ಬಿಜೆಪಿಯವರೇ ಹೊಲಸು ರಾಜಕೀಯ ಬಿಡಿ: ನಿಮಗೆ ಇನ್ನೆಷ್ಟು ಬಲಿ ಬೇಕು? – ಸಂತೋಷ ಅಂತ್ಯಕ್ರಿಯೆ ಬಳಿಕ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್
ಬಿಜೆಪಿಯ ಯಾವೊಬ್ಬ ಮುಖಂಡರೂ ಅಂತ್ಯಕ್ರಿಯೆಗೆ ಬರಲಿಲ್ಲ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಿಜೆಪಿಯವರೇ ನಿಮಗೆ ಇನ್ನೆಷ್ಟು ಬಲಿ ಬೇಕು? ಹೊಲಸು ರಾಜಕಾರಣ ಬಿಡಿ. ಸಂತೋಷನನ್ನಂತೂ ಸಾಯಿಸಿದ್ದೀರಿ. ಕೊನೆಯ ಪಕ್ಷ ಆತನ ಪತ್ನಿ, ತಾಯಿಯ ಕಣ್ಣೀರನ್ನಾದರೂ ಒರೆಸುವ ಕೆಲಸ ಮಾಡಿ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಆಕ್ರೋಶ ವ್ಯಕ್ತಪಡಿಸಿದರು.
ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಂತೋಷ ಅಂತ್ಯಕ್ರಿಯೆ ಬಳಿಕ ಬಡಸ್ ಗ್ರಾಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಮಾನವೀಯತೆ ಮುಖ್ಯವಲ್ಲ, ರಾಜಕಾರಣ ಮುಖ್ಯ. ಈ ಹೊಲಸು ರಾಜಕಾರಣದಿಂದ ಇನ್ನೂ ಅದೆಷ್ಟು ಜನರ ಬಲಿ ಪಡೀತಾರೋ ನನಗೆ ಗೊತ್ತಿಲ್ಲ ಎಂದರು.
ಸಂತೋಷ ಬಿಜೆಪಿ ಕಾರ್ಯಕರ್ತನೆ. ಅವನು ಸತ್ತಾಗ ಕೊರಳಲ್ಲಿ ಕೇಸರಿ ಶಾಲು ಹಾಕಿದ್ದ. ಅಪ್ಪಟ ಮೋದಿಜೀ ಅಭಿಮಾನಿ, ಯಡಿಯೂರಪ್ಪನವರ ಅಭಿಮಾನಿಯಾಗಿದ್ದ. ಆದರೆ ದುರದೃಷ್ಟ ಬಿಜೆಪಿಯ ಯಾವೊಬ್ಬ ಮುಖಂಡರೂ ಅಂತ್ಯಕ್ರಿಯೆಗೆ ಬರಲಿಲ್ಲ. ಸೌಜನ್ಯಕ್ಕೂ, ಮಾನವೀಯತೆಗೂ ಬಿಜೆಪಿಯವರು ಬರಲಿಲ್ಲ ಎಂದು ಕಿಡಿಕಾರಿದರು.
ಇಷ್ಟಾದ್ರು ನಿಮ್ಮ ಮನಸು ಕರಗಲಿಲ್ಲವಾ? ಈ ಹೊಲಸು ರಾಜಕೀಯ ಬಿಡಿ, ಅವನ ಕುಟುಂಬಕ್ಕೆ ಪರಿಹಾರ ಕೊಡಿ. ನಾನು ಒಂದು ಕರೆ ಕೊಟ್ಟಿದ್ದರೆ ಸಾವಿರಾರು ಜನ ಸೇರುತ್ತಿದ್ದರು. ಕಳೆದ ಎರಡು ದಿನಗಳಿಂದ ಸಂತೋಷ ತಾಯಿ, ಪತ್ನಿ ಕುಟುಂಬಸ್ಥರು ಊಟ ನಿದ್ರೆ ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಅಂತ್ಯಕ್ರಿಯೆ ಸರಳವಾಗಿ ನಡೆಯಲು ಬಿಟ್ಟಿದ್ದೇವೆ ಎಂದು ವಿವರಿಸಿದರು.
24 ಗಂಟೆ ರಾಮನ ಭಜನೆ ಮಾಡುವವರು, ದೇವರನ್ನು ಪೂಜಿಸುವವರು. ಇಷ್ಟೊಂದು ಮನಸ್ಸು ಕಠೋರವಾಯ್ತಾ? ಅವರ ಕಣ್ಣಲ್ಲಿ ನೀರು ಬರೋದಿಲ್ಲ. ಅವರ ಮನೆಯಲ್ಲಿ ಹೀಗೆ ಆಗಿದ್ರೆ? ಎಂದು ಭಾವುಕರಾಗಿ ಹೆಬ್ಬಾಳಕರ್ ಪ್ರಶ್ನಿಸಿದರು.
ಬಿಜೆಪಿಯ ಓರ್ವ ಕಾರ್ಯಕರ್ತ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾನೆ. ಸಂತೋಷ ಕುಟುಂಬಸ್ಥರಿಗೆ
4 ಕೋಟಿ ಕಾಮಗಾರಿ ಬಿಲ್ ನೀಡಬೇಕು, 1 ಕೋಟಿ ಪರಿಹಾರ ನೀಡಬೇಕು. ಸಂತೋಷ ಪತ್ನಿಗೆ ಸರಕಾರಿ ನೌಕರಿ ನೀಡಬೇಕು ಎಂದು ಸಿಎಂಗೆ ಮನವಿ ಮಾಡಿದ ಹೆಬ್ಬಾಳಕರ್, ನಿನ್ನೆ ಪೋಸ್ಟಮಾರ್ಟಂ ಆಗಿದೆ, ಸಂತೋಷ ಮೊಬೈಲ್ ನಲ್ಲಿ ಎಲ್ಲ ಸಾಕ್ಷಿ ಸಿಕ್ಕಿದೆ. ಆದ್ರೂ ಕೂಡ ಇದುವರೆಗೆ ಮೂವರನ್ನು ಬಂಧಿಸಿಲ್ಲ..
ಸಾಕ್ಷಿ ತಿರುಚಲು ನಿಂತಿದ್ದೀರಾ ಎನ್ನುವ ಅನುಮಾನ ಬರುತ್ತಿದೆ. ಈಶ್ವರಪ್ಪಗೆ ಮಂತ್ರಿಗಿರಿಯಿಂದ ವಜಾ ಅಷ್ಟೇ ಅಲ್ಲ, ಅರೆಸ್ಟ್ ಆಗಬೇಕು, ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಅಡಿವೇಶ ಇಟಗಿ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.
ಬಿಜೆಪಿ ಸರ್ಕಾರದ, ಸಚಿವರ ಭ್ರಷ್ಟ ಆಡಳಿತಕ್ಕೆ ಸಂತೋಷ ಜೀವ ಬಲಿ- ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ