Latest

ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ

 

 

 

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಜ್ಞಾನವು ನಿಂತ ನೀರಾಗದೆ ಹರಿವ ನೀರಂತಿರಬೇಕು ಎಂದು ಇಂಡಿಯನ್ ಅಸೋಶಿಯೇಶನ್ ಆಪ್ ಪಿಡಿಯಾಟ್ರಿಕ್ಸನ ಅಧ್ಯಕ್ಷ ಡಾ. ರವೀಂದ್ರ ಜೋಶಿ ಹೇಳಿದ್ದಾರೆ.
ಅವರು ಯಳ್ಳೂರ ರಸ್ತೆಯಲ್ಲಿನ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚಿಕ್ಕ ಮಕ್ಕಳ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೪ನೇ ವಾರ್ಷಿಕ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ತಂದೆ ತಾಯಿ ಮತ್ತು ಮನೆಯಲ್ಲಿ ಇತರೆ ಸದಸ್ಯರುಗಳು ಮಗುವಿನ ಪಾಲನೆ ಪೋಷನೆಯ ಬಗ್ಗೆ ಅಗತ್ಯ ಜ್ಞಾನವನ್ನು ಹೊಂದಿರುವದು ಅತ್ಯಗತ್ಯವಾಗಿದೆ. ಆದ್ದರಿಂದ ವೈದ್ಯರಾದವರು ಜ್ಞಾನವನ್ನು ಹಂಚಿಕೊಳ್ಳುವುದರಿಂದ ಮಕ್ಕಳು ಸುದೃಢವಾಗಿ ಬೆಳೆದು ನಾಳಿನ ಭಾರತದ ಸತ್ಪ್ರಜೆಯಾಗಿ ರೂಪುಗೊಳ್ಳುವುದರಲ್ಲಿ ಎರಡು ಮಾತಿಲ್ಲ ಎಂದು ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಇಂಡಿಯನ್ ಅಸೋಶಿಯೇಶನ್ ಆಫ್ ಪಿಡಿಯಾಟ್ರಿಕ್ಸನ ಖಜಾಂಚಿ ಡಾ. ವಿಜಯ ಕುಲಕರ್ಣಿ ಆಂಟಿನೆಟಲ್ ಮ್ಯಾನೇಜ್‌ಮೆಂಟ್ ಆಫ್ ಹೆಚ್‌ಐವಿ ಇನ್ಪೆಕ್ಟೆಡ್ ಮದರ‍್ಸ ಎಂಬ ವಿಷಯದ ಬಗ್ಗೆ ಮಾತನಾಡುತ್ತ, ಇಂದು ಹೆಚ್‌ಐವಿ ಏಡ್ಸ್ ಸೋಂಕು ಸಾಮಾನ್ಯವಾಗಿದ್ದು ದಿನೇ ದಿನೇ ಈ ಮಾರಕ ರೋಗದ ಪ್ರಕರತೆ ಅಧಿಕವಾಗುತ್ತಿದೆ. ಅದರಲ್ಲೂ ಎದೆ ಹಾಲು ನೀಡುವ ಸೋಂಕಿತ ತಾಯಂದಿರಿಂದ ಶಿಶುವಿಗೆ ಸೋಂಕು ಹರಡುವುದನ್ನು ವೈಜ್ಞಾನಿಕ ವಿಧಾನಗಳನ್ನು ಅನುಸರಿಸುವ ಮೂಲಕ ತಡಹಿಡಿಯಬಹುದಾಗಿದೆ ಅಥವಾ ಅದರ ತೀಕ್ಷ್ಣತೆಯನ್ನು ಕಡಿಮೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಯು ಎಸ್ ಎಮ್ ಕೆ ಎಲ್ ಇ ಯ ಉಪ ಪ್ರಾಂಶುಪಾಲ ಡಾ. ಮಹಮ್ಮದ್ ಸುಹೇಮಿ ಬಿನ್ ಅಬ್ ವಹಾಬ ಮಾತನಾಡುತ್ತ, ಇಂತಹ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮಗಳು ಇರುವ ಜ್ಞಾನವನ್ನು ಒರೆಗೆ ಹಚ್ಚಿ ಅದರ ಅಂತಃಶಕ್ತಿಯನ್ನು ಜಗತ್ತಿಗೆ ಸಾರುವ ವೇದಿಕೆಗಳಾಗಿವೆ. ಆದ್ದರಿಂದ ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ಜರುಗುತ್ತಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಆಯೋಜನಾ ಚೇರ್‌ಮನ್‌ರಾಗಿದ್ದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕ ಡಾ. ಎಸ್ ಸಿ ಧಾರವಾಡ ಮಾತನಾಡುತ್ತ, ಪುಸ್ತಕಗಳು ನಮ್ಮ ಜ್ಞಾನವನ್ನು ಅಧಿಕಗೊಳಿಸುವ ಸರೋವರಗಳಾಗಿವೆ. ಇರುವ ಜ್ಞಾನವನ್ನು ಇನ್ನಷ್ಟು ಶ್ರೀಮಂತ ಗೊಳಿಸುವ ಕಾರ್ಯಕ್ರಮಗಳು ಅದರಲ್ಲಿ ಹೊಸತನವನ್ನು ತುಂಬಿ ಚಿಕಿತ್ಸೆಯ ವಿಧಾನಗಳನ್ನು ಪದ್ದತಿಗಳನ್ನು ರೂಢಿಗೆ ತರಬಹುದಾಗಿದೆ. ಅಲ್ಲದೇ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಮೆದುಳಿನಿಂದ ಯೋಚಿಸಿ ಹಾಗೂ ಹೃದಯದಿಂದ ಚಿಕಿತ್ಸೆ ನೀಡಿರಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕ ಡಾ. ಹೆಚ್ ಬಿ ರಾಜಶೇಖರ ಮಾತನಾಡುತ್ತ ಇಂದಿನ ತಂತ್ರಜ್ಞಾನ ಯುಗದಲ್ಲಿ ಪಾಲಕರು ಅಂತರ್ಜಾಲ (ಇಂಟರ್‌ನೆಟ್) ಹಾಗೂ ಹೇಳಿಕೆಯ ಆಧಾರದ ಮೇಲೆ ಮಕ್ಕಳಿಗೆ ಔಷಧಿಗಳನ್ನು ನೀಡುವ ಪದ್ದತಿಯು ರೂಢಿಯಲ್ಲಿದ್ದು ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಮಕ್ಕಳ ನರರೋಗ ತಜ್ಞ ಡಾ ರಾಘವೇಂದ್ರ ಅಮೋಘಿಮಠ, ಸೀಜರ ಆಂಡ್ ಇಟ್ಸ ಎವೆಲ್ಯುವೇಷನ್ ಎಂಬ ವಿಷಯದ ಮೇಲೆ ಮಾತನಾಡಿದರು. ಹಿರಿಯ ಶ್ವಾಸಕೋಶ ತಜ್ಞ ಡಾ. ಬಾಬಣ್ಣ ಹುಕ್ಕೇರಿ, ಕಮ್ಯುನಿಟಿ ಅಕ್ವೇಯರ್‌ಡ ನುಮ್ಯೋನಿಯಾ ಎಂಬ ವಿಷಯದ ಮೇಲೆ ಬೆಳಕು ಚೆಲ್ಲಿದರು. ನಂತರ ಹಿರಿಯ ಮಕ್ಕಳ ತಜ್ಞೆ ಡಾ. ವಿಜಯಲಕ್ಷ್ಮಿ ಕುಲಗೋಡ ಬೇಸಿಕ್ ಲೈಫ್ ಸಪೋರ್ಟ ಎಂಬ ವಿಷಯದ ಕುರಿತು ಮಾತನಾಡಿದರು. ಮಕ್ಕಳ ತಜ್ಞ ಡಾ. ಮುರುಘೇಶ ಪಾಟೀಲ ನಿಯೋನೆಟಲ್ ರಸುಶಿಟೇಷನ್ ಎಂಬ ವಿಷಯದ ಮೇಲೆ ವೈದ್ಯ ವಿದ್ಯಾರ್ಥಿಗಳ ಜೊತೆಗೆ ಚರ್ಚಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ವೈದ್ಯ ಡಾ. ಬಿ ಎಸ್ ಮಹಾಂತಶೆಟ್ಟಿ, ಶಸ್ತ್ರಚಿಕಿತ್ಸಕ ಡಾ. ಅಶೋಕ ಪಾಂಗಿ ಹಾಗೂ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚಿಕ್ಕ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಎಸ್.ಕಡ್ಡಿ . ಡಾ.ಸುರೇಶ ಕಾಖಂಡಕಿ, ಡಾ.ಅನಿತಾ ಮೋದಗೆ, ಡಾ. ಸಂತೋಷಕುಮಾರ, ಡಾ. ಮುರುಘೇಶ ಪಾಟೀಲ, ಡಾ.ಪ್ರೀತಿ ಮತ್ತು ಆಸ್ಪತ್ರೆಯ ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿ ಭಾಗವಹಿಸಿದ್ದರು. ಯು ಎಸ್ ಎಮ್ ಕೆ ಎಲ್ ಇ ಸುಮಾರು 100 ಕ್ಕೂ ಅಧಿಕ ವೈದ್ಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಯು ಎಸ್ ಎಮ್ ಕೆ ಎಲ್ ಇ ಯ ವೈದ್ಯ ವಿದ್ಯಾರ್ಥಿ ಡಾ. ಅಲಿಯಾ ಅಲಿ ನಿರೂಪಿಸಿದರು. ಡಾ.ಸೌಮ್ಯ ವೆರ್ಣೇಕರ ಸ್ವಾಗತಿಸಿದರು. ಹಿರಿಯ ವೈದ್ಯ ಡಾ. ಸುರೇಶ ಕಾಖಂಡಕಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button