Latest

ಜನವಸತಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ: ಬಂಧನಕ್ಕೆ ಆಗ್ರಹ

ಪ್ರಗತಿವಾಹಿನಿ ಸುದ್ದಿ, ಖಾನಾಪುರ
 ತಾಲ್ಲೂಕಿನ ಹಿರೇ ಅಂಗ್ರೊಳ್ಳಿ, ಚಿಕ್ಕ ಅಂಗ್ರೊಳ್ಳಿ, ಕಡತನ ಬಾಗೇವಾಡಿ, ಬೀಡಿ, ಬೇಕವಾಡ, ಮುಗಳಿಹಾಳ ಹಾಗೂ ಸುತ್ತಲಿನ ಜನನಿಬಿಡ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಚಿರತೆ ಪ್ರತ್ಯಕ್ಷವಾಗಿದ್ದು, ಈ ಭಾಗದ ಕೃಷಿ ಜಮೀನುಗಳಲ್ಲಿ ಸಂಚರಿಸಿದ ಚಿರತೆ ಕೃಷಿ ಹೊಂಡದಲ್ಲಿ ನೀರು ಕುಡಿದು ತೆರಳಿದೆ ಎಂದು ರೈತರು ಹೇಳಿದ್ದಾರೆ.
ಕೃಷಿ ಭೂಮಿಗಳಲ್ಲಿ ಮತ್ತು ಜನವಸತಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ಕಾರಣ ರೈತಾಪಿ
ಸಮುದಾಯ ಆತಂಕಗೊಂಡಿದ್ದು, ಚಿರತೆ ಕಾಣಿಸಿಕೊಂಡ ಆತಂಕ ಇರುವ ಕಾರಣ ಗ್ರಾಮಸ್ಥರು
ಒಂಟಿಯಾಗಿ ಓಡಾಡಲು ಹೆದರುತ್ತಿದ್ದಾರೆ. ಕೂಡಲೇ ಚಿರತೆಯನ್ನು ಬಂಧಿಸಿ ಅರಣ್ಯಕ್ಕೆ
ಸಾಗಿಸುವಂತೆ ರೈತರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಬೀಡಿ ಹಾಗೂ ಬೇಕವಾಡ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬ ಕಾರಣಕ್ಕೆ ಈ ಭಾಗದಲ್ಲಿ
ಭಯದ ವಾತಾವರಣ ನಿರ್ಮಾಣವಾಗಿದೆ. ಚಿರತೆ ಕೋತಿಗಳನ್ನು ಮತ್ತು ನಾಯಿ, ಕುರಿಗಳನ್ನು
ತಿನ್ನಲು ಕಾಡಿನಿಂದ ನಾಡಿಗೆ ಬಂದಿರುವ ಶಂಕೆಯಿದೆ. ಆದರೆ ಇದುವರೆಗೂ ಚಿರತೆ ಯಾರಿಗೂ
ಕಾಣಿಸಿಕೊಂಡಿಲ್ಲ. ಯಾರಿಗೂ ತೊಂದರೆ ಮಾಡಿಲ್ಲ. ರೈತರ ಜಮೀನುಗಳಿಗೆ ನುಗ್ಗಿ ಬೆಳೆಹಾನಿ
ಮಾಡುತ್ತಿರುವ ಕೋತಿಗಳನ್ನು ಬೇಟೆಯಾಡಲು ಚಿರತೆ ಬಂದಿದೆ. ಹೀಗಾಗಿ ರೈತರು ಚಿರತೆಯ
ಬಗ್ಗೆ ಭಯಪಡಬಾರದು ಎಂದು ಹಿರೇ ಅಂಗ್ರೊಳ್ಳಿ ಗ್ರಾಮಸ್ಥ, ಪರಿಸರವಾದಿ ಬಸವಣ್ಣೆಪ್ಪ
ಉಳ್ಳೇಗಡ್ಡಿ ಹೇಳಿದ್ದಾರೆ.
ಚಿರತೆ ಸಂಚರಿಸಿದೆ ಎನ್ನಲಾದ ಹಿರೇ ಅಂಗ್ರೊಳ್ಳಿ, ಚಿಕ್ಕ ಅಂಗ್ರೊಳ್ಳಿ ಹಾಗೂ
ಸುತ್ತಲಿನ ಭಾಗದ ಕೃಷಿ ಭೂಮಿಗಳಿಗೆ ಬುಧವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು
ಸಿಬ್ಬಂದಿ ಭೇಟಿ ನೀಡಿದ್ದಾರೆ. ಕೆಲವು ಕೃಷಿ ಭೂಮಿಗಳಲ್ಲಿ ಚಿರತೆಯ ಹೆಜ್ಜೆ
ಗುರುತುಗಳು ಗೋಚರಿಸಿದ್ದು, ಚಿರತೆಯ ಚಲನವಲನಗಳ ಬಗ್ಗೆ ಇಲಾಖೆ ನಿಗಾ ವಹಿಸಿದೆ ಎಂದು
ಅರಣ್ಯ ಇಲಾಖೆಯ ಮೂಲಗಳು ಪ್ರಗತಿವಾಹಿನಿಗೆ ತಿಳಿಸಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button