ಪ್ರಗತಿ ವಾಹಿನಿ ಸುದ್ದಿ; ಚೆನ್ನೆ: ಬೈಕನ್ನು ಅತೀ ವೇಗವಾಗಿ ಓಡಿಸಿದ ಆರೋಪಿಯೊಬ್ಬನಿಗೆ ಮುಟ್ಟಿನೋಡಿಕೊಳ್ಳುವಂತಹ ವಿಚಿತ್ರ ಶಿಕ್ಷೆಯನ್ನು ತಮಿಳುನಾಡಿನ ಹೈಕೋರ್ಟ್ ನೀಡಿದೆ.
ಪ್ರವೀಣ್ ಎಂಬ ಯುವಕ ಅತೀ ವೇಗದ ಬೈಕ್ ರೈಡಿಂಗ್ ಮಾಡಿ ಪೊಲೀಸರ ಕೈಗೆ ಸಿಕ್ಕುಬಿದ್ದಿದ್ದ. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಪ್ರವೀಣನಿಗೆ ಒಂದು ತಿಂಗಳ ಕಾಲ ಚೆನ್ನೈ ಸರಕಾರಿ ಆಸ್ಪತ್ರೆಯ ಅಪಘಾತ ತುರ್ತು ಚಿಕಿತ್ಸಾ ವೀಭಾಗದಲ್ಲಿ (ಟ್ರಾಮಾ ಸೆಂಟರ್) ವಾರ್ಡ್ ಬಾಯ್‌ಗಳ ಅಡಿ ಸಹಾಯಕನಾಗಿ ಕೆಲಸ ಮಾಡಬೇಕು ಎಂಬ ಷರತ್ತಿನ ಮೇಲೆ ಜಾಮೀನು ನೀಡಿದ್ದಾರೆ.
ಪ್ರವೀಣ್ ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ಡ್ಯೂಟಿ ಡಾಕ್ಟರ್ ಎದುರು ಹಾಜರಾಗಿ ಮಧ್ಯಾಹ್ನದವರೆಗೂ ವಾರ್ಡ್ ಬಾಯ್‌ಗಳಿಗೆ ಸಹಾಯಕನಾಗಿ ಕೆಲಸ ನಿರ್ವಹಿಸಬೇಕು. ಪ್ರವೀಣನ ಹಾಜರಾತಿಯ ಬಗ್ಗೆ ಆಸ್ಪತ್ರೆಯ ಡೀನ್ ದಿನವೂ ವರದಿ ನೀಡಬೇಕು. ಯಾವುದೇ ಕಾರಣಕ್ಕೂ ಕೆಲಸ ತಪ್ಪಿಸುವಂತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣದ ಬಗ್ಗೆ ಟಿಪ್ಪಣಿ ನೀಡಿರುವ ನ್ಯಾಯಾಧೀಶರು, ಇಂದಿನ ದಿನಗಳಲ್ಲಿ ಯುವಕರು ನಡು ರಸ್ತೆಯಲ್ಲಿ ಅತಿ ವೇಗದಲ್ಲಿ ಬೈಕ್ ಚಲಾಯಿಸುವುದು, ಅಪಾಯಕಾರಿಯಾದ ವೀಲಿಂಗ್ ಮಾಡುವುದು ಹೆಚ್ಚುತ್ತಿದೆ. ಜನ ನಿಬಿಡ ರಸ್ತೆಯಲ್ಲಿ ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು ಓಡಾಡುವುದನ್ನೂ ಲೆಕ್ಕಿಸದೆ ಅಪಾಯಕಾರಿಯಾಗಿ ವಾಹನ ಚಲಾಯಿಸುವುದು ಕಂಡುಬರುತ್ತಿದೆ.
ಆಸ್ಪತ್ರೆಯ ಕೆಲಸದಿಂದ ಅಪಘಾತದಲ್ಲಿ ಗಾಯಗೊಂಡವರ ನರಳಾಟ ಏನು ಎಂಬುದು ಆರೋಪಿಗೆ ಅರಿವಾಗಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಪ್ರಧಾನಿ ಮೋದಿ ಹತ್ಯೆಗೆ ಸಂಚು; ಭದ್ರತಾ ತಂಡಕ್ಕೆ ಇ-ಮೇಲ್ ರವಾನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ