದಿಲ್ಲ ಎಂಬುದು ಗೊತ್ತಾಗಿದೆ.
ಪೊಲೀಸರು ಫೋನ್ ಮಾಡಿ ನೋಡಿದಾಗ ಇವರಿಬ್ಬರ ಫೋನ್‌ಗಳು ಸ್ವಿಚ್ ಆಫ್ ಆಗಿದ್ದವು.
ಇತ್ತ ಬಾಲಕನನ್ನು ತಂಜಾವೂರಿಗೆ ಕರೆದೊಯ್ದ ಶಿಕ್ಷಕಿ ಶರ್ಮಿಳಾ ಅಲ್ಲಿನ ದೇವಸ್ಥಾನವೊಂದರಲ್ಲಿ ಆತನನ್ನು ವಿವಾಹವಾಗಿದ್ದಾಳೆ. ಬಳಿಕ ಶರ್ಮಿಳಾಳ ಸ್ನೇಹಿತೆಯ ಮನೆಯಲ್ಲಿ ಇಬ್ಬರೂ ಆಶ್ರಯ ಪಡೆದಿದ್ದಾರೆ.
ಮಾ. ೨೪ರಂದು ಶರ್ಮಿಳಾ ತನ್ನ ಫೋನ್‌ಗೆ ಬೇರೆ ಸಿಮ್ ಹಾಕುತ್ತಿದ್ದಂತೆ ಪೊಲೀಸರಿಗೆ ಶರ್ಮಿಳಾ ತಂಜಾವೂರಿನಲ್ಲಿರುವುದು ಪತ್ತೆಯಾಗಿದೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಶಿಕ್ಷಕಿ ಶರ್ಮಿಳಾ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದಿದ್ದಾರೆ. ಬಾಲಕನನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಲಾಗಿದೆ.
ಅಪಘಾತದಲ್ಲಿ ಗಾಯಗೊಂಡಿದ್ದ ಮತ್ತೋರ್ವ ವಿದ್ಯಾರ್ಥಿ ಸಾವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ