ಅಭಿಪ್ರಾಯದಲ್ಲಿನ ವ್ಯತ್ಯಾಸವನ್ನು ಭಿನ್ನಾಭಿಪ್ರಾಯ ಎಂದು ಬಿಂಬಿಸುವುದು ಸರಿಯಲ್ಲ; ನಳೀನ್ ಕುಮಾರ್ ಕಟೀಲ್ ಸಮರ್ಥನೆ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಭಿಪ್ರಾಯದಲ್ಲಿ ಇರುವ ವ್ಯತ್ಯಾಸವನ್ನು ಭಿನ್ನಾಭಿಪ್ರಾಯ ಎಂದು ಹೇಳಲಾಗದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಬೆಳಗಾವಿ ಬಿಜೆಪಿಯಲ್ಲಿ ಗುಂಪುಗಾರಿಕೆ, ಭಿನ್ನಾಭಿಪ್ರಾಯ ಇಲ್ಲ. ಅಭಿಪ್ರಾಯದಲ್ಲಿ ವ್ಯತ್ಯಾಸಗಳಿರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಹೇಳಿದರು.
ವಾಯುವ್ಯ ಪದವೀಧರ ಹಾಗೂ ಶಿಕ್ಷಕ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಬೆಳಗಾವಿ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪಕ್ಷ ಒಂದು ಮನೆಯಿದ್ದಂತೆ. ಮನೆಯಲ್ಲಿ ಹೇಗೆ ಒಬ್ಬೊಬ್ಬರದ್ದು ಒಂದೊಂದು ಅಭಿಪ್ರಾಯ ಇರುತ್ತದೆಯೋ ಹಾಗೇ ಪಕ್ಷದಲ್ಲಿಯೂ ಅಭಿಪ್ರಾಯಗಳಲ್ಲಿ ವ್ಯತ್ಯಾಸ ಇರುತ್ತವೆ. ಅದನ್ನು ಭಿನ್ನಾಭಿಪ್ರಾಯ ಎಂದು ಬಿಂಬಿಸುವುದು ಸರಿಯಲ್ಲ. ಎಲ್ಲರೂ ಕುಳಿತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.
ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿನ ಬಗ್ಗೆ ಚಿಂತನಾ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಸಮಸ್ಯೆ ಬಗೆಹರಿಸಲಾಗಿದೆ. ಈ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸಲು ಸೂಚಿಸಲಾಗಿದೆ ಎಂದರು.
ವಾಯುವ್ಯ ಪದವೀಧರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಹಾಗೂ ಶಿಕ್ಷಕ ಮತಕ್ಷೇತ್ರದ ಅಭ್ಯರ್ಥಿ ಅರುಣ ಶಹಾಪುರ ಗೆಲವು ಸಾಧಿಸುವುದು ನಿಶ್ಚಿತ. ಮೈಸೂರು, ಧಾರವಾಡ, ಬೆಳಗಾವಿ ಸೇರಿದಂತೆ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ಸಾಧಿಸುವ ವಿಶ್ವಾಸವಿದೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಸಚಿವ ಉಮೇಶ್ ಕತ್ತಿ, ಪ್ರಕಾಶ ಹುಕ್ಕೇರಿ ಒಳ್ಳೆಯ ರಾಜಕಾರಣಿ ಆದರೆ ಅವರು ಶಿಕ್ಷಕರಲ್ಲ.ಹುಕ್ಕೇರಿ ಅವರು ಶಾಸಕ, ಸಂಸದ, ಸ್ಥಳೀಯ ಸಂಘ ಸಂಸ್ಥೆಗಳಿಂದ ಚುನಾಯಿತರಾದವರು. ಹಾಗಾಗಿ ಶಿಕ್ಷಕ ಮತಕ್ಷೇತ್ರಕ್ಕೆ ಸ್ಪರ್ಧೆ ಮಾಡಿರುವುದು ಸರಿಯಲ್ಲ ಎಂದು ಹೇಳಿದರು.
ಅರುಣ ಶಹಾಪುರ ಅವರು ಶಿಕ್ಷಣ ಮತಕ್ಷೇತ್ರದ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಶಿಕ್ಷಕ ಮತಕ್ಷೇತ್ರದಿಂದ ಶಿಕ್ಷಕರೇ ಸ್ಪರ್ಧೆ ಮಾಡುವುದು ಸೂಕ್ತ. ವಾಯುವ್ಯ ಶಿಕ್ಷಕ ಮತಕ್ಷೇತ್ರ ಹಾಗೂ ಪದವೀಧರ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸುತ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ 13 ಶಾಸಕರು ಬಿಜೆಪಿಯವರಿರುವುದರಿಂದ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ ಎಂದರು.
ಇನ್ನು ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಯಾವುದೇ ಆಂತರಿಕ ಕಿತ್ತಾಟವೂ ಇಲ್ಲ, ಭಿನ್ನಾಭಿಪ್ರಾಯವೂ ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಗೆ ಮತ್ತೆ ಸಂಕಷ್ಟ; EDಯಿಂದ ಹೊಸದಾಗಿ ಚಾರ್ಜ್ ಶೀಟ್ ಸಲ್ಲಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ