Kannada NewsKarnataka News

ಈಶ್ವರಪ್ಪ ಬಂಧಿಸಿ, ಸಮಗ್ರ ತನಿಖೆ ನಡೆಸಿ – ಬಿಜೆಪಿ ಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್; ಹೆಬ್ಬಾಳಕರ್, ಹಟ್ಟಿಹೊಳಿ ನೇತೃತ್ವ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 
ಬೆಳಗಾವಿ ಗುತ್ತಿಗೆದಾರ ಆತ್ಮಹತ್ಯೆಗೆ ಕಾರಣವಾಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಬಿಜೆಪಿ  ಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಖಾಸಗಿ ಹೊಟೆಲ್ ನಲ್ಲಿ ನಡೆಯುತ್ತಿರುವ ಬಿಜೆಪಿ ಸಭೆಯ ಸ್ಥಳಕ್ಕೆ ತೆರಳಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಸಭೆಯೊಳಗೆ ನುಗ್ಗಲು ಯತ್ನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆಗೆ ಸಚಿವ ಈಶ್ವರಪ್ಪ ಅವರು ಆತ್ಮಹತ್ಯೆ ಮಾಡಿಕೊಳ್ಳಲು 40% ಕಮಿಷನ್ ಕೇಳಿರುವುದೇ ಕಾರಣ. ನನ್ನ ಆತ್ಮಹತ್ಯೆಗೆ ಸಚಿವ ಈಶ್ವರಪ್ಪನವರೇ ಕಾರಣ ಎಂದು ಡೆತ್ ನೋಟ್ ನಲ್ಲಿ ಉಲ್ಲಿಖಿಸಿದ್ದಾರೆ. ಕೂಡಲೇ ಸಚಿವ ಈಶ್ವರಪ್ಪನವರ ರಾಜೀನಾಮೆ ಪಡೆದು ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ಬಿಜೆಪಿಯ ಹಾಗೆ ರಾಜಕಾರಣ ಯಾರಿಗೂ ಮಾಡಲು ಬರುವುದಿಲ್ಲ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಗುತ್ತಿಗೆದಾರರು  40% ಕಮಿಷನ್ ಕೇಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿಗೆ ಪತ್ರ ಬರೆದಿದ್ದರು. ಮಾಧ್ಯಮ ಮಿತ್ರರಿಗೆ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದು ಸಚಿವ ಈಶ್ವರಪ್ಪನವರ ಮೇಲೆ ಗಂಭೀರ ಆರೋಪವಾಗಿದೆ. ಅವರನ್ನು ಕೂಡಲೇ ಬಂಧನ ಮಾಡಿ ತನಿಖೆ ಮಾಡಬೇಕು. ಸಂತೋಷ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ಒತ್ತಾಯಿಸಿದರು.
ಗುತ್ತಿಗೆದಾರ ಸಂತೋಷ ಪಾಟೀಲ ನನ್ನ ಕ್ಷೇತ್ರದಲ್ಲಿ ವಕ್೯ ಆಡ್೯ರ್ ಇಲ್ಲದೆ ಕೆಲಸ ಮಾಡಿದ್ದಾನೆ. ಸಂಬಂಧಿಸಿದ ಗ್ರಾಪಂ  ಅಧ್ಯಕ್ಷ ನಾಗೇಶ ಮಂಡೋಳ್ಕರ್ ಅವರನ್ನು ಬಂಧನ ಮಾಡಬೇಕು. ಎಲ್ಲಿದ್ದಾರೆ ಹಿಂಡಲಗಾ ಗ್ರಾಪಂ ಅಧ್ಯಕ್ಷರು ಎಂದು ಪ್ರಶ್ನಿಸಿದ ಅವರು, ಅವರನ್ನು ಬಂಧಿಸಿದರೆ ಎಲ್ಲ ಸತ್ಯ ಬಯಲಾಗುತ್ತದೆ. ಯಾರು ಕೆಲಸ ಮಾಡಲು ಸೂಚಿಸಿದ್ದರು, ಆಗ ಯಾರು ಅಧಿಕಾರದಲ್ಲಿದ್ದರು ಎನ್ನುವುದು ಗೊತ್ತಾಗುತ್ತದೆ ಎಂದರು.
ಸಚಿವ ಕೆ.ಎಸ್.ಈಶ್ವರಪ್ಪ 40% ಕಮಿಷನ್ ಕೇಳುತ್ತಿದ್ದಾರೆ ಎಂದು ಸಂತೋಷ ಆರೋಪಿಸಿದ್ದರು. ಆದರೆ ಸಚಿವ ಈಶ್ವರಪ್ಪ ಅವರು ಸಂತೋಷ ಯಾರು ಎಂದು ಗೊತ್ತಿಲ್ಲ ಎನ್ನುತ್ತಾರೆ. ಈಶ್ವರಪ್ಪನರು ಕೇಸರಿ ಧ್ವಜ ಹಾರಿಸಿದ ಹಾಗೆ ಮಾತನಾಡುತ್ತಾರೆ. ಇವರಿಗೆ ಜನರ ಕಳಕಳಿ ಇಲ್ಲ. ಸಂತೋಷ ಹಿಂಡಲಗಾ ಗ್ರಾಮದಲ್ಲಿ ಕೆಲಸ ಮಾಡಿದ್ದು ನಿಜ. ಅವರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವ ಕೆಲಸ ಕಾಂಗ್ರೆಸ್ ಮಾಡುತ್ತದೆ ಎಂದರು.
ಬೆಳಗಾವಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರಾಜು ಸೇಠ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button