*ಮೂಲಸೌಲಭ್ಯ ಉದ್ಯಮ ದೊಡ್ಡ ಬದಲಾವಣೆ ತರಲಿದೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :
ಮೂಲಸೌಲಭ್ಯ ಉದ್ಯಮ ದೊಡ್ಡ ಬದಲಾವಣೆ ತರಲಿದೆ. ರಸ್ತೆ, ಗಣಿಗಾರಿಕೆ ಸೇತುವೆ ನಿರ್ಮಾಣ ಸೇರಿದಂತೆ ಎಲ್ಲ ವಲಯಗಳಲ್ಲಿ ಮೂಲಸೌಲಭ್ಯದಿಂದ ದೊಡ್ಡ ಬದಲಾವಣೆ ತರಬಹುದಾಗಿದ್ದು, ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ, ಯಂತ್ರೋಪಕರಣಗಳು ಬಂದಿವೆ. ಇವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಉದ್ಯಮಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಬೆಂಗಳೂರಿನ ಬಿಐಇಸಿಯಲ್ಲಿ ಇಂದಿನಿಂದ ಆರಂಭವಾದ ಕಟ್ಟಡ ನಿರ್ಮಾಣ ಸಲಕರಣೆಗಳ ಎಕ್ಸಕಾನ್ ೨೦೨೨ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಕಂಪನಿಗಳ ನಾವೀನ್ಯತೆ, ಹೊಸ ಚಿಂತನೆಗಳ ವಿಚಾರವಿನಿಮಯ ಮಾಡಿಕೊಳ್ಳಲು ಎಕ್ಸ ಕಾನ್ 2022 ವಸ್ತು ಪ್ರದರ್ಶನ ಸೂಕ್ತ ವೇದಿಕೆಯಾಗಿದೆ. ರಾಜ್ಯದಲ್ಲಿ ಹೂಡಿಕೆ ಮಾಡಲಿಚ್ಛಿಸುವ ಉದ್ದಿಮೆಗಳಿಗೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಐಟಿಬಿಟಿ, ಸ್ಟಾರ್ಟ್‍ಅಪ್,ಆರ್‍ಎಂಡಿ ಗಳಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಈ ಅವಕಾಶವನ್ನು ಬಳಸಿಕೊಂಡು ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡುವ ಮೂಲಕ ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಕರ್ನಾಟಕದಲ್ಲಿ ಸರ್ಕಾರಿ ಹಾಗೂ ಖಾಸಗಿ ಸ್ವಾಮ್ಯದ ಸಂಸ್ಥೆಗಳಿವೆ. ಬಿಹೆಚ್‍ಇಎಲ್, ಹೆಚ್ ಎ ಎಲ್ ನಂತಹ ಅನೇಕ ಬೃಹತ್ ಸಂಸ್ಥೆಗಳು ರಾಜ್ಯದಲಿದ್ದು, ರಾಜ್ಯದ ಎಕೋಸಿಸ್ಟಂ ಈ ಸಂಸ್ಥೆಗಳು ಕೊಡುಗೆ ನೀಡಿವೆ ಎಂದರು.
ರಾಜ್ಯದಲ್ಲಿ ಗರಿಷ್ಟ ಸಂಖ್ಯೆಯ ಸ್ಟಾರ್ಟ್ ಅಪ್‍ಗಳಿವೆ. ದೇಶದ ಶೇ.50 ಕ್ಕಿಂತಲೂ ಹೆಚ್ಚಿನ ಸ್ಟಾರ್ಟ್‍ಅಪ್‍ಗಳು ಹಾಗೂ ಯೂನಿಕಾರ್ನ್‍ಗಳು ರಾಜ್ಯದಲ್ಲಿವೆ. ವಿದೇಶಿ ಬಂಡವಾಳ ರಾಜ್ಯಕ್ಕೆ ಹರಿದು ಬಂದಿದೆ. ರಾಜ್ಯದಲ್ಲಿ 400ಕ್ಕೂ ಹೆಚ್ಚು ಖಾಸಗಿ ಮತ್ತು ಸರ್ಕಾರಿ ಸಂಶೋಧನಾ ಕೇಂದ್ರಗಳು ರಾಜ್ಯದಲ್ಲಿದ್ದು, ಅದರಲ್ಲಿ 180 ಬೆಂಗಳೂರಿನಲ್ಲಿದೆ. ಡಿಆರ್‍ಡಿಓ ಸಂಸ್ಥೆ ರಾಜ್ಯಕ್ಕೆ ಕೊಡುಗೆ ನೀಡಿದೆ. ಸೌರಶಕ್ತಿ ಸಂಗ್ರಹಣೆ, ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ರಾಜ್ಯ ಒತ್ತು ನೀಡುತ್ತಿದೆ. ಕರ್ನಾಟಕವನ್ನು ಅಂತರರಾಷ್ಟ್ರೀಯ ಮಟ್ಟಕ್ಕೇರಿಸಲು ಸರ್ವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.
*ಸಂಶೋಧನೆಗಳು ತಳಹಂತದಿಂದ ನಡೆಯಬೇಕು :*
ಹಣದಿಂದ ಹಣ ಬರುವುದಿಲ್ಲ. ದುಡಿಮೆಯಿಂದ ಹಣ ಬರುತ್ತದೆ. ದುಡಿಮೆಯ ತಳಹಂತದಲ್ಲಿರುವವರ ಬಗ್ಗೆ ಕಾಳಜಿ ವಹಿಸಬೇಕು. ತಳಹಂತದ ದುಡಿಯುವ ವರ್ಗಕ್ಕೆ ಸಹಾಯ ಮಾಡಲು ಹೊಸ ಚಿಂತನೆ ಮಾಡಬೇಕು. ಯೋಜನೆಯ ಪ್ರಾಯೋಗಿಕತೆ, ನೈಜ್ಯತೆ ಬಗ್ಗೆ ತಿಳಿಯುವುದೇ ತಳಹಂತದಲ್ಲಿ. ಸಂಶೋಧನೆಗಳು ಈ ಹಂತದಲ್ಲಿ ನಡೆಯಬೇಕು. ಕರ್ನಾಟಕದಲ್ಲಿ ಸಣ್ಣ ಗ್ಯಾರೇಜಿನಿಂದ ಹಿಡಿದು ದೊಡ್ಡ ಕೈಗಾರಿಕೆಗಳವರೆಗೆ ಆರ್ ಎಂಡ್ ಡಿ ನೀತಿಯನ್ನು ಜಾರಿಗೊಳಿಸಲಾಗಿದೆ. ಯುವಕರಲ್ಲಿ ಸ್ವಂತಿಕೆಯನ್ನು ಹಾಗೂ ನಾವೀನ್ಯತೆಯನ್ನು ಪ್ರೋತ್ಸಾಹಿಸಬೇಕು. ಜಪಾನ್ ದೇಶದಂತೆ ಸಂಪೂರ್ಣ ಎಕೋ ಸಿಸ್ಟಂ ಸಂಶೋಧನೆಗೆ ಒತ್ತು ನೀಡುವಂತಿರಬೇಕು. ಸುಸಜ್ಜಿತ ಕ್ಯೂಬಿಕಲ್ಸ್‍ಗಳಲ್ಲಿ ಮಾತ್ರ ಸೀಮಿತವಾಗಿರದೇ, ಸಂಶೋಧನೆಗಳು ಎಲ್ಲೆಡೆ ನಡೆಯಬೇಕು. ಈ ದಿಸೆಯಲ್ಲಿ ಕರ್ನಾಟಕ ನಡೆಯುತ್ತಿದ್ದು, ಹಲವು ವಿನೂತನ ಯೋಜನೆಗಳನ್ನು ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
*ಸವಾಲುಗಳು ಅವಕಾಶಗಳನ್ನು ಒದಗಿಸುತ್ತವೆ :*
ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಸಾಂಕ್ರಾಮಿಕವಿದ್ದರೂ ಬೆಳೆಯಲು ಸಾಧ್ಯ ಎಂದು ಜಗತ್ತಿಗೆ ಬಿಂಬಿಸಲಾಗಿದೆ. ಸವಾಲುಗಳು ಅವಕಾಶಗಳನ್ನು ಒದಗಿಸುತ್ತವೆ. ಸವಾಲುಗಳಿಲ್ಲದಿದ್ದರೆ, ಅಭಿವೃದ್ಧಿಯೂ ಇಲ್ಲ. ಸವಾಲುಗಳು ಹೆಚ್ಚಿದ್ದಷ್ಟೂ ಅಭಿವೃದ್ಧಿ ಹೆಚ್ಚಾಗುತ್ತದೆ. ಮೊದಲನೇ ಹಾಗೂ ಎರಡನೇ ವಿಶ್ವಯುದ್ಧಗಳು ಸಾರಿಗೆ, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಕ್ಷೇತ್ರಗಳಲ್ಲಿ ಹೊಸ ತಂತ್ರಜ್ಞಾನಕ್ಕೆ ಎಡೆ ಮಾಡಿಕೊಟ್ಟಿತು. ವಿಶ್ವಯುದ್ದಗಳು ಆಗದಿದ್ದಿದ್ದರೆ ಜಾಗತಿಕ ಬೆಳವಣಿಗೆಯೂ ಆಗುತ್ತಿರಲಿಲ್ಲ. ಯಾವುದೇ ಹೊಸ ಘಟನೆ ಸಂಭವಿಸಿದಾಗ ನೂರು ಹೊಸ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ ಎಂದರು.
.
ಮೂಲಸೌಕರ್ಯ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. ಉತ್ತಮ ವೇಗವನ್ನು ಸಾಧ್ಯವಾಗಿಸುವ ಸಾರಿಗೆ ವ್ಯವಸ್ಥೆ ಅಗತ್ಯವಿದೆ. ಕ್ಷಿಪ್ರಗತಿಯಲ್ಲಿ ನಮ್ಮ ಗಮ್ಯವನ್ನು ತಲುಪಿಸುವ ವೇಗವನ್ನು ಹೊಂದಿರುವ ರೈಲುಗಳ ಅಗತ್ಯವಿದೆ. ಮೂಲಸೌಕರ್ಯದ ಪರಿಕಲ್ಪನೆ ಬದಲಾಗಿದೆ. ಎಕ್ಸ್ಕಾನ್ – 11 ನೇ ಆವೃತ್ತಿಯು ಬೆಳೆವಣಿಗೆಯ ರೇಖೆಯಲ್ಲಿ ಅತ್ಯುನ್ನತ ಸ್ಥಾನಕ್ಕೆ ಕೊಂಡಯ್ಯಲು ಸಾಧ್ಯವಿದೆ. ದೇಶಕ್ಕೆ ಲಾಭವಾಗುವಂತೆ ಬೆಳೆಯಬಹುದಾಗಿದೆ ಎಂದರು.
———-
*ಕನ್ನಡದಲ್ಲಿಯೇ ಟೆಂಪ್ಲೇಟ್ ಸಿದ್ಧಪಡಿಸಲು ಆದೇಶ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ*
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :: ಸರ್ಕಾರಕ್ಕೆ ಸಂಬಂಧಿಸಿದ ತಂತ್ರಾಂಶಗಳಲ್ಲಿ ಟೆಂಪ್ಲೆಟ್ ಗಳು ಕನ್ನಡ ಭಾಷೆಯಲ್ಲಿಯೇ ಇರಬೇಕೆಂದು ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಅವರು ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಇ-ಕನ್ನಡ ಯೋಜನೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸಮಗ್ರ ಕನ್ನಡ ಜನತೆಯನ್ನು ಒಳಗೊಂಡ ರೀತಿಯಲ್ಲಿ ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕವಿರಬೇಕು. ಮುಂದಿನ ಪೀಳಿಗೆಗೆ ಅನುಕೂಲಕರವಾಗುವ ರೀತಿಯಲ್ಲಿ, ಕನ್ನಡ ಭಾಷೆಯ ಅಭಿವೃದ್ಧಿಯನ್ನು ಒಳಗೊಂಡಂತೆ ಎಲ್ಲ ಆಯಾಮಗಳಲ್ಲೂ ಕನ್ನಡ, ಕನ್ನಡಿಗ, ಕರ್ನಾಟಕ ಅಭ್ಯುದಯವಾಗುವಂತ ಅಂಶಗಳು ವಿಧೇಯಕದಲ್ಲಿರಬೇಕು. ಇದಕ್ಕೆ ನಮ್ಮ ಸರ್ಕಾರ ಅಗತ್ಯ ಬೆಂಬಲ ನೀಡಲಿದೆ ಎಂದು ತಿಳಿಸಿದರು.
ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನ ಕ್ಷೇತ್ರದೊಂದಿಗೆ ಭಾಷೆಯ ಬೆಳವಣಿಗೆಯೂ ಆಗಬೇಕು. ತಂತ್ರಜ್ಞಾನ ಮತ್ತು ಭಾಷೆ ಜೊತೆಗೂಡಿ ಕಾರ್ಯ ನಿರ್ವಹಿಸಿದರೆ ಮಾತ್ರವೇ ಭಾಷಾ ಅಭಿವೃದ್ಧಿ ಸಾಧ್ಯವಾಗಲಿದೆ. ಹಿಂದೆ ಕನ್ನಡದಲ್ಲಿ ತಂತ್ರಜ್ಞಾನ ಮತ್ತು ತಂತ್ರಾಂಶಕ್ಕೆ ಸಂಬಂಧಿಸಿದ ಮಾಹಿತಿ ಲಭಿಸುತ್ತಿರುತ್ತಿರಲಿಲ್ಲ. ಈಗ ಕನ್ನಡದಲ್ಲಿಯೂ ಹಲವು ತಂತ್ರಾಂಶಗಳು ಲಭಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಟಿ.ಎಸ್.ನಾಗಾಭರಣ, ಮುಖ್ಯಮಂತ್ರಿಗಳ ಸಲಹೆಗಾರ (ಇ-ಆಡಳಿತ) ರಾದ ಬೇಳೂರು ಸುದರ್ಶನ ಮತ್ತಿತರರು ಹಾಜರಿದ್ದರು.
————
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆ :
*ಬಡವರಿಗಾಗಿ ರೂಪಿಸಿರುವ ಕಾರ್ಯಕ್ರಮಗಳ ಸಕಾಲಿಕ ಅನುಷ್ಠಾನಕ್ಕೆ ಸಿಎಂ ಸೂಚನೆ*
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : :
ಬಡವರಿಗಾಗಿ ರೂಪಿಸಿರುವ ಕಾರ್ಯಕ್ರಮಗಳ ಸಕಾಲಿಕವಾಗಿ ಅನುಷ್ಠಾನಗೊಳಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
2022-23ನೇ ಸಾಲಿನ ಬಜೆಟ್ ಅನುಷ್ಠಾನ, ಆಡಳಿತವನ್ನು ಚುರುಕುಗೊಳಿಸುವುದು, ಕಡತ ವಿಲೇವಾರಿ ಹಾಗೂ ಇನ್ನಿತರೆ ವಿಷಯಗಳ ಕುರಿತಂತೆ ಚರ್ಚಿಸಲು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆ ನಡೆಸಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಬಜೆಟ್ ನಲ್ಲಿನ ಕಾರ್ಯಕ್ರಮಗಳ ಶೀಘ್ರ ಅನುಷ್ಠಾನ, ಯೋಜನೆಗಳ ಜಾರಿಗೆ ವಿವಿಧ ಇಲಾಖೆಗಳ ನಡುವಿನ ಸಮನ್ವಯದ ಬಗ್ಗೆ ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ರೈತರಿಗೆ, ಎಸ್ ಸಿ ಎಸ್ ಟಿ ,ಓಬಿಸಿ ಸೇರಿದಂತೆ ಜನರಿಗೆ ನೇರವಾಗಿ ಡಿಬಿಟಿ ಮೂಲಕ ಆರ್ಥಿಕ ನೆರವು ನೀಡುವ ಕಾರ್ಯಕ್ರಮಗಳನ್ನು ಜೂನ್ ತಿಂಗಳೊಳಗೆ ಪ್ರಾರಂಭಿಸುವ ಸೂಚನೆ ನೀಡಲಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಕಾರ್ಯಕ್ರಮಗಳು ಮುಟ್ಟಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಲಾಗಿದೆ ಎಂದರು.
ಬಜೆಟ್ ಕಾರ್ಯಕ್ರಮಗಳಲ್ಲಿ ಆರ್ಥಿಕ ಅಭಿವೃದ್ಧಿಗೆ ಇಂಬು ನೀಡುವ ಯೋಜನೆಗಳಿಗೆ ಭೂ ಸ್ವಾಧೀನ, ಟೆಂಡರ್ ಪ್ರಕ್ರಿಯೆಗಳು ಶೀಘ್ರದಲ್ಲಿ ಮುಗಿಸಬೇಕು. ಆಡಳಿತಕ್ಕೆ ವೇಗ ತಂದು, ದಕ್ಷತೆಯಿಂದ ಕೆಲಸಗಳಾಗಬೇಕು. ಜನಸಾಮಾನ್ಯರಿಗೆ ಸರ್ಕಾರದ ಕಾರ್ಯಕ್ರಮಗಳ ಲಾಭವಾಗಬೇಕು ಎನ್ನುವ ಉದ್ದೇಶದಿಂದ ಇಂದಿನ ಸಭೆಯನ್ನು ನಡೆಸಲಾಗಿದೆ ಎಂದರು.
ನಿರ್ಣಯ ತೆಗೆದುಕೊಳ್ಳುವ ಹಂತಗಳನ್ನು ಕಡಿಮೆ ಮಾಡುವುದು, ಆಡಳಿತಾತ್ಮಕ ಪ್ರಕ್ರಿಯೆಗೆ ಹೊಸ ಚಾಲನೆ ನೀಡುವ ನಿಟ್ಟಿನಲ್ಲಿ ಆಡಳಿತ ಸುಧಾರಣೆ ಸಮಿತಿ ತಿಳಿಸಿರುವಂತೆ ಅನುಷ್ಠಾನ ಮಾಡಲು ಸೂಚನೆ ನೀಡಲಾಗಿದೆ ಎಂದರು.
*ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಅಪರ ಮುಖ್ಯ ಕಾರ್ಯದರ್ಶಿಗಳ, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳೊಂದಿಗೆ ನಡೆಸಿದ ತುರ್ತು ಸಭೆಯ ಮುಖ್ಯಾಂಶಗಳು*:
1. ಬಜೆಟ್ ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಕೂಡಲೇ ಕ್ರಮ ವಹಿಸಬೇಕು.
2. ನಿಮ್ಮ ಹಂತದಲ್ಲಿ ಕಾರ್ಯಾದೇಶವಾಗಬೇಕು. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಗಳ ಹಂತದಲ್ಲಿ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಬೇಕು.
3. ಬಜೆಟ್ ನಲ್ಲಿ ಮೂಲಸೌಕರ್ಯ ಅಭಿವೃದ್ಧಿ ಗೆ ಒತ್ತು ನೀಡಲಾಗಿದೆ. ಕಾರ್ಯಾದೇಶದ ಜೊತೆಗೆ ಡಿಪಿಆರ್ ಆಗಬೇಕು. ಅಂದಾಜುಪಟ್ಟಿ, ಟೆಂಡರ್ ಪ್ರಕ್ರಿಯೆ ಭೂ ಸ್ವಾಧೀನ ಪ್ರಕ್ರಿಯೆಗಳು ಕ್ಷಿಪ್ರಗತಿಯಲ್ಲಿ ಆಗಬೇಕು . ಇಲಾಖೆಗಳು ಕಾಲಮಿತಿಯೊಳಗೆ ಅನುಷ್ಠಾನ ಮಾಡಬೇಕು.
4. ಮುಂದುವರೆದ ಕಾರ್ಯಕ್ರಮಗಳು, ಹೊಸ ಘೋಷಣೆಗಳ ವಿಶ್ಲೇಷಣೆ ಅಗತ್ಯ. ಇಲಾಖೆ ಮುಖ್ಯಸ್ಥರಿಗೆ.ಈ ಬಗ್ಗೆ ಸ್ಪಷ್ಟತೆ ಇರಬೇಕು.
5. ಕಾನೂನು ತಿದ್ದುಪಡಿಗಳನ್ನು ಪರಿಗಣಿಸಬೇಕು. ಹೊಸ ಕಾನೂನು ಗಳನ್ನು ಅಧ್ಯಯನ ಮಾಡಿ ಅನುಷ್ಠಾನಕ್ಕೆ ತರಬೇಕು.
6. ಬಜೆಟ್ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳಬಾರದು. ಬಜೆಟ್ ಘೋಷಣೆಗಳಿಗೆ ಪ್ರಸ್ತುತತೆ ಹಾಗೂ ಅರ್ಥಪೂರ್ಣತೆ ನೀಡುವುದು ನಮ್ಮ ಮುಖ್ಯ ಉದ್ದೇಶ. ಇದರ ಅರಿವು ನಿಮಗಿರಬೇಕು.
7. ಮಳೆಗಾಲದಲ್ಲಿ ಚಾಲನೆ ನೀಡಬಹುದಾದ ವೆಬ್ ಸೈಟ್, ಡಿಬಿಟಿ ಮುಂತಾದ ಕಾರ್ಯಕ್ರಮಗಳಿಗೆ ಚಾಲನೆ ನೀಡುವುದು.
8. ಆಗಸ್ಟ್ ಮಾಹೆಯೊಳಗೆ ಎಲ್ಲಾ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಬೇಕು.
9. ಈ ವರ್ಷ 6500 ಕ್ಕೂ ಹೆಚ್ಚು ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಾಲೆಗಳ ಗುರುತಿಸುವಿಕೆ ಪ್ರಾರಂಭಿಸಿ. ಜೂನ್ ಜುಲೈ ಒಳಗೆ ತಯಾರಿ ನಡೆಸಿ ಆಗಸ್ಟ್ ನಲ್ಲೇ ಕಾಮಗಾರಿ ಪ್ರಾರಂಭವಾಗಬೇಕು.
10. ಪ್ರಾಥಮಿಕ ಆರೋಗ್ಯ ಕೇಂದ್ರ ಗಳ ಮೇಲ್ದರ್ಜೆಗೇರಿಸುವ ಕಾರ್ಯಕ್ರಮ, ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಅಗತ್ಯ.
11. ರಸ್ತೆ, ರೈಲು, ಬಂದರು ಮುಂತಾದ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವುದು
12. ಸಾಮಾಜಿಕ ವಲಯ, ಶಿಕ್ಷಣ, ಆರೋಗ್ಯ ಇಲಾಖೆ ಕಾರ್ಯಕ್ರಮ ಗಳನ್ನು ಹೇಗೆ ಅನುಷ್ಠಾನ ಮಾಡುವುದು ಎಂದು ಮೈಕ್ರೋ ಮಟ್ಟದಲ್ಲಿ ಯೋಜನೆ ಆಗಬೇಕು.
13. ಗೋಶಾಲೆ, ಪಶು ಚಿಕಿತ್ಸಾಲಯ, ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳ ಕಾರ್ಯಕ್ರಮಗಳು ಅನುಷ್ಠಾನಕ್ಕೆ ತರಲು ಸೂಕ್ತ ಯೋಜನೆ ಅಗತ್ಯ.
14. ಕ್ಯಾನ್ಸರ್ ರೋಗಿಗಳಿಗೆ 10 ಕಿಮೋಥೆರಪಿ ಕೇಂದ್ರಗಳ ಸ್ಥಾಪಿಸುವ ಯೋಜನೆಗೆ ರೂಪುರೇಷೆ ಸಿದ್ಧಪಡಿಸಿ. 16000 ಸೈಕಲ್ಸ್ ಹೆಚ್ಚಿಸಿರುವ ಬಗ್ಗೆ ರೂಪುರೇಷೆ ಸಿದ್ಧಪಡಿಸಿ.
15. ಒಂದು ತಂಡವಾಗಿ, ಅಡಚಣೆಗಳನ್ನು ನಿವಾರಿಸಿ ಕಾರ್ಯ ನಿರ್ವಹಿಸಬೇಕು. ಅನುದಾನ ಹಾಗೂ ಸಮಯದ ಸರಿಯಾದ ನಿರ್ವಹಣೆ ಅತ್ಯವಶ್ಯ.
16. ಕಡತ ವಿಲೇವಾರಿಗೆ ಇಲಾಖೆಗಳಿಗೆ ಗಡುವು ನೀಡಿ. ಸಕಾಲ ಯೋಜನೆಯಡಿ ಕಡತ ವಿಲೇವಾರಿ ಮಾಡುವುದು.
17. ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳು ಪೂರ್ಣಗೊಳ್ಳಬೇಕು.
18. ಯಾವುದೇ ನಿಗಮಗಳಲ್ಲಿ ಬಿಡುಗಡೆಯಾಗಿರುವ ಅನುದಾನವನ್ನು ಬಳಸದೇ ಖಾತೆಗಳಲ್ಲಿ ಇಡಬಾರದು.
ಸಬೂಬು ಹೇಳದೇ ಸಮಸ್ಯೆ ಪರಿಹರಿಸಿ; ತಾಲೂಕು ಅಧಿಕಾರಿಗಳಿಗೆ ಡಿಸಿ ಖಡಕ್ ಸೂಚನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ