ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿಗಳು ಮಾಡಬೇಕಾಗಿರುವ ಕಾರ್ಯ ಒಂದೇ ಪರಿಸರ ರಕ್ಷಣೆ ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಭಾನುವಾರ ನಗರದ ಲಕ್ಷ್ಮೀ ಟೇಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಪರಿಸರ ದಿನಾಚರಣೆಯ ಹಾಗೂ ಲಿಂ. ವೀರುಪಾಕ್ಷಲಿಂಗ ಶಿವಾಚಾರ್ಯರ 38ನೇ ಪುಣ್ಯ ಸ್ಮರಣೋತ್ಸವ, 55ನೇ ಮಾಸಿಕ ಸುವಿಚಾರ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊರೊನಾದಂಥ ಹೆಮ್ಮಾರಿಯನ್ನು ನಾವು ಎದುರಿಸಿದ್ದೇವೆ. ಇದಕ್ಕೆ ಕಾರಣ ನಾವು ಪರಿಸರವನ್ನು ರಕ್ಷಿಸದೆ ಇರುವುದು. ಅರಳಿ, ಆಲ, ಬನ್ನಿ, ಬಿಲ್ವ, ಬೇವು ಹೀಗೆ ಅನೇಕ ಮರಗಳು ನಮಗೆ ಸಾಕಷ್ಟು ಉಪಯೋಗದಾಯಕವಾಗಿವೆ. ಅರಳಿ, ಆಲ ಬೆಳೆಸಿದರೆ ಸಾಕಷ್ಟು ಆಮ್ಲಜನಕವನ್ನು ನಾವು ಪಡೆಯಬಹುದು. ಆದರೆ ಅದನ್ನು ಯಾರೊಬ್ಬರೂ ಮಾಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಪರಿಸರದ ಬಗ್ಗೆ ಭಾಷಣ ಮಾಡುತ್ತೇವೆ. ಪರಿಸರ ರಕ್ಷಣೆಯಲ್ಲಿ ವಿಫಲರಾಗಿದ್ದೇವೆ. ಎಲ್ಲ ಹೋರಾಟಕ್ಕಿಂತ ಪರಿಸರ ರಕ್ಷಣೆಯ ಹೋರಾಟವೇ ಪ್ರಮುಖವಾದರೆ ಒಳಿತು ಎಂದರು.
ಪ್ರಮುಖ ಉಪನ್ಯಾಸಕರಾಗಿ ಆಗಮಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ದಿಲೀಪ್ ಕುರುಂದವಾಡೆ ಮಾತನಾಡಿ, ಗುರುಗಳು ನಮಗೆ ಆಶೀರ್ವಾದ ಪೂರಕವಾಗಿ ಮೊದಲು ಮರಗಳನ್ನು ಬೆಳೆಸಲು ಪ್ರೇರೇಪಣೆ ನೀಡುತ್ತಿದ್ದರು. ಹುಕ್ಕೇರಿ ಹಿರೇಮಠವೂ ಕೂಡ ಇಡೀ ರಾಜ್ಯದ ತುಂಬ ಪರಿಸರ ರಕ್ಷಣೆಯನ್ನು ಮಾಡುವುದರ ಜತೆಗೆ ಧಾರ್ಮಿಕ ವಿಚಾರಗಳನ್ನು ಜನರಿಗೆ ತಿಳಿಸುತ್ತ ಬಂದಿದೆ ಎಂದರು.
ವೀರುಪಾಕ್ಷ ಲಿಂಗ ಶಿವಾಚಾರ್ಯರ ಹೆಸರಿನಿಂದ ಇವತ್ತು ವೇದ, ಜೋತಿಷ್ಯ, ಉಪನಿಷತ್ತುಗಳ ಪಾಠ ಶಾಲೆ ಆರಂಭವಾಗಿ ರಾಜ್ಯ ಅಷ್ಟೆ ಅಲ್ಲ, ಹೊರ ರಾಜ್ಯದಲ್ಲಿಯೂ ಸುಮಾರು ಎರಡು ಸಾವಿರಕ್ಕಿಂತ ಹೆಚ್ಚು ವಟುಗಳು ವೇದವನ್ನು ಕಲಿತ್ತಿದ್ದಾರೆ. ಹುಕ್ಕೇರಿ ಹಿರೇಮಠ ಮಹಿಳೆಯರಿಗೂ ವೇದ ಕಲಿಸುವುದರ ಮೂಲಕ ಆದರ್ಶ ಪ್ರಾಯರಾಗಿದ್ದಾರೆ ಎಂದರು.
ಹುಕ್ಕೇರಿ ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಮಹಾವೀರ ನಿಲಜಗಿ ಮಾತನಾಡಿ, ಮಠಗಳು ಎಂದರೆ ಜಾತಿಯ ಗಡಿದಾಟಿರಬೇಕು. ಹುಕ್ಕೇರಿ ಹಿರೇಮಠ ಇವತ್ತು ಬೆಳಗಾವಿ, ರಾಯಬಾಗ ಮತ್ತು ಅನೇಕ ಕಡೆ ಎಲ್ಲ ಸಮುದಾಯದವರನ್ನು ಕೂಡಿಸಿ ಅವರಿಗೆ ಪ್ರೇರಕ ಶಕ್ತಿಯಾಗಿ ನಿಂತಿರುವುದು ಹೆಮ್ಮೆ ಎನ್ನಿಸುತ್ತಿದೆ ಎಂದರು.
ಹುಕ್ಕೇರಿ ನಗರದ ರೂರಲ್ ಎಜುಕೇಶನ್ ಆ್ಯಂಡ್ ಅಗ್ರಿಕಲ್ಚರ್ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಅಶೋಕ ಪಾಟೀಲ ಮಾತನಾಡಿ, ಕೃಷಿಗೆ ಹೆಚ್ಚು ಮಹತ್ವ ಕೊಡಬೇಕು. ರೈತರಿಗೆ ಪ್ರೇರಕ ಶಕ್ತಿ ಅವರು ಬೆಳೆದ ಬೆಳೆಗೆ ಯೋಗ್ಯ ದರ ದೊರಕಬೇಕು. ಆಗ ಮಾತ್ರ ರೈತ ಉಳಿಯಲು ಸಾಧ್ಯ ಎಂದರು.
ಗೋಕಾಕ ಶ್ರೀ ಬ್ರಹ್ಮಾನಂದ ಸ್ವಾಮೀಜಿ, ವೀರುಪಾಕ್ಷ ಶಿವಾಚಾರ್ಯ ಸ್ವಾಮೀಜಿಗಳ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಕಟಕೋಳ ಎಂ ಚಂದರಗಿ ಹಿರೇಮಠದ ರೇಣುಕ ಗಡದೇಶ್ವರ ದೇವರು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪಂಚವಟಿಕೆ ಅಂದರೆ ಅರಳಿ,ಆಲ, ಬನ್ನಿ, ಬಿಲ್ವ, ಬೇವು ಐದು ಮರಗಳಿಗೆ ಪೂಜೆ ಸಲ್ಲಿಸಿದರು. ಅರವಿಂದ ಜೋಶಿ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ