Kannada NewsLatest

ಎಂ.ಜಿ.ಹಿರೇಮಠರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ; ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲರಿಗೆ ಸ್ವಾಗತ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ:  ತವರು ಜಿಲ್ಲೆಯಲ್ಲಿ ಯಶಸ್ವಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ನಿಕಟಪೂರ್ವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಗೆ ಅವರ ಮದುವೆ ವಾರ್ಷಿಕೋತ್ಸವದ ದಿನವೇ ಜಿಲ್ಲಾಡಳಿತದ ವತಿಯಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಕೇಳಿಬಂದ ಎಂ.ಜಿ.ಹಿರೇಮಠರ ಸಮಯಪ್ರಜ್ಞೆ, ಸರಳತೆ, ತಾಳ್ಮೆಯ ಗುಣಗಾನಕ್ಕೆ; ಚಪ್ಪಾಳೆಗಳ ಅಭಿಮಾನ ದೊರೆಯಿತು.

ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ ನಡೆದ ನಿಕಟಪೂರ್ವ ಜಿಲ್ಲಾಧಿಕಾರಿ ಎಂಜಿ.ಹಿರೇಮಠ ಅವರಿಗೆ ಬೀಳ್ಕೊಡುಗೆ; ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲರ ಸ್ವಾಗತ ಸಮಾರಂಭ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಜಿ.ಹಿರೇಮಠ ಅವರು, ತವರು ಜಿಲ್ಲೆಯಲ್ಲಿ ಕೆಲಸ ಮಾಡುವ ಅವಕಾಶ ದೊರೆತಿದ್ದು ವೃತ್ತಿಜೀವನದ ಬಹುದೊಡ್ಡ ಸೌಭಾಗ್ಯ ಎಂದರು.

ತಾನು ತಿರುಗಾಡಿದ ಆಡಿ‌ಬೆಳೆದ ಊರಿಗೆ ಜಿಲ್ಲಾಧಿಕಾರಿಯಾಗಿ ಬರುವುದು ಅಪರೂಪ. ಅಂತಹ ಭಾಗ್ಯ‌ ನನಗೆ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಜನರು, ಅಧಿಕಾರಿಗಳು, ಸಂಘ-ಸಂಸ್ಥೆಗಳ ಸಹಕಾರ, ಜನಪ್ರತಿನಿಧಿಗಳ ಪ್ರೋತ್ಸಾಹವನ್ನು ಅವರು ಸ್ಮರಿಸಿದರು.

ತಮ್ಮ ಆಡಳಿತಾವಧಿಯಲ್ಲಿ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ನೀಡಿದ ಪ್ರೋತ್ಸಾಹ ಸ್ನರಿಸಿಕೊಂಡರು. ಎಂತಹದೇ ಕ್ಲಿಷ್ಟಕರ ಸಂದರ್ಭಗಳಲ್ಲಿ ಕೂಡ ಸಹೋದ್ಯೋಗಿ ಅಧಿಕಾರಿಗಳಾದ ಸಿಇಓ, ಎಸ್.ಪಿ., ಅಪರ ಜಿಲ್ಲಾಧಿಕಾರ ಮತ್ತಿತರ ಅಧಿಕಾರಿಗಳ ಸಹಕಾರದಿಂದ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂದು ಎಂ.ಜಿ.ಹಿರೇಮಠ ಹೇಳಿದರು.

ಇದೇ ವೇಳೆ ಮಾತನಾಡಿದ ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಕೆಲಸ ಮಾಡುವುದು ಸಂತಸದ ಸಂಗತಿಯಾಗಿದೆ. ಹಿಂದಿನ ಅನುಭವದ ಆಧಾರದ ಮೇಲೆ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದರು.

ವರ್ಗಾವಣೆಗೊಂಡಿರುವ ಎಂ.ಜಿ.ಹಿರೇಮಠರು ಮಾಡಿರುವ ಉತ್ತಮ ಕೆಲಸಗಳನ್ನು ಅದೇ ರೀತಿ ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಭರವಸೆ ನೀಡಿದರು.

ಬಿಸ್ವಾಸ್ ವ್ಯಕ್ತಪಡಿಸಿದರು ವಿಶ್ವಾಸ:

ಗದಗ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ, ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಶ್ರೇಯ ಎಂ.ಜಿ.ಹಿರೇಮಠ ಅವರಿಗೆ ಸಲ್ಲುತ್ತದೆ ಎಂದು ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಶ್ಲಾಘಿಸಿದರು.

ಬಿಮ್ಸ್ ಸುಧಾರಣೆ, ಲಸಿಕಾಕರಣ ಮತ್ತಿತರ ಕೆಲಸಗಳನ್ನು ಅವರು ಅತ್ಯುತ್ತಮವಾಗಿ ಮಾಡಿದ್ದಾರೆ ಎಂದು ಹೇಳಿದರು.

ಯಾವುದೇ ಕೆಲಸವನ್ನು ಸಿಟ್ಟುರಹಿತವಾಗಿ ನಿರ್ವಹಿಸುವ ಕಲೆಯನ್ನು ಹಿರೇಮಠ ಅವರಿಂದ ನಾವು ಕಲಿಯಬೇಕಿದೆ ಎಂದು ಆಮ್ಲಾನ್ ಬಿಸ್ವಾಸ್ ಹೇಳಿದರು.

ನಿಕಟಪೂರ್ವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠರ ಸ್ಥಾನವನ್ನು ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕೂಡ ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿಕಟಪೂರ್ವ ಜಿಲ್ಲಾಧಿಕಾರಿ ಹಿರೇಮಠರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಎಲ್ಲ ಅಧಿಕಾರಿಗಳು ಒಂದು ತಂಡವಾಗಿ ಕೆಲಸ ಮಾಡುತ್ತಿದ್ದರು. ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ಜತೆಗಿನ ಅವರ ಮಧುರ ಒಡನಾಟವು ಎಲ್ಲರಿಗೂ ಮಾದರಿಯಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ ಅಭಿಪ್ರಾಯಪಟ್ಟರು.
ಮುಂಬರುವ ದಿನಗಳಲ್ಲಿ ಕೂಡ ಅವರು ಇದೇ ರೀತಿ ಸೇವೆಯನ್ನು ನೀಡುವಂತಾಲಿ ಎಂದು ಶುಭ ಹಾರೈಸಿದರು.
ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕ್ರಿಯಾಶೀಲ ಅಧಿಕಾರಿಯಾಗಿದ್ದು, ಹೊಸ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂದು ಆಶಯ ವ್ಯಕ್ತಪಡಿಸಿದರು.

ಹಿರೇಮಠರ ಸರಳ-ಸಜ್ಜನಿಕೆ ಅನುಕರಣೀಯ:

ಹಿರೇಮಠರ ಸರಳ-ಸಜ್ಜನಿಕೆಯ ವ್ಯಕ್ತಿತ್ವವು ಅನುಕರಣೀಯವಾಗಿದೆ. ಪ್ರವಾಹ ಹಾಗೂ ಕೋವಿಡ್ ಸಂದರ್ಭದಲ್ಲಿ ಇಡೀ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವ ಮೂಲಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದರು. ಜಿಲ್ಲೆಯ ಸಮರ್ಥ ಕ್ಯಾಪ್ಟನ್ ಆಗಿ ಕೆಲಸ ಮಾಡಿದರು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ. ಹೇಳಿದರು.

ಸಹೋದ್ಯೋಗಿಗಳು ಹಾಗೂ ಕಿರಿಯ ಅಧಿಕಾರಿಗಳಿಗೆ ಬೆನ್ತಟ್ಟಿ ಅವರು ನೀಡುತ್ತಿದ್ದ ಪ್ರೋತ್ಸಾಹ ಮರೆಯಲಾಗುವುದಿಲ್ಲ.

ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಎಂ.ಜಿ.ಹಿರೇಮಠರ ತಾಳ್ಮೆ ಹಾಗೂ ಸಮಯಪ್ರಜ್ಞೆ ನಮಗೆಲ್ಲ ಮಾದರಿಯಾಗಿದೆ; ಕೆಳ ಅಧಿಕಾರಿಗಳ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಅವರು ಎಂದಿಗೂ ಮಾಡದೇ ತಾವೇ ಹೊಣೆಯನ್ನು ಹೊತ್ತುಕೊಳ್ಳುವ ಮೂಲಕ ದೊಡ್ಡತನವನ್ನು ಪ್ರದರ್ಶಿಸಿದ್ದಾರೆ ಎಂದು ದರ್ಶನ್ ನೆನಪಿಸಿಕೊಂಡರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು, ಕೋವಿಡ್ ಸಾಂಕ್ರಾಮಿಕದ ಅಟ್ಟಹಾಸ ಇರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಯಾಗಿ ಹಾಜರಾದ ಎಂ.ಜಿ.ಹಿರೇಮಠ ಅವರು ಆಕ್ಸಿಜನ್, ಹಾಸಿಗೆ ವ್ಯವಸ್ಥೆ ಹಾಗೂ ಕೋವಿಡ್ ಆರೈಕೆ‌ ಕೇಂದ್ರಗಳನ್ನು ಆರಂಭಿಸುವ ಮೂಲಕ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದರು ಎಂದು ನೆನಪಿಸಿಕೊಂಡರು.

ಕೋವಿಡ್ ಲಸಿಕಾಕರಣಕ್ಜೆ 37 ಲಕ್ಷ ಗುರಿ ನಿಗದಿಪಡಿಸಲಾಗುತ್ತು. ಇಂತಹ ಸಂದರ್ಭದಲ್ಲಿ ಗುರಿ ಮೀರಿ‌ ಸಾಧನೆಗೈಯುವ ಮೂಲಕ ಜಿಲ್ಲೆಯನ್ನು ದೇಶದಲ್ಲಿಯೇ ಮುಂಚೂಣಿ ಸ್ಥಾನಕ್ಕೆ ಕೊಂಡೊಯ್ದಿದ್ದರು.

ಕೊಳಚೆ ಪ್ರದೇಶದ ನಿವಾಸಿಗಳಿಗೆ ಪಿಎಂ ಆವಾಸ್ ಯೋಜನೆಯಡಿಯಲ್ಲಿ 1429 ಮನೆಗಳ ಮಂಜೂರು: ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button