*ಕರ್ನಾಟಕದಲ್ಲಿ ನಿಮ್ಮದೇ ಆದ ಪ್ರಪಂಚವನ್ನು ಸೃಷ್ಟಿಸಿ : ವಿವಿಧ ದೇಶಗಳ ರಾಯಭಾರಿಗಳಿಗೆ ಸಿಎಂ ಕರೆ*
ಪ್ರಗತಿವಾಹಿನಿ ಸುದ್ದಿ, ನವದೆಹಲಿ :
ಕರ್ನಾಟಕ ಬಂಡವಾಳ ಹೂಡಿಕೆಗೆ ಸೂಕ್ತ ಸ್ಥಳ. ಈ ಪ್ರಪಂಚದಲ್ಲಿ ನಿಮ್ಮದೇ ಆದ ಪ್ರಪಂಚವನ್ನು ಸೃಷ್ಟಿಸಿ ಎಂದು ವಿವಿಧ ದೇಶಗಳ ರಾಯಭಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಅವರು ಇಂದು ನವೆಂಬರ್ ತಿಂಗಳಲ್ಲಿ* *ಬೆಂಗಳೂರಿನಲ್ಲಿ ನಡೆಯಲಿರುವ*
*ಇನ್ವೆಸ್ಟ್* *ಕರ್ನಾಟಕ – 2022 -* *ಜಾಗತಿಕ ಹೂಡಿಕೆದಾರರ* ಸಮಾವೇಶದ ಕುರಿತು *ವಿವಿಧ ದೇಶಗಳ* *ರಾಯಭಾರಿಗಳೊಂದಿಗೆ* *ನವದೆಹಲಿಯಲ್ಲಿ ಸಂವಾದ* *ನಡೆಸಿದರು.*
ಕರ್ನಾಟಕದ ಅಭಿವೃದ್ಧಿ ವೈಜ್ಞಾನಿಕವಾಗಿ ಆಗಿದೆ. ತಂತ್ರಜ್ಞಾನದ ಬದಲಾವಣೆಗಳನ್ನು ಅಳವಡಿಸಿಕೊಂಡಿದೆ. ಆದ್ದರಿಂದ ರಾಜ್ಯದ ಎಲ್ಲ ವಲಯಗಳಲ್ಲಿ ಸಹಜವಾದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣ ಸಾಧ್ಯವಾಗಿದೆ. ಮೆಷಿನ್ ಟೂಲ್ಸ್ ಗಳನ್ನು ಉತ್ಪಾದಿಸುವ ಮೊದಲ ರಾಜ್ಯ. ದೇಶದಲ್ಲಿ ಮೊದಲ ಬಾರಿ ಏರೋಸ್ಪೇಸ್ ಘಟಕವನ್ನು ಸ್ಥಾಪಿಸಿದ ರಾಜ್ಯ ಕರ್ನಾಟಕ. ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ನಿರ್ಮಿಸಲಾದ ಸೆಟಿಲೈಟ್ ಗಳಲ್ಲಿ ಚಂದ್ರನೆಡೆಗೆ ಪ್ರಯಾಣಿಸಲಾಯಿತು. ಬಯೋ ಟೆಕ್ನಾಲಜಿ, ಫಾರ್ಮಾ ಕೈಗಾರಿಕೆಗಳು, ಐಟಿ ಕ್ಷೇತ್ರ ಗಳು ರಾಜ್ಯದಲ್ಲಿವೆ. ಅಮೆರಿಕದ ನಂತರ ಬೆಂಗಳೂರಿನ ಸಿಲಿಕಾನ್ ವ್ಯಾಲಿ ಖ್ಯಾತಿ ಗಳಿಸಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪ್ರಯೋಗಾಲಯಗಳು ಕರ್ನಾಟಕದಲ್ಲಿವೆ. ರಾಜ್ಯದಲ್ಲಿ 400 ಸಂಶೋಧನಾ ಕೇಂದ್ರಗಳಿದ್ದು, ಅವುಗಳಲ್ಲಿ 180 ವಿಶ್ವಮಟ್ಟದ ಸಂಶೋಧನಾ ಕೇಂದ್ರಗಳಾಗಿವೆ. ಎಂದರು.
*ದಕ್ಷತೆ ಹಾಗೂ ಉತ್ಕೃಷ್ಟತೆ ಆರ್ಥಿಕ ಚಟುವಟಿಕೆಯ ಮೂಲಮಂತ್ರ :*
ಜಾಗತೀಕರಣದಿಂದಾಗಿ ವಿಶ್ವ ಬಹಳ ಸಣ್ಣದಾಗಿದೆ. ದಕ್ಷತೆ ಹಾಗೂ ಉತ್ಕೃಷ್ಟತೆ ಆರ್ಥಿಕ ಚಟುವಟಿಕೆಯ ಮೂಲಮಂತ್ರ. ಆದ್ದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯಕರ ಸ್ಪರ್ಧೆ ಪ್ರಾರಂಭವಾಗಿದೆ. ಶ್ರೇಷ್ಠರಾದವರು ಮನ್ನಣೆ ಗಳಿಸುತ್ತಾರೆ. ಕರ್ನಾಟಕವನ್ನು ಬಹಳ ಸದೃಢವಾಗಿ, ಸಶಕ್ತವಾಗಿ ವಿಶ್ವಕ್ಕೆ ಪರಿಚಯಿಸಲಾಗುತ್ತದೆ. ರಾಜ್ಯಕ್ಕೆ ಶ್ರೀಮಂತ ಪರಂಪರೆಯೇ ಭದ್ರ ಅಡಿಪಾಯವಾಗಿದೆ. ಮೌಲ್ಯಗಳು, ಪ್ರಾಮಾಣಿಕತೆ ನಮ್ಮ ಪರಂಪರೆಯ ಭಾಗವಾಗಿದೆ. ಅತಿಥಿಗಳೇ ದೇವರು ಎಂಬುದು ಕರ್ನಾಟಕದ ಸಂಸ್ಕೃತಿ. ಶ್ರೀಮಂತ ನೈಸರ್ಗಿಕ ಸಂಪತ್ತು ನಮ್ಮಲ್ಲಿದೆ ಎಂದರು.
*ರಾಜ್ಯದಲ್ಲಿ ಬಂಡವಾಳ ಹೂಡಿಕೆಯಿಂದ ಪರಸ್ಪರ ಲಾಭ :*
ಕರ್ನಾಟಕದಲ್ಲಿ 10 ಕೃಷಿ ಹವಾಮಾನ ಪ್ರದೇಶಗಳಿವೆ. ಪಶ್ಚಿಮ ಘಟ್ಟ, ಅರಬ್ಬೀ ಸಮುದ್ರತೀರ,ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ನದಿಗಳು, ಎಲ್ಲರೀತಿಯ ಬೆಳೆಗಳ ಕೃಷಿ,ಬೆಳೆ ಇದೆ. ನೈಸರ್ಗಿಕ ಸಂಪತ್ತು ಹಾಗೂ ಕೃಷಿಕನ ಅಭಿವೃದ್ಧಿಶೀಲ ಚಿಂತನೆಯಿಂದ ಸದೃಢವಾದ ಕೃಷಿ ವಲಯ ಹಾಗೂ ಸೇವಾ ವಲಯವನ್ನು ನಿರ್ಮಿಸಲಾಗಿದೆ. ವಿಶ್ವದ ಅತ್ಯುತ್ತಮ ದೇಶಗಳ ರಾಯಭಾರಿಗಳು ಸಭೆಗೆ ಆಗಮಿಸಿದ್ದು, ಪ್ರತಿಯೊಬ್ಬರು ಯಾವುದಾದರೂ ಕ್ಷೇತ್ರದಲ್ಲಿ ಉತ್ಕೃಷ್ಟತೆಯನ್ನು ಸಾಧಿಸಿದವರು. ಇಂತಹ ಉತ್ಕೃಷ್ಟತೆಯ ಸಮಾಗಮಕ್ಕೆ ಅವಕಾಶವಾಗಿದೆ. ಒಟ್ಟಾಗಿ ಬೆಳೆಯುವುದರಲ್ಲಿ ಕರ್ನಾಟಕ ನಂಬಿಕೆ ಇರಿಸಿದೆ. ಕರ್ನಾಟಕದಲ್ಲಿ ಕೇವಲ ಬಂಡವಾಳ ಹೂಡುವುದರಿಂದ ಪರಸ್ಪರ ಲಾಭದಾಯಕ ಎಂದು ವಿವಿಧ ದೇಶಗಳ ಪ್ರತಿನಿಧಿಗಳಿಗೆ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ