ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಾಸಕ ಅನಿಲ ಬೆನಕೆ ಅವರನ್ನು ಬೆಳಗಾವಿ ಮಹಾನಗರ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ಈ ನೇಮಕ ಮಾಡಿದ್ದಾರೆ. ಶಶಿಕಾಂತ ಪಾಟೀಲ ಅವರನ್ನು ಬದಲಾಯಿಸಿ ಅನಿಲ ಬೆನಕೆಗೆ ಜವಾಬ್ದಾರಿ ನೀಡಲಾಗಿದೆ. ಶಶಿಕಾಂತ ಪಾಟೀಲ ಅವರು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿ ವಿವಾದಕ್ಕೊಳಗಾಗಿದ್ದರು.
ಶಶಿಕಾಂತ ಪಾಟೀಲ ಅವರು ಶಾಲೆಯೊಂದನ್ನು ಆರಂಭಿಸಿದ್ದು, ಅದಕ್ಕೆ ಹೆಚ್ಚಿನ ಸಮಯ ನೀಡಬೇಕಿರುವುದರಿಂದ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಬೇಡ ಎಂದು ಕೆಲವು ದಿನಗಳ ಹಿಂದೆ ಹೇಳಿದ್ದರು ಎಂದು ಶಾಸಕ ಅಭಯ ಪಾಟೀಲ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಶಾಸಕರಿಗೆ ಅಧ್ಯಕ್ಷ ಸ್ಥಾನ ನೀಡಿರುವುದು ಬೆಳಗಾವಿಯಲ್ಲಿ ಅನಿರೀಕ್ಷಿತ ಬೆಳವಣಿಗೆ. ಶಶಿಕಾಂತ ಪಾಟೀಲ ಮರಾಠ ಸಮಾಜದವರು. ಅನಿಲ ಬೆನಕೆ ಸಹ ಮರಾಠಾ ಸಮಾಜದವರು. ಮರಾಠಾ ಸಮಾಜದವರು ಅಸಮಾಧಾನವಾಗದಂತೆ ನೋಡಿಕೊಳ್ಳುವ ಉದ್ದೇಶ ಅನಿಲ ಬೆನಕೆ ನೇಮಕದರಲ್ಲಿರಬಹುದು.
ಇನ್ನು 6 ತಿಂಗಳು ಶಶಿಕಾಂತ ಪಾಟೀಲ ಅವರ ಅಧಿಕಾರಾವಧಿ ಇತ್ತು. ಹಾಗಾಗಿ 6 ತಿಂಗಳಮಟ್ಟಿಗೆ ಬೆನಕೆಗೆ ಜವಾಬ್ದಾರಿ ನೀಡಲಾಗಿದೆ. ನಂತರ ಅವರನ್ನೇ ಮುಂದುವರಿಸಲಾಗುತ್ತದೆಯೋ ಬದಲಾವಣೆ ಮಾಡಲಾಗುತ್ತದೆಯೋ ಕಾದು ನೋಡಬೇಕಿದೆ.
ಅಧ್ಯಕ್ಷ ಸ್ಥಾನಕ್ಕೆ 3 -4 ಜನರ ಹೆಸರನ್ನು ಕಳಿಸಲಾಗಿತ್ತು. ಆದರೆ ನೀವೇ ಅಧ್ಯಕ್ಷರಾಗಬೇಕೆಂದು ವರಿಷ್ಠರು ತಿಳಿಸಿದರು. ಹಾಗಾಗಿ ಒಪ್ಪಿದ್ದೇನೆ ಎಂದು ಬೆನಕೆ ಪ್ರಗತಿವಾಹಿನಿಗೆ ತಿಳಿಸಿದರು.
ಅನಿಲ ಬೆನಕೆಗೆ ಬೆಳಗಾವಿ ಮಹಾನಗರ ಅಧ್ಯಕ್ಷ ಸ್ಥಾನ ನೀಡಿರುವುದರಿಂದ ಅವರಿಗೆ ಬರುವ ವಿಧಾನಸಭೆ ಚುನಾವಣೆ ಟಿಕೆಟ್ ಕೈ ತಪ್ಪಲಿದೆಯೇ ಎನ್ನುವ ಚರ್ಚೆ ಪಕ್ಷದೊಳಗೆ ಆರಂಭವಾಗಿದೆ. ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಸುವುದು ಸುಲಭವಲ್ಲ.
ಈಗಾಗಲೆ ಬೆಳಗಾವಿ ಉತ್ತರ ಕ್ಷೇತ್ರದ ಟಿಕೆಟ್ ಪಡೆಯಲು ಅನೇಕರು ಕಸರತ್ತು ಆರಂಭಿಸಿದ್ದಾರೆ. 10ಕ್ಕೂ ಹೆಚ್ಚು ಆಕಾಂಕ್ಷಿಗಳು ಲಾಬಿ ನಡೆಸಿದ್ದಾರೆ. ಹಾಗಾಗಿ ಬಿಜೆಪಿ ಬೆಳವಣಿಗೆ ಕುತೂಹಲ ಮೂಡಿಸಿದೆ.
ಹಾಗಂತ ಸಂಸದರು, ಶಾಸಕರಿಗೆ ಪಕ್ಷ ಸಂಘಟನೆ ಜವಾಬ್ದಾರಿ ನೀಡುವುದು ಹೊಸದೇನಲ್ಲ. ಖುದ್ದು ನಳಿನ ಕುಮಾರ ಕಟೀಲು ಅವರೇ ಸಂಸದರಾಗಿದ್ದು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಈರಪ್ಪ ಕಡಾಡಿ ರಾಜ್ಯಸಭಾ ಸದಸ್ಯರಾಗಿದ್ದು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾಗಿದ್ದಾರೆ. ಅರವಿಂದ ಬೆಲ್ಲದ ಶಾಸಕರಾಗಿದ್ದು ಹುಬ್ಬಳ್ಳಿ – ಧಾರವಾಡ ಬಿಜೆಪಿ ಅಧ್ಯಕ್ಷರಾಗಿದ್ದರು.
ಶಾಸಕರಾಗಿದ್ದವರು ಸಂಘಟನೆಯ ಜವಾಬ್ದಾರಿ ವಹಿಸಿಕೊಂಡರೆ ಹೆಚ್ಚು ಪರಿಣಾಮಕಾರಿಯಾಗಲಿದೆ ಎನ್ನುವ ಉದ್ದೇಶದಿಂದ ಈ ನೇಮಕ ಮಾಡಿರಬಹುದು. ಆದರೆ ಚುನಾವಣೆಗೆ ಒಂದೇ ವರ್ಷವಿರುವಾಗ ಈ ಬೆಳವಣಿಗೆ ನಡೆದಿರುವುದರಿಂದ ಚರ್ಚೆಗೆ ಆಸ್ಪದವಾಗಿದೆ.
ಭೀಕರ ಕಾರು ಅಪಘಾತ; ಶಾಲೆಯಿಂದ ವಾಪಸ್ಸಾಗುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರ ಸಾವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ