ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಠ್ಯದಿಂದ ಟಿಪ್ಪು ಸುಲ್ತಾನ್ ವಿಚಾರವನ್ನು ನಾವು ಕೈಬಿಡುತ್ತಿಲ್ಲ. ಊಹಿಸಿ ಬರೆದ ಕೆಲ ಅಂಶಗಳನ್ನು ನಾವು ತೆಗೆದುಹಾಕುತ್ತಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಟಿಪ್ಪು ಬಗ್ಗೆ ಆಧಾರ, ದಾಖಲೆಗಳಿಲ್ಲದ ಅಂಶಗಳನ್ನು ತೆಗೆಯುತ್ತೇವೆ. ದಾಖಲೆ ಇರುವುದನ್ನು ಮಾತ್ರ ಮಕ್ಕಳ ಓದಿಗೆ ಇಡಬೇಕಿದೆ. ಇಂದಿನ ದಿನಗಳಲ್ಲಿ ಯಾವುದೇ ವಿಷಯಗಳ ಬಗ್ಗೆ ದಾಖಲೆಗಳನ್ನು ತೆಗೆದು ನೋಡಬಹುದು. ಹೀಗಿರುವಾಗ ದಾಖಲೆಗಳಿಲ್ಲದ ಆಧಾರ ರಹಿತ ಅಂಶಗಳು ಪಠ್ಯದಲ್ಲಿದ್ದರೆ, ಶಿಕ್ಷಣದ ಮೇಲಿನ ನಂಬಿಕೆ ಹೋಗುತ್ತದೆ. ಆ ನಿಟ್ಟಿನಲ್ಲಿ ಟಿಪ್ಪುವಿನ ಬಗ್ಗೆಯೂ ಕೆಲ ಊಹಾಪೋಹ ಅಂಶಗಳಿದ್ದರೆ ಅದನ್ನು ತೆಗೆಯಲು ನಿರ್ಧರಿಸಿದ್ದೇವೆ ಎಂದರು.
ಪಠ್ಯದಿಂದ ಟಿಪ್ಪು ಸುಲ್ತಾನ್ ವಿಚಾರ ತೆಗೆದು ಹಾಕುತ್ತೇವೆ ಎಂಬ ಬಗ್ಗೆ ಈಗ ನಡೆಯುತ್ತಿರುವ ಚರ್ಚೆ ಕೇವಲ ಊಹಾಪೋಹ. ಟಿಪ್ಪು ಸುಲ್ತಾನ್ ವಿಚಾರವನ್ನು ನಾವು ಕೈಬಿಡುತ್ತಿಲ್ಲ, ಮಕ್ಕಳಿಗೆ ನಿಜವಾದ ಇತಿಹಾಸ ತಿಳಿಸುವುದು ನಮ್ಮ ಉದ್ದೇಶ. ಇನ್ನು ಟಿಪ್ಪು ಬಿರುದಿಗೆ ದಾಖಲೆ ಇದ್ದರೆ ಅದನ್ನು ಮುಂದುವರೆಸುತ್ತೇವೆ. ಇಲ್ಲವಾದರೆ ಸಮಿತಿ ನೀಡಿದ ವರದಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಮುಂದಿನ ವಾರ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತೇವೆ. ಸುದ್ದಿಗೋಷ್ಠಿ ನಡೆಸಿ ಸಮಿತಿ ನೀಡಿದ ವರದಿಯನ್ನು ವಿವರಿಸುತ್ತೇನೆ ಎಂದು ತಿಳಿಸಿದರು.
ಟಿಪ್ಪು ಮೈಸೂರು ಹುಲಿ ಅಲ್ಲ?: ವೈಭವೀಕರಣಕ್ಕೆ ಕತ್ತರಿ ಹಾಕಲು ಶಿಫಾರಸ್ಸು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ