ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪಿಂಚಣಿ ವಿಳಂಬ, ಪೋಡಿ ಮಾಡಿಸಲು, ಆಧಾರ್ ಕಾರ್ಡು ಪಡೆಯಲು ಅಲೆದಾಟ; ಪ್ರವಾಹ ಸಂದರ್ಭದಲ್ಲಿ ಉಂಟಾದ ಮನೆಹಾನಿಗೆ ಪರಿಹಾರ ಪಡೆಯಲು ಪರದಾಟ… ಹೀಗೆ ಸಮಸ್ಯೆಗಳನ್ನು ಹೊತ್ತುಬಂದ ಜನರಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸ್ಪಂದಿಸಿದ ರೀತಿಯು ಸರಕಾರ ಹಾಗೂ ಜಿಲ್ಲಾಡಳಿತದ ಬಗ್ಗೆ ಭರವಸೆಯನ್ನು ಇಮ್ಮಡಿಗೊಳಿಸಿತು.
ಬೈಲಹೊಂಗಲ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಬುಧವಾರ(ಮೇ 18) ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ನಾಗರಿಕರಿಂದ ಅಹವಾಲು ಸ್ವೀಕರಿಸಿದರು.
ಅರ್ಜಿ ಹಿಡಿದುಕೊಂಡು ತಮ್ಮ ಬಳಿ ಬಂದ ನಾಗರಿಕರ ಸಮಸ್ಯೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳ ಮೂಲಕ ಅನೇಕ ಸಮಸ್ಯೆಗಳನ್ನು ಪರಿಹರಿಸಿದರು.
2019 ರಲ್ಲಿ ಮನೆಹಾನಿಯಾದ ಬುಡರಕಟ್ಟಿ ಗ್ರಾಮದ ಜನರಿಗೆ ಮನೆ ಕಟ್ಟಿಸಿಕೊಡಬೇಕು; ಪಟ್ಟಣದ ದೊಡ್ಡಕೆರೆಯಲ್ಲಿ ಒತ್ತುವರಿಯಾದ ಜಮೀನನ್ನು ತೆರುವುಗೊಳಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡರು.
2019 ರಲ್ಲಿ ಸವದತ್ತಿ ತಾಲೂಕಿನ ಮುತವಾಡ ಗ್ರಾಮದ ಸಿದ್ದಲಿಂಗಯ್ಯ ಸಿದ್ದಯ್ಯನವರ ಎಂಬವರು ಜಮೀನಿನ ಪೋಡಿ ಮಾಡಲಿಕ್ಕೆ ಅರ್ಜಿ ಸಲ್ಲಿಸಿದ್ದು, ಇದುವರೆಗೆ ಕೆಲಸವಾಗಿಲ್ಲ ಕೂಡಲೇ ಪೋಡಿ ಮಾಡಿಸಿ ಕೊಡಬೇಕು ಎಂದು ಮನವಿ ಮಾಡಿಕೊಂಡರು.
ಸಬ್ ರಜಿಸ್ಟಾರ್ ಕಚೇರಿಯಲ್ಲಿ ಹತ್ತಾರು ಜನ ಏಜೆಂಟರು ಕೆಲಸ ಮಾಡಿಕೊಡುತ್ತಿದ್ದಾರೆ. ಅಂಥವರು ಸರಕಾರಿ ನೌಕರರಂತೆ ಓಡಾಡಿಕೊಂಡಿರುತ್ತಾರೆ. ಅಂಥ ಅನಧಿಕೃತ ಜನರನ್ನು ತೆಗೆದು ಹಾಕಬೇಕೆಂದು ನಾಗರಿಕರು ಒತ್ತಾಯಿಸಿದರು.
ಬೇಡಜಂಗಮ ಪ್ರಮಾಣಪತ್ರ; ಕ್ರಮಕ್ಕೆ ಒತ್ತಾಯ:
ತಹಶೀಲ್ದಾರ ಕಛೇರಿಯ ಗ್ರೇಡ್ 2 ಅಧಿಕಾರಿಯೊಬ್ಬರು ಬೇಡ ಜಂಗಮ ಪ್ರಮಾಣ ಪತ್ರ ನೀಡಿ ಪ್ರಮಾದ ವೆಸಗಿದ್ದಾರೆ. ಕೂಡಲೇ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ತಾಲೂಕಾ ವಿವಿಧ ದಲಿತ ಸಂಘಟನೆ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.
ಸೇವೆಯಲ್ಲಿ ಲೋಪ; ಸೇವಾಕೇಂದ್ರ ರದ್ದು-ಜಿಲ್ಲಾಧಿಕಾರಿ ಎಚ್ಚರಿಕೆ:
ಸರಕಾರದ ವಿವಿಧ ಸೇವಾಸೌಲಭ್ಯಗಳನ್ನು ಜನರ ಮನೆಬಾಗಿಲಿಗೆ ಒದಗಿಸಬೇಕು ಎಂಬ ಆಶಯದೊಂದಿಗೆ ಸರಕಾರವು ಗ್ರಾಮ ಒನ್ ಕೇಂದ್ರಗಳನ್ನು ಆರಂಭಿಸಿದೆ.
ಈ ಕೇಂದ್ರದಲ್ಲಿ ಸೇವೆ ಒದಗಿಸಲು ನಿಗದಿತ ಶುಲ್ಕವನ್ನು ಮಾತ್ರ ಆಕರಿಸಬೇಕು; ಒಂದು ವೇಳೆ ಜನರನ್ನು ಸುಲಿಗೆ ಮಾಡಿದರೆ ಅಂತಹ ಕೇಂದ್ರಗಳ ಅನುಮತಿಯನ್ನು ರದ್ದುಗೊಳಿಸಿ ಬೇರೆಯವರಿಗೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದರು.
ತಾಲ್ಲೂಕುಮಟ್ಟದ ಅಧಿಕಾರಿಗಳಿಗೆ ತಾಕೀತು:
ತಾಲೂಕು ಮಟ್ಟದ ಅಧಿಕಾರಿಗಳು ಪ್ರತಿದಿನ ಕಡ್ಡಾಯವಾಗಿ ಸಾರ್ವಜನಿಕರ ಭೇಟಿಗೆ ಸಮಯ ಮೀಸಲಿಡಬೇಕು. ತಮ್ಮ ವ್ಯಾಪ್ತಿಯ ಕಚೇರಿಗಳಿಗೆ ನಿಯಮಿತವಾಗಿ ಭೇಟಿ ನೀಡಿ ಜನರ ದೂರುಗಳನ್ನು ಆಲಿಸಬೇಕು. ತಾಲೂಕು ಮಟ್ಟದಲ್ಲಿ ಜನರ ದೂರುಗಳಿಗೆ ಸ್ಪಂದಿಸದಿದ್ದರೆ ಜಿಲ್ಲಾ ಮಟ್ಟಕ್ಕೆ ದೂರುಗಳು ಬರುತ್ತವೆ. ಆದ್ದರಿಂದ ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಬೇಕು ಎಂದು ನಿರ್ದೇಶನ ನೀಡಿದರು.
ಬಾಕಿ ಕಡತಗಳನ್ನು ಉಳಿಯದಂತೆ ವಿಲೇವಾರಿ ಮಾಡಬೇಕೆಂದು ಸೂಚಿಸಿದ ಜಿಲ್ಲಾಧಿಕಾರಿಗಳು, ಸ್ಮಶಾನ ಭೂಮಿ ಇಲ್ಲದ ಕಡೆ ಯಾರಾದರೂ ಜಮೀನು ನೀಡಿದರೆ ಅಂಥವರಿಗೆ ಸರಕಾರದಿಂದ ಮೂರು ಪಟ್ಟು ಹೆಚ್ಚಿನ ಹಣ ನೀಡಿ ಖರೀದಿಸಲಾಗುವುದು ಎಂದು ತಿಳಿಸಿದರು. ಕುಟುಂಬವೊಂದಕ್ಕೆ ಆಧಾರ ಕಾರ್ಡ್ ಒದಗಿಸುವ ಮೂಲಕ ಸ್ಥಳದಲ್ಲಿಯೇ ಸಮಸ್ಯೆಯನ್ನು ಬಗೆಹರಿಸಿದರು.
ಮಕ್ಕಳು ಅಪೌಷ್ಠಿಕತೆಯಿಂದ ಬಳಲದಂತೆ ಸಿಡಿಪಿಓ ಕ್ರಮ ತೆಗೆದುಕೊಳ್ಳಬೇಕು. ಸರಕಾರಿ ಜಮೀನುಗಳು ಬೇರೆಯವರ ಹೆಸರಿನಲ್ಲಿದ್ದರೆ ಅವುಗಳನ್ನು ಆಯಾ ಇಲಾಖೆಯ ಹೆಸರಿನಲ್ಲಿ ದಾಖಲಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಪಟ್ಟಣದ ದೊಡ್ಡಕೆರೆ ಒತ್ತುವರಿ ಜಾಗೆಯನ್ನು ಪರೀಲಿಸಿದರು.
ಮಿನಿ ವಿಧಾನಸೌಧಕ್ಕೆ ಭೇಟಿ ನೀಡಿ ಅಲ್ಲಿ ಅನಧಿಕೃತ ಡಬ್ಬಾ ಅಂಗಡಿಗಳನ್ನು ತೆರೆವುಗೊಳಿಸಿ ಕ್ರಮ ಕೈಗೊಂಡ ಬಗ್ಗೆ ತಮಗೆ ವರದಿ ನೀಡಬೇಕೆಂದು ತಹಶೀಲ್ದಾರರಿಗೆ ಸೂಚಿಸಿದರು.
ಅದೇ ರೀತಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಏಜೆಂಟರಿಗೆ ಅವಕಾಶ ನೀಡಬಾರದು. ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಬೇಗ ಮಾಡಿಕೊಡಬೇಕು ಎಂದು ಉಪನೊಂದಣಾಧಿಕಾರಿಗಳಿಗೆ ತಾಕೀತು ಮಾಡಿದರು.
ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ತಹಶೀಲ್ದಾರ ಬಸವರಾಜ ನಾಗರಾಳ, ಉಪವಿಭಾಗಾಧಿಕಾರಿ ಕಚೇರಿ ಗ್ರೇಡ್-2 ತಹಶೀಲ್ದಾರ ಸದಾಶಿವ ಮಕ್ಕೋಜಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸುಭಾಸ ಸಂಪಗಾವಿ, ಸಿಪಿಐ ಯು.ಎಚ್.ಸಾತೇನಹಳ್ಳಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿಡಿಯೋ ಕಾಲ್ ಮಾಡುತ್ತಲೇ ಆತ್ಮಹತ್ಯೆಗೆ ಶರಣಾದ ಖ್ಯಾತ ನಟಿ
ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಪ್ರಕರಣ: ಮಧು ಕಲ್ಲಂತ್ರಿ ಆರೆಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ