Kannada NewsKarnataka NewsLatest

ಹುಣಸೆ ಬೀಜ ನುಂಗಿ ಜೀವನ್ಮರಣ ಹೋರಾಟದಲ್ಲಿದ್ದ ಬಾಲಕಿಯನ್ನು ಬದುಕಿಸಿದ ಕೆಎಲ್ಇ ವೈದ್ಯರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 11 ವರ್ಷದ ಬಾಲಕಿಯು ತೀವ್ರ ಉಸಿರಾಟದ ತೊಂದರೆ, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತ ಚಿಕಿತ್ಸೆಗಾಗಿ ಕೆಎಲಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ಆಗಮಿಸಿದ್ದಳು.

ಬಾಲಕಿಯು ವಸ್ತು ನುಂಗಿದ ಯಾವುದೇ ಇತಿಹಾಸವನ್ನು ವೈದ್ಯರಿಗೆ ತಿಳಿಸಲಿಲ್ಲ. ಚಿಕ್ಕಮಕ್ಕಳ ವೈದ್ಯರು ತಪಾಸಿಸಿದರೂ ಕೂಡ ಯಾವುದೇ ಸುಳಿವು ಸಿಗಲಿಲ್ಲ. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಬಾಲಕಿಯನ್ನು ಹೆಚ್‌ಆರ್‌ಸಿಟಿಗೆ ಒಳಪಡಿಸಿದಾಗ ಶ್ವಾಸನಾಳದಲ್ಲಿ ಯಾವುದೋ ವಸ್ತು ಸಿಕ್ಕಿಹಾಕಿಕೊಂಡಿರುವದು ಕಂಡುಬಂದಿತು. ತಡಮಾಡದೇ ಚಿಕ್ಕಮಕ್ಕಳ ತಜ್ಞಶಸ್ತ್ರಚಿಕಿತ್ಸಕರಾದ ಡಾ. ಸ್ವಪನೀಲ್ ಪಟ್ಟಣಶೆಟ್ಟಿ ಅವರು ಶಸ್ತ್ರಚಿಕಿತ್ಸೆ ನೆರವೇರಿಸಿ ಬಾಲಕಿ ನುಂಗಿದ್ದ ಹುಣಸೆ ಬೀಜವನ್ನು ಹೊರತೆಗೆದು ಜೀವ ಉಳಿಸುವಲ್ಲಿ ಯಶಸ್ವಿಯಾದರು.
ಚಿಕ್ಕಮಕ್ಕಳ ತಜ್ಞವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಚಿಕಿತ್ಸೆಗೆ ಸ್ಪಂಧಿಸದೇ ದಿನದಿಂದ ದಿನಕ್ಕೆ ಶ್ವಾಸನಾಳಕ್ಕೆ ತೀವ್ರ ಗಾಯವಾಗಿ ಬಾಲಕಿಯ ಆರೋಗ್ಯ ಗಂಭೀರವಾಗತೊಡಗಿತು. ಸ್ಕ್ಯಾನ್ ಮಾಡಿ ನೋಡಿದಾಗ ಶ್ವಾಸನಾಳದಲ್ಲಿ ವಸ್ತು ಇರುವದು ಕಂಡುಬಂದಿತು. ಅದನ್ನು ಸಮಗ್ರವಾಗಿ ತಪಾಸಿಸಿದಾಗ ಹುಣಸೆ ಬೀಜ ಎಂಬುದು ಗೊತ್ತಾಯಿತು.

ಹುಣಸೆ ಬೀಜವನ್ನು ಹೊರತೆಗೆಯುವದು ಅತ್ಯಂತ ಕಠಿಣ ಮತ್ತು ಕ್ಲಿಷ್ಟಕರವಾಗಿತ್ತು. ಅತ್ಯಾಧುನಿಕ ತಂತ್ರಜ್ಞಾನದ ಬ್ರೊಂಕೊಸ್ಕೋಪಿ ಶಸ್ತ್ರಚಿಕಿತ್ಸೆಯ ಮೂಲಕ ಹುಣಸೆ ಬೀಜವನ್ನು ತೆಗೆಯುವಲ್ಲಿ ವೈದ್ಯರು ಯಶಸ್ವಿಯಾದರು. ನಂತರ ೪ನೇ ದಿನಕ್ಕೆ ಬಾಲಕಿಯನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಿಕೊಡಲಾಯಿತು.
ಮಕ್ಕಳ ಶ್ವಾಸನಾಳದಲ್ಲಿ ಯಾವುದಾದರೊಂದು ವಸ್ತು ಸಿಕ್ಕಿಹಾಕಿಕೊಂಡರೆ ಶ್ವಾಸನಾಳಕ್ಕೆ ಗಾಯವುಂಟಾಗಿ ಉಸಿರಾಟಕ್ಕೆ ತೊಂದರೆಯುಂಟಾಗುತ್ತದೆ. ಅಲ್ಲದೇ ಉಸಿರಾಟಕ್ಕೆ ತೀವ್ರ ತೊಂದರೆಯುಂಟಾಗಿ ಜೀವಕ್ಕೆ ಕುತ್ತು ಬರಬಹುದು.
ಚಿಕ್ಕಮಕ್ಕಳಲ್ಲಿ ಈ ರೀತಿ ವಸ್ತುಗಳನ್ನು ನುಂಗುವದು ಸಾಮಾನ್ಯ. ಬಾಲಕಿ ಯಾವ ವಸ್ತು ನುಂಗಿದ್ದಾಳೆ ಎನ್ನುವ ಕುರಿತು ಪಾಲಕರಿಗೆ ಅರಿವು ಇರಲಿಲ್ಲ. ಮಕ್ಕಳು ಆಟವಾಡುವಾಗ ಪಾಲಕರು ನಿರ್ಲಕ್ಷವಹಿಸದೇ ಅವರತ್ತ ಗಮನಹರಿಸಬೇಕು. ಯಾವುದೇ ಕಾರಣಕ್ಕೂ ಮಕ್ಕಳನ್ನು ಒಬ್ಬೊಬ್ಬರನ್ನು ಬಿಡದೇ ಅವರೊಂದಿಗೆ ಇರಬೇಕು. ಚಿಕ್ಕಮಕ್ಕಳಿಗೆ ಆಹಾರ ಅಥವಾ ವಸ್ತುಗಳ ಕುರಿತು ಸರಿಯಾದ ಮಾಹಿತಿ ಇರುವುದಿಲ್ಲ. ಆದ್ದರಿಂದ ಪಾಲಕರು ಎಚ್ಚರ ವಹಿಸಬೇಕೆಂದು ಡಾ. ಸ್ವಪನೀಲ್ ಪಟ್ಟಣಶೆಟ್ಟಿ ಅವರು ಸಲಹೆ ನೀಡುತ್ತಾರೆ. ಬಾಲಕಿ ಪಾಲಕರು ವೈದ್ಯರಿಗೆ ಮತ್ತು ಆಸ್ಪತ್ರೆಯ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಡಾ. ಸ್ವಪನೀಲ್ ಪಟ್ಟಣಶೆಟ್ಟಿ, ಡಾ. ತನ್ಮಯಾ ಮೆಟಗುಡ್, ಡಾ. ಸುಜಾತಾ ಜಾಲಿ, ಡಾ ಜೀಶನ್ ದೇಸಾಯಿ ಹಾಗೂ ಅವರ ತಂಡವನ್ನು ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ. ಜಾಲಿ ಅವರು ಅಭಿನಂದಿಸಿದ್ದಾರೆ.

For Enghlish – http://pragativahini.in

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button