ಅನ್ಯಗ್ರಹ ಜೀವಿಗಳ ಜೊತೆ ಸಂವಹನಕ್ಕೆ ನಾಸಾ ಪ್ರಯತ್ನ; ವಿಶ್ವದಾದ್ಯಂತ ತೀವ್ರ ಕುತೂಹಲ

 

ಯಶಸ್ವಿಯಾದಲ್ಲಿ ಸೃಷ್ಟಿಯಾಗಲಿದೆ ಭೂಲೋಕದ ಹೊಸ ಇತಿಹಾಸ, ವಿಶ್ವದಾದ್ಯಂತ ತೀವ್ರ ಕುತೂಹಲ

 

ವಾಷಿಂಗ್ಟನ್ ಡಿ.ಸಿ. –  ವಿಶ್ವವೆಂದರೆ ಅನಂತ ಎಂದು ಭಾರತೀಯ ಪುರಾಣಗಳು ಸಹಸ್ರಾರು ವರ್ಷಗಳ ಹಿಂದೆಯೇ ಹೇಳಿವೆ. ಆನಂತರದ ವೈಜ್ಞಾನಿಕ ಸಂಶೋಧನೆಗಳ ಮೂಲಕವೂ ಅದು ದೃಢಪಟ್ಟಿದೆ. ಈ ಅಂತ್ಯವೇ ಇಲ್ಲದ ಖಗೋಳದ ಇನ್ಯಾವುದೋ ಒಂದು ಗ್ಯಾಲೆಕ್ಸಿಯ ಯಾವುದೋ ಒಂದು ಗ್ರಹದಲ್ಲಿ ಭೂಮಿಯಂತದ್ದೇ ವಾತಾವರಣವಿದ್ದು ಜೀವಿಗಳ ಆವಾಸ ಇರಬಹುದು ಎಂಬ ಸೈದ್ಧಾಂತಿಕ ಊಹೆಯೊಂದು ಕಳೆದ ಒಂದೂವರೆ ಶತಮಾನಗಳಿಂದಲೂ ವಿಜ್ಞಾನಿಗಳನ್ನು ಕಾಡುತ್ತಲೇ ಇದೆ. ಈ ಅನ್ಯಗ್ರಹ ಜೀವಿಗಳ ಕುರಿತು ಬಹುತೇಕ ಮುಂಚೂಣಿ ರಾಷ್ಟ್ರಗಳು ಸಂಶೋಧನೆ ನಡೆಸಲು ಸಾವಿರಾರು ಕೋಟಿ ರೂ. ವ್ಯಯಿಸುತ್ತವೆ.

ಮಾನವನ ಬುದ್ಧಿಮತ್ತೆಗೆ ನಿಲುಕುವ ಗಣಿತದ ಲೆಕ್ಕಾಚಾರದಪ್ರಕಾರ ಅನ್ಯಗ್ರಹ ಜೀವಿಗಳು ಇರುವುದು ಖಚಿತವಾದರೂ ಅವರನ್ನು ಸಂಪರ್ಕಿಸಲು, ಅಥವಾ ಖಗೋಳದ ಯಾವ ಮೂಲೆಯಲ್ಲಿ ಇರಬಹುದು ಎಂಬ ಸಣ್ಣ ಕುರುಹೂ ಸಹ ಇದುವರೆಗೂ ಸಿಕ್ಕಲ್ಲ.

ಪ್ರಸ್ತುತ ಅಮೇರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಅನ್ಯಗ್ರಹ ಜೀವಿಗಳ ಜೊತೆ ಸಂಪರ್ಕ ಸಾಧಿಸಲು, ಸಂವಹನ ನಡಸಲು ಹೊಸ ಪ್ರಯತ್ನವೊಂದಕ್ಕೆ ಮುಂದಡಿಯಿಟ್ಟಿದೆ.

ಹೌದು, ನಾಸಾ ಹತ್ತು ಹಲವು ಆಯಾಮಗಳ ಮೂಲಕ ಚಿಂತಿಸಿ, ಸಂಶೋಧನೆ ನಡೆಸಿ ಬೈನರಿ ಮಾಧ್ಯಮದ ಮೂಲಕ ಪುರುಷ ಮತ್ತು ಮಹಿಳೆಯ ಬೆತ್ತಲೆ ಚಿತ್ರವೊಂದನ್ನು ಬಾಹ್ಯಾಕಾಶಕ್ಕೆ ಅತ್ಯಂತ ಶಕ್ತಿಯುತವಾದ ಎಲೆಕ್ಟ್ರಾನಿಕ್ ಬೆಳಕಿನ ಮೂಲಕ ಹರಿಬಿಡಲು ಯೋಜನೆ ರೂಪಿಸಿದೆ.

ಖಗೋಳದ ಬೇರಾವುದೋ ಗ್ರಹದಲ್ಲಿ ಇರಬಹುದಾದ ಜೀವಿಯ ಬುದ್ದಿಮತ್ತೆ ಮಾನವನಿಗಿಂತ ಹೆಚ್ಚೊ ಅಥವಾ ಕಡಿಮೆಯೊ ಎಂಬ ಅರಿವಿಲ್ಲ. ಊಹಾತ್ಮಕ ಅನ್ಯಗ್ರಹ ಜೀವಿಗಳ ತರ್ಕ ಮಾನವನಿಗಿಂತ ವಿಭಿನ್ನವಾಗಿ ಅಥವಾ ವಿರುದ್ಧವಾಗಿಯೂ ಇರಬಹುದು. ಹಾಗಾಗಿ ಗಣಿತ ಶಾಸ್ತ್ರದ ತರ್ಕಕ್ಕೆ ಅಳವಡಿಕೆಯಾಗುವ ಮನುಷ್ಯ ಜೀವಿಯ ಯಾವುದೇ ಭಾಷೆ ಅನ್ಯಗೃಹ ಜೀವಿಗೆ ತಪ್ಪು ಸಂದೇಶ ರವಾನಿಸುವ ಅಪಾಯವೂ ಇದೆ. ಈ ಹಿನ್ನೆಲೆಯಲ್ಲಿ ಅತ್ಯಂತ ಮೂಲ ಭಾಷೆಯಾದ ಬೈನರಿ (೧-೦) ಕೋಡ್ ಲ್ಯಾಂಗ್ವೇಜ್ ಮೂಲಕ ಚಿತ್ರವನ್ನು ನಾಸಾ ಹರಿಬಿಡುತ್ತಿದೆ.

ಈ ಚಿತ್ರವನ್ನು ನೋಡಿದಲ್ಲಿ ಅನ್ಯಗ್ರಹ ಜೀವಿಗಳಿಗೆ ಭೂಮಿ ಮತ್ತು ಮನುಷ್ಯ ಜೀವಿ ಮತ್ತು ಭೂಮಿಯ ಜೀವರಸಾಯನ ಅಂಶಗಳ ಒಂದಿಷ್ಟು ಮಾಹಿತಿಗಳು ಲಭಿಸಬಹುದು. ಆ ಬಳಿಕ ಅನ್ಯಗ್ರಹ ಜೀವಿಗಳು ತಮ್ಮದೇ ಆದ ಮಾಧ್ಯಮದ ಮೂಲಕ ಮನುಷ್ಯ ಜೀವಿಯನ್ನು ಸಂಪರ್ಕಿಸಬಹುದು ಎಂಬುದು ವಿಜ್ಞಾನಿಗಳ ಆಶಯ.

ಈ ಪ್ರಯತ್ನ ಎಷ್ಟರ ಮಟ್ಟಿಗೆ ಫಲಪ್ರದವಾಗುತ್ತದೆ ಎಂಬುದು ಬೇರೆ ವಿಷಯ. ಆದರೆ ಖಗೋಲದ ಯಾವುದೋ ಮೂಲೆಯಲ್ಲಿ ಇರಬಹುದಾದ ಅನ್ಯಗ್ರಹ ಜೀವಿಗಳ ಜೊತೆ ಸಂಪರ್ಕ ಸಾಧಿಸುವ ಯೋಚನೆಯೇ ರೋಚಕವಾಗಿರುವುದರಿಂದ ವಿಶ್ವದಾದ್ಯಂತ ಜನರಲ್ಲಿ ಕುತೂಹಲ ಕೆರಳಿಸಿದೆ.

ವಿದ್ಯುತ್ ಕಂಬಕ್ಕೆ ವ್ಯಾನ್ ಡಿಕ್ಕಿ; 7 ಜನರ ದುರ್ಮರಣ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button