Kannada NewsKarnataka News

ವಿಶ್ವರಂಗಭೂಮಿ ದಿನಾಚರಣೆ: ರಂಗಸಖ ಪ್ರಶಸ್ತಿ ಪ್ರದಾನ

ಮೂಢನಂಬಿಕೆಯನ್ನು ಬಿಡಬೇಕು, ನಂಬಿಕೆಯನ್ನೇ ಬಿಡಬಾರದು –  ಎಸ್. ಎನ್. ಸೇತುರಾಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  – ಮೂಢನಂಬಿಕೆಯನ್ನು ಬಿಡಬೇಕು ಆದರೆ ನಂಬಿಕೆಯನ್ನೇ ಬಿಡಬಾರದು. ಒಬ್ಬರಿಗೊಬ್ಬರು ನಂಬಿಕೆಯಿಂದ ಜೀವನ ನಡಿಸೋಣ. ಬೇರೆಯವರು ನಮ್ಮನ್ನು ನಂಬುವ ಯೋಗ್ಯತೆಯನ್ನು ಉಳಿಸಿಕೊಳ್ಳೋಣ ಎಂದು ಖ್ಯಾತ ನಟ, ನಿರ್ದೇಶಕ, ಕಿರುತೆರೆ ಕಲಾವಿದ ಎಸ್. ಎನ್ ಸೇತುರಾಮ ಇಂದಿಲ್ಲಿ ಹೇಳಿದರು.

ನಗರದ ರಂಗಸಂಪದ ತಂಡದವರು ವಿಶ್ವ ರಂಗಭೂಮಿ ದಿನಾಚರಣೆ ನಿಮಿತ್ತ ಇದೇ ದಿ. ೨೭ ರಂದು ರಂಗಸಖ ಪ್ರಶಸ್ತಿ ೨೦೨೨ ಪ್ರಶಸ್ತಿ ಪ್ರದಾನ ಮತ್ತು ೩ ದಿನಗಳ ನಾಟಕೋತ್ಸವ ಕಾರ‍್ಯಕ್ರಮವನ್ನು ಬೆಳಗಾವಿ ತಿಲಕಚೌಕ ಹತ್ತಿರವಿರುವ ಲೋಕಮಾನ್ಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸೇತುರಾಮ ಮೇಲಿನಂತೆ ಹೇಳಿದರು. ಕಲೆ ಮತ್ತು ಸಂಸ್ಕೃತಿಯನ್ನು ಒಟ್ಟೊಟ್ಟಿಗೆ ತೆಗೆದುಕೊಂಡು ಹೋಗಬೇಕು. ಸಂಸ್ಕೃತಿ ಅಂದರೆ ಸತ್ಯ ಹೇಳಬೇಕು, ಪ್ರಾಮಾಣಿಕರಾಗಿರಬೇಕು. ಇವೆಲ್ಲವುಗಳನ್ನು ಬಿಟ್ಟು ಕಲೆ ಮಾಡ್ತೀನಿ ಅಂದರೆ ಅದು ಕಪ್ಪುಕಲೆಯಾಗಿ ಉಳಿಯುತ್ತೆ ಅಷ್ಟೆ ಎಂದು ಹೇಳಿದರು.

ರಂಗಕರ್ಮಿ ಪ್ರಾಚಿ ದೇಶಪಾಂಡೆ ಅವರಿಗೆ ರಂಗಸಖ-೨೦೨೨ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು, ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು. ನನಗೆ ನಟನೆಗೆ ಪ್ರವೇಶ ನೀಡಿದ್ದು ರಂಗಸಂಪದ. ನಾನು ದೊಡ್ಡ ಅಧಿಕಾರಿ ಎಂದು ಹೇಳಿಕೊಳ್ಳುವುದಕ್ಕಿಂತ. ನಾನೊಬ್ಬ ಕಲಾವಿದೆ ಎಂದು ಹೇಳಿಕೊಳ್ಳಲು ಅಭಿಮಾನವೆನ್ನಿಸುತ್ತದೆ ಎಂದು ಹೇಳಿದರು. ಶಿರೀಷ ಜೋಶಿ ರಂಗಸಖ ಪ್ರಶಸ್ತಿ ವಾಚನವನ್ನು ಮಾಡಿದರು.

ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ಜೀವವಿಮಾ ನಿಗಮದ ಹಿರಿಯ ವಿಭಾಗಾಧಿಕಾರಿ ಬೆಳಗಾವಿ ಅಜಿತ ವಾರಕರಿ, ರಂಗಸಂಪದ ಗೌರವಾಧ್ಯಕ್ಷ ಶ್ರೀಪತಿ ಮಂಜನಬೈಲು, ಅಧ್ಯಕ್ಷ ಅರವಿಂದ ಕುಲಕರ್ಣಿ ಮಾತನಾಡಿದರು.

ಈ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ರವಿ ಆಚಾರ್ಯ ಹಾಗೂ ಜಾನಪದ ಅಕಾಡಮಿ ಪ್ರಶಸ್ತಿ ವಿಜೇತೆ ರುದ್ರಾಂಬಿಕಾ ಯಾಳಗಿ ಅವರನ್ನು ಸಾನ್ಮಾನಿಸಿ ಗೌರವಿಸಲಾಯಿತು.

ಅನನ್ಯ ತಂಡ ಬೆಂಗಳೂರು ಇವರಿಂದ ಎಸ್. ಎನ್. ಸೇತುರಾಮ ರಚಿಸಿ, ನಿರ್ದೇಶಿಸಿ ನಟಿಸಿದ ’ಉಚ್ಛಿಷ್ಟ’ ನಾಟಕ ಪ್ರದರ್ಶನಗೊಂಡಿತು. ಮಹಿಳೆಯರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುವ ಪುರುಷರ ಕುರಿತು ಹೆಣೆಯಲಾದ ಕತೆ ಇದಾಗಿದ್ದು ಚುರುಕಾದ ಸಂಭಾಷಣೆ, ಅತ್ಯುತ್ಮಮ ಅಭಿನಯದಿಂದ ಎಲ್ಲರ ಗಮನ ಸೆಳೆಯಿತು.

ಕು. ಪ್ರತೀಕ್ಷಾ, ಪ್ರಿಯಾಂಕಾ ಕಾರಜೋಳ ಪ್ರಾರ್ಥಿಸಿದರು. ವಿಠ್ಠಲ ಅಸೂದೆ ಸ್ವಾಗತಿಸಿದರು. ಅನಂತ ಪಪ್ಪು ನಿರೂಪಿಸಿದರು. ಶಾಂತಾ ಆಚಾರ್ಯ ವಿಶ್ವರಂಗ ಭೂಮಿ ಸಂದೇಶವನ್ನು ವಾಚಿಸಿದರು. ಪದ್ಮಾ ಕುಲಕರ್ಣಿ, ಪ್ರಸಾದ ಕಾರಜೋಳ ಪರಿಚಯಿಸಿದರು. ಶರಣಗೌಡ ಪಾಟೀಲ ವಂದಿಸಿದರು.

 

ಪ್ರಿಂಟಿಂಗ್ ಮಷಿನ್

ರಂಗಸಂಪದ ತಂಡದಿಂದ ಇದೇ ದಿ. ೨೬ ರಂದು ನಗರದ ಲೋಕಮಾನ್ಯ ರಂಗಮಂದಿರದಲ್ಲಿ ಶಿರೀಷ ಜೋಶಿ ರಚಿಸಿ ನಿರ್ದೇಶಿಸಿದ ’ಪ್ರಿಂಟಿಂಗ್ ಮಷಿನ್’ ನಾಟಕ ಪ್ರದರ್ಶನಗೊಂಡಿತು. ಬೆಳಗಾವಿಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿ. ಜಯದೇವರಾವ ಕುಲಕರ್ಣಿಯವರ ಜೀವನದಲ್ಲಿ ಜರುಗಿದ ಘಟನೆಯೊಂದರ ಆದರಿಸಿ ಬರೆದ ನಾಟಕ ಇದಾಗಿದೆ.
ರಮೇಶ ಪರವೀನಾಯಕ, – ’ಪ್ರಿಂಟಿಂಗ್ ಮಷಿನ್’ ಅರ್ಥಪೂರ್ಣವಾದಂತಹ ನಾಟಕ. ಸ್ವಾತಂತ್ರ್ಯ ಸಂಗ್ರಾಮದ ಒಂದು ನೆನಪನ್ನು ತಂದುಕೊಟ್ಟಿತು. ರಂಗಾಯಣ ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುತ್ತದೆ. ಬೆಳಗಾವಿಯಲ್ಲಿ ರಂಗಭೂಮಿ ನಶಿಸಿ ಹೋಗ್ತಾಯಿದೆ ಎಂಬ ಕೊರಗು ನನಗಿತ್ತು. ರಂಗಸಂಪದ ಅದಕ್ಕೆ ಮತ್ತೆ ಮರುಜೀವ ಕೊಟ್ಟಿದೆ. ರಂಗಸಂಪದ ಒಳ್ಳೊಳ್ಳೆ ನಾಟಕಗಳನ್ನು ಕೊಡಲಿ.
ಮರಾಠಿ ಜನತಾ ರಾಜ ನಾಟಕದ ಮಾದರಿಯಲ್ಲಿ ನಾವು ’ವೀರ ರಾಣಿ ಕಿತ್ತೂರು ಚೆನ್ನಮ್ಮ’ ನಾಟಕ ಪ್ರದರ್ಶನವನ್ನಿಟ್ಟುಕೊಳ್ಳುವವರಿದ್ದೇವೆ. ಒಟ್ಟಿಗೆ ಸುಮಾರು ಎರಡನೂರು ಜನ ಕಲಾವಿದರು, ಆನೆ, ಒಂಟೆ, ಕುದುರೆ ಒಂದೇ ವೇದಿಕೆಯಲ್ಲಿ ಬರುತ್ತಾರೆ. ಪ್ರಥಮ ಪ್ರದರ್ಶನ ಕಿತ್ತೂರ ಅಥವಾ ಬೆಳಗಾವಿಯಲ್ಲಿ ಮಾಡುವ ವಿಚಾರವಿದೆ.

ಕಾರ‍್ಯಕ್ರಮದ ಪ್ರಾಯೋಜಕತ್ತವನ್ನು ಭಾರತೀಯ ಜೀವವಿಮಾ ನಿಗಮ ವಹಿಸಿಕೊಂಡಿತ್ತು. ಅತಿಥಿಗಳಾಗಿ ಆಗಮಿಸಿದ್ದ ಅಜಯ ಶುಕ್ಲಾ ಅವರು ಮಾತನಾಡುತ್ತ ನನಗೆ ಕನ್ನಡ ಭಾಷೆ ಮಾತನಾಡಲು ಬರುವುದಿಲ್ಲ. ಆದರೂ ಇಂದಿನ ನಾಟಕ ’ಪ್ರಿಂಟಿಂಗ್ ಮಷಿನ್’ ನೋಡಿದೆ ಆನಂದಪಟ್ಟೆ. ಕಲೆಗೆ ಭಾಷೆಯೆಂಬುದಿಲ್ಲ. ಸ್ವಾತಂತ್ರ್ಯ ಹೋರಾಟದ ಸಂದರ್ಭದ ಚಿತ್ರಣವನ್ನು ಕಣ್ಣಮುಂದೆ ತಂದು ನಿಲ್ಲಿಸಿದ ನಾಟಕ ಖುಷಿ ಕೊಟ್ಟಿತು. ಭಾರತ ದೇಶ ಹಾಗೂ ಭಾರತೀಯ ಜೀವ ವೀಮಾ ನಿಗಮ ನಡುವೆ ಅವಿನಾಭಾವ ಸಂಬಂಧ ಹೊಂದಿದೆ ಎಂದು ಹೇಳಿದರು.

ಡಾ. ಸರಜು ಕಾಟ್ಕರ್, ಅಣ್ಣು ಗುರುಜಿಯವರ ಮೊಮ್ಮಗ ಮಹೇಶ ದೇಶಪಾಂಡೆ ಮುಂತಾದವರು ನಾಟಕ ಕುರಿತು ಮಾತನಾಡಿದರು.

ಬೆಂಗಳೂರು – ಪುಣಾ ಮತ್ತೊಂದು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ; NH4ಕ್ಕೆ ಪರ್ಯಾಯ; ಕೇಂದ್ರದ ಬೃಹತ್ ಯೋಜನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button