Kannada NewsKarnataka NewsLatest
ಡಾ.ಬಾಬಾ ಸಾಹೇಬ ಅಂಬೇಡ್ಕರ್ ಜನಿಸದಿದ್ದಿದ್ದರೆ ಭಾರತ ಹೇಗಿರುತ್ತಿತ್ತು ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ – ಲಕ್ಷ್ಮಿ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಮಹಾನ್ ನಾಯಕ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಜನಿಸದಿದ್ದಿದ್ದರೆ ಭಾರತ ಯಾವ ರೀತಿಯಲ್ಲಿರುತ್ತಿತ್ತು ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.
ಕಂಗ್ರಾಳಿ ಬಿ ಕೆ ಗ್ರಾಮದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ 131ನೇ ಜಯಂತಿಯ ನಿಮಿತ್ಯವಾಗಿ ಅವರ ಜೀವನ ಮತ್ತು ವಿಚಾರಧಾರೆಯ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಬಡತನದಲ್ಲಿ ಅರಳಿದ ಪ್ರತಿಭೆ ಬಾಬಾಸಹೇಬರು ಅಸ್ಪಶ್ಯತೆಯ ಬೆಂಕಿಯ ಕುಲುಮೆಯಲ್ಲಿ ಬೆಂದರೂ ಸಹ ಕಷ್ಟಗಳಿಗೆ ಹೆದರದೇ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಪ್ರಪಂಚದಲ್ಲಿ ಅತಿ ಹೆಚ್ಚು ಡಿಗ್ರಿಗಳನ್ನು ಪಡೆದಿರುವ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ವಿದೇಶದಲ್ಲಿ ಪಿ.ಎಚ್.ಡಿ ಮುಗಿಸಿ, ಡಾಕ್ಟರೇಟ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಅವರದ್ದಾಗಿದೆ. ಸಂವಿಧಾನವನ್ನು ರಚಿಸಿ ಕೋಟ್ಯಂತರ ಜನರ ಹಣೆಬರಹವನ್ನೆ ಬದಲಾಯಿಸಿದ ಮಹಾನ್ ಶಿಲ್ಪಿ ಅಂಬೇಡ್ಕರ್ ಅವರ ಬದುಕು ಇಡೀ ಜಗತ್ತಿಗೆ ಸ್ಪೂರ್ತಿದಾಯಕ ಮತ್ತು ಸರ್ವಕಾಲಕ್ಕೂ ಶ್ರೇಷ್ಠ ಎಂದು ಅವರು ಹೇಳಿದರು.
ಶೋಷಿತ ಸಮುದಾಯದ ಏಳ್ಗೆಗಾಗಿ ಬಾಬಾಸಾಹೇಬರ ಹೋರಾಟದ ಬದುಕು ಸದಾ ಸ್ಮರಣೀಯ, ಅಂಬೇಡ್ಕರ್ ಅವರ ಸಾಧನೆಗೆ ಇಡೀ ಜಗತ್ತೇ ತಲೆ ಬಾಗಿದೆ, ಛಲಕ್ಕೆ, ಸಾಧನೆಗೆ ಮತ್ತೊಂದು ಹೆಸರೆಂದರೆ ಡಾ.ಬಿ ಆರ್. ಅಂಬೇಡ್ಕರ್. ಭಾರತ ಮಾತ್ರವಲ್ಲದೇ ಸುಮಾರು 143ಕ್ಕಿಂತ ಹೆಚ್ಚು ರಾಷ್ಟ್ರಗಳು ಅಂಬೇಡ್ಕರ್ ಅವರ ಜನ್ಮ ಜಯಂತಿಯನ್ನು ಪ್ರತಿವರ್ಷ ಆಚರಿಸುತ್ತಿರುವುದು ಭಾರತೀಯರಿಗೆಲ್ಲ ಹೆಮ್ಮೆಯ ವಿಷಯ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಯಾರು ಶಿಕ್ಷಣವೆಂಬ ಹಾಲನ್ನು ಕುಡಿಯುತ್ತಾರೋ, ಅವರು ಸಿಂಹದಂತೆ ಘರ್ಜಿಸುತ್ತಾರೆ ಎಂಬ ಬಾಬಾಸಾಹೇಬರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಕಲ್ಪಿಸೋಣ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಗಲ್ಲಿಯ ನಿವಾಸಿಗಳು, ಮಲ್ಲೇಶ ಚೌಗುಲೆ, ಸಿದ್ದಪ್ಪ ಕಾಂಬಳೆ, ಸುಧೀರ ಚೌಹಾಣ, ಸಂಧ್ಯಾ ಚೌಗುಲೆ, ಬಾಳೇಶ ದಾಸನಟ್ಟಿ, ರೇಖಾ ಇಂಡಿಕರ್, ಬೆಟಗೇರಿ, ಗ್ರಾಮ ಪಂಚಾಯತಿಯ ಪದಾಧಿಕಾರಿಗಳು, ಡಾ. ಬಾಬಾಸಾಹೇಬ ಅಂಬೇಡ್ಕರ್ ಮಹಿಳಾ ಮಂಡಳ ಹಾಗೂ ಜೈಭೀಮ ಯುವಕ ಮಂಡಳದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ