ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಜಿಲ್ಲೆಯ ವಿವಿಧ ಸಾಮಾಜಿಕ ಭದ್ರತಾ ಮತ್ತು ಪಿಂಚಣಿ ಯೋಜನೆಗಳನ್ನು ಪಡೆಯುತ್ತಿರುವ ವ್ಯಕ್ತಿಗಳು ಕೋವಿಡ್ -19 ಸೋಂಕಿನಿಂದ ಮಾರ್ಚ್ 20, 2022 ರ ಮೊದಲು ಮೃತಪಟ್ಟಿದ್ದಲ್ಲಿ, ಕಾನೂನು ಬದ್ಧ ವಾರಸುದಾರರಿಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಮಾರ್ಚ್ 20, 2022 ರಿಂದ 60 ದಿನಗಳ ಕಾಲಮಿತಿಯನ್ನು ನಿಗದಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದ್ದಾರೆ.
SDRF ಮಾರ್ಗಸೂಚಿಗಳನ್ವಯ ತಲಾ 50 ಸಾವಿರಗಳ ಪರಿಹಾರ ಧನ ವಿತರಿಸಲು ಕೋವಿಡ್ -19 ವೈರಾಣು ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕಾನೂನು ಬದ್ದ ವಾರಸ್ಸುದಾರರು ಪರಿಹಾರ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
ಮಾರ್ಚ್ 20 ರ ನಂತರ ಕೋವಿಡ್ -19 ವೈರಾಣು ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕಾನೂನು ಬದ್ಧ ವಾರಸುದಾರರಿಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಮರಣ ಸಂಭವಿಸಿದ ದಿನಾಂಕದಿಂದ 90 ದಿನಗಳ ಕಾಲಾವಕಾಶ ನಿಗದಿಗೊಳಿಸಲಾಗಿದೆ.
ಸದರಿ ವ್ಯಕ್ತಿಯು ಸುಳ್ಳು ಮಾಹಿತಿ ಅಥವಾ ನಕಲಿ ಅರ್ಜಿ ಸಲ್ಲಿಸಿ ಪರಿಹಾರ ಪಡೆದಿದ್ದು, ಸುಳ್ಳು ಎಂದು ಸಾಬೀತಾದಲ್ಲಿ ಅಂತಹ ವ್ಯಕ್ತಿಗಳು ಪಡೆದ ಪರಿಹಾರ ಮೊತ್ತವನ್ನು ವಸೂಲು ಮಾಡಿ ಅವರ ವಿರುದ್ಧ ವಿಪತ್ತು ನಿರ್ವಹಣಾ ಅಧಿನಿಯಮ, 2005 ರ ನಿಯಮ 52 ರಡಿ ಸೂಕ್ತ ದಂಡ ಹಾಗೂ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ