Latest

ಜನರಿಗಾಗಿ ಜನ್ಮ ದಿನ ಬದಲಿಸಿಕೊಂಡು ಇತಿಹಾಸ ಸೃಷ್ಟಿಸಿದ ಶಾಸಕಿ

 

ಇಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಜನ್ಮದಿನ. ಅವರ ನಿಜವಾದ ಜನ್ಮದಿನ ಫೆ.14, ಆದರೆ ಮತದಾರರಿಗಾಗಿ ಬದಲಾಯಿಸಿಕೊಂಡ ಜನ್ಮ ದಿನ ಇಂದು.

ವಿಶ್ವನಾಯಕ ನೆಲ್ಸನ್ ಮಂಡೇಲಾ ಅವರನ್ನು ಜೈಲಿಗೆ ಹಾಕಿದಾಗ ವಿಶ್ವದಾದ್ಯಂತ ಹಲವಾರು ಜನರು ನೆಲ್ಸನ್ ಮಂಡೇಲಾ ಜನ್ಮ ದಿನವನ್ನೇ ತಮ್ಮ ಜನ್ಮ ದಿನವನ್ನಾಗಿ ಮಾಡಿಕೊಂಡರು.  ಇದು ನಾಯಕನಿಗಾಗಿ ಜನರು ಜನ್ಮ ದಿನ ಬದಲಾಯಿಸಿಕೊಂಡಿದ್ದು.

ಆದರೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಜನರಿಗಾಗಿ ತಮ್ಮ ಜನ್ಮ ದಿನವನ್ನು ಬದಲಾಯಿಸಿಕೊಡಿದ್ದಾರೆ. ಇದೊಂದು ಹೊಸ ಇತಿಹಾಸವೇ ಸರಿ.

ಪ್ರಗತಿ ಮೀಡಿಯಾ ಹೌಸ್, ಬೆಳಗಾವಿ
ವ್ಯಕ್ತಿಯೊಬ್ಬರು ತಮ್ಮ ಜನ್ಮ ದಿನವನ್ನು ಬದಲಾಯಿಸಿದ್ದು ಎಲ್ಲೂ ಇಲ್ಲ. ಅದರಲ್ಲೂ ರಾಜಕಾರಣಿಯೊಬ್ಬರು ಮತದಾರರಿಗೋಸ್ಕರ ಜನ್ಮ ದಿನ ಬದಲಾಯಿಸುವುದಂತೂ ಕೇಳರಿಯದ ವಿಷಯವೇ ಸರಿ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಇಂತಹ ಇತಿಹಾಸ ಸೃಷ್ಟಿಸಿದ್ದಾರೆ. ಫೇ 14, ವಿಶ್ವ ಪ್ರೇಮಿಗಳ ದಿನ. ಲಕ್ಷ್ಮಿ ಹೆೆಬ್ಬಾಳಕರ್ ಹುಟ್ಟಿದ್ದೂ ಪ್ರೇಮಿಗಳ ದಿನವೇ. ಅಂತಹ ಜಾಗತಿಕ ಮಹತ್ವದ ದಿನ ಹುಟ್ಟಿದ ಹೆಬ್ಬಾಳಕರ್ ಕಳೆದ ವರ್ಷದಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮತದಾರರ ಪ್ರೇಮದಲ್ಲಿ ಸಿಲುಕಿದರು. ಒಂದು ಬಾರಿ ವಿಧಾನಸಭಾ ಚುನಾವಣೆಯಲ್ಲಿ, ಮತ್ತೊಂದು ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದ ಲಕ್ಷ್ಮಿ ಹೆಬ್ಬಾಳಕರ್ 2018ರ ವಿಧಾನಸಭೆ ಚುನಾವಣೆಗೆ ಪುನಃ ಸ್ಪರ್ಧಿಸಿದ್ದರು. 2014ರ ಚುನಾವಣೆಯಲ್ಲಿ ಸೋತಿದ್ದರೂ ಗ್ರಾಮೀಣ ಕ್ಷೇತ್ರದಲ್ಲಿ ತಾವೊಬ್ಬ ಜನಪ್ರತಿನಿಧಿ ಎನ್ನುವಂತೆ ಅಡ್ಡಾಡಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿದ್ದರು. ಇದರಿಂದಾಗಿ ಗ್ರಾಮೀಣ ಜನರಿಗೆ ಲಕ್ಷ್ಮಿ ಹೆಬ್ಬಾಳಕರ್ ಮೇಲೆ ವಿಶೇಷ ಪ್ರೀತಿ ಉಂಟಾಗಿತ್ತು. ಹಾಗಾಗಿಯೇ 2018ರ ಚುನಾವಣೆಯಲ್ಲಿ ಅತ್ಯಧಿಕ ಬಹುಮತದಿಂದ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿದರು.
ಆಯ್ಕೆಯಾದ ಮರುಕ್ಷಣವೇ ಆ ಸಂತಸದಿಂದ ತೇಲಿಹೋದ ಲಕ್ಷ್ಮಿ ಹೆಬ್ಬಾಳಕರ್, ಇನ್ನು ಮುಂದೆ ತಮ್ಮನ್ನು ಆಯ್ಕೆ ಮಾಡುವ ಮಲಕ ಮರುಜನ್ಮ ನೀಡಿದ ಇಂದಿನ ದಿನವನ್ನೇ ನನ್ನ ಜನ್ಮ ದಿನವನ್ನಾಗಿ ಆಚರಿಸಿಕೊಳ್ಳುತ್ತೇನೆ ಎಂದು ತಮ್ಮ ಶಾಸಕತ್ವದ ಮೊದಲ ಬಹಿರಂಗ ಸಭೆಯ್ಲೇ ಘೋಷಿಸಿದರು.
ಅದರಂತೆ ವಿದಾಯಕ ಕಾರ್ಯಕ್ರಮಗಳೊಂದಿಗೆ ಪ್ರತಿವರ್ಷವೂ ಜನ್ಮದಿನ ಆಚರಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ. ಕಳೆದ ವರ್ಷ ಶಾಸಕಿಯಾಗುವ ಮುನ್ನವೇ ಬಂದ ಜನ್ಮ ದಿನಾಚರಣೆಯನ್ನು ದೇಶದ ಗಡಿ ಕಾಯುವ ಸಾವಿರಾರು ಸೈನಿಕರ ಸನ್ಮಾನದ ಮೂಲಕ ಆಚರಿಸಿಕೊಂಡಿದ್ದರು. ಈ ಬಾರಿ ಗ್ರಾಮೀಣ ಕ್ಷೇತ್ರದ 200ಕ್ಕೂ ಹೆಚ್ಚು ಸಾಧಕ ವಿದ್ಯಾರ್ಥಿಗಳ ಸನ್ಮಾನದ ಮೂಲಕ ಆಚರಿಸಿಕೊಳ್ಳುತ್ತಿದ್ದಾರೆ.

ಗ್ರಾಮೀಣ ಕ್ಷೇತ್ರದ ಮನೆ ಮಗಳು

ಲಕ್ಷ್ಮಿ ಹೆಬ್ಬಾಳಕರ್ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಮಾಡುವ ಸಂದರ್ಭದಲ್ಲಿ ನಾನು ನಿಮ್ಮ ಮನೆಯ ಮಗಳು ಎಂದು ಹೇಳಿಕೊಂಡು ಮತ ಕೇಳಿದ್ದರು. ಅದರಂತೆ ತಮ್ಮ ಮನೆಯ ಮಗಳೆಂದು ಒಪ್ಪಿಕೊಂಡು ಗ್ರಾಮೀಣ ಕ್ಷೇತ್ರದ ಜನರು ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಮತ ನೀಡಿ ದಾಖಲೆಯ ಅಂತರದಿಂದ ಆಯ್ಕೆ ಮಾಡಿ ಕಳುಹಿಸಿದರು.

ಚುನಾವಣೆ ಮುಗಿದ ನಂತರ ಲಕ್ಷ್ಮಿ ಹೆಬ್ಬಾಳಕರ್ ಗ್ರಾಮೀಣ ಜನರ ಕೈ ಬಿಡಲಿಲ್ಲ. ಸಾಮಾನ್ಯ ರಾಜಕಾರಣಿಗಳಂತೆ ಕೊಟ್ಟ ಆಶ್ವಾಸನೆಗಳನ್ನೆಲ್ಲ ಮರೆತು ಅಧಿಕಾರ ಅನುಭವಿಸಲಿಲ್ಲ. ತಾವು ಚುನಾವಣೆ ಮುನ್ನ ಏನು ಹೇಳಿದ್ದರೋ ಅದನ್ನು ಚಾಚೂ ತಪ್ಪದೆ ಜಾರಿಗೊಳಿಸುವುದರಲ್ಲಿ ಆಯ್ಕೆಯಾದ ಮರುದಿನದಿಂದಲೇ ತಮ್ಮನ್ನು ತೊಡಗಿಸಿಕೊಂಡಿದ್ದಲ್ಲದೆ, ಇಡೀ ಗ್ರಾಮೀಣ ಕ್ಷೇತ್ರವೇ ತನ್ನ ಮನೆ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ.

ಅಷ್ಟೇ ಅಲ್ಲ ಗ್ರಾಮೀಣ ಕ್ಷೇತ್ರದ ತಂದೆ-ತಾಯಂದಿರು ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಅಕ್ಷರಶಃ ತಮ್ಮ ಮನೆ ಮಗಳಂತೆಯೇ ನೋಡಿಕೊಳ್ಳುತ್ತಿದ್ದಾರೆ. ಲಕ್ಷ್ಮಿ ಹೆಬ್ಬಾಳಕರ್ ಕ್ಷೇತ್ರದ ಯಾವುದೇ ಊರಿಗೆ ಹೋಗಲಿ, ಯಾವುದೇ ಮನೆಗೆ ಹೋಗಲಿ ಜನ ತಮ್ಮ ಸ್ವಂತ ಮಗಳೇ ಬಂದಷ್ಟು ಖುಷಿ ಅನುಭವಿಸುತ್ತಾರೆ, ಪ್ರೀತಿ ಮಾಡುತ್ತಾರೆ. ವೃದ್ದೆಯರಂತೂ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ತಬ್ಬಿಕೊಂಡು ಆನಂದ ಭಾಷ್ಪ ಸುರಿಸುತ್ತಾರೆ. ಲಕ್ಷ್ಮಿ ಹೆಬ್ಬಾಳಕರ್ ಅವರಂತಹ ಜನಪ್ರತಿನಿಧಿ ಸಿಕ್ಕಿದ್ದು ತಮ್ಮ ಪಾಲಿನ ಭಾಗ್ಯ ಎನ್ನುವಂತೆ ಸಂಭ್ರಮಿಸುತ್ತಾರೆ. ಹಾಗಾಗಿ ಲಕ್ಷ್ಮಿ ಹೆಬ್ಬಾಳಕರ್ ಪಾಲಿಗೆ ಗ್ರಾಮೀಣ ಕ್ಷೇತ್ರವೇ ತಮ್ಮ ಕುಟುಂಬವಾಗಿದೆ.

ಕ್ಷೇತ್ರದಲ್ಲಿ ಪ್ರತಿವರ್ಷ ಹಳದಿ ಕುಂಕುಮ ಕಾರ್ಯಕ್ರಮ ಸಂಘಟಿಸುತ್ತಾರೆ. ಬೆಳಗಾವಿಯಲ್ಲಿ ಹೋಳಿ ದಿನ ವುಮೇನಿಯಾ ಕಾರ್ಯಕ್ರಮ ಏರ್ಪಡಿಸುತ್ತಾರೆ. ರಕ್ಷಾಬಂಧನ ಕಾರ್ಯಕ್ರಮ ಆಯೋಜಿಸುತ್ತಾರೆ. ಕ್ಷೇತ್ರದಲ್ಲಿರುವ 500ಕ್ಕೂ ಹೆಚ್ಚು ಗಣೇಶೋತ್ಸವ ಮಂಡಳಿಗಳಿಗೆ ಪ್ರತಿ ವರ್ಷ ತಲಾ 5000 ರೂ.ಗಳಿಗಿಂತಲೂ ಹೆಚ್ಚು ದೇಣಿಗೆ ನೀಡುತ್ತಾರೆ. ದೇವಸ್ಥಾನಗಳ ನಿರ್ಮಾಣ, ಜೀರ್ಣೋದ್ಧಾರಕ್ಕೆ ದೇಣಿಗೆ ಕೇಳಲು ಬಂದವರನ್ನು ಖಾಲಿ ಕೈಯಲ್ಲಿ ಕಳುಹಿಸಿದ ಉದಾಹರಣೆಯೇ ಇಲ್ಲ. ಕ್ಷೇತ್ರದ ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪ್ರತಿವರ್ಷ ಆರ್ಥಿಕ ಸಹಾಯ ನೀಡುತ್ತಾರೆ. ಸ್ವಸಹಾಯಸಂಘಗಳಿಗೆ ಧನ ಸಹಾಯ ನೀಡುತ್ತಾರೆ. ವಿವಿಧ ಜಯಂತಿಗಳಿಗೆ ದೇಣಿಗೆ ಕೊಡುತ್ತಾರೆ. ಹೀಗೇ ಕ್ಷೇತ್ರದ ಎಲ್ಲ ಚಟುವಟಿಕೆಗಳಿಗೆ ಬೆಂಬಲವಾಗಿ ನಿಂತು ಅಕ್ಷರಶಃ ಮನೆ ಮಗಳೇ ಆಗಿದ್ದಾರೆ ಲಕ್ಷ್ಮಿ ಹೆಬ್ಬಾಳಕರ್.

ಇತ್ತೀಚೆಗೆ ಜೋರಾಗಿ ಗಾಳಿ, ಮಳೆ ಬಂದಾಗ ಗ್ರಾಮೀಣ ಕ್ಷೇತ್ರದ ಹಲವು ಮನೆಗಳ ಮೇಲ್ಚಾವಣಿ ಹಾರಿಹೋಗಿತ್ತು. ಅನೇಕ ಮನೆಗಳ ಗೋಡೆ ಉರುಳಿ ಹೋಗಿತ್ತು. ಸುದ್ದಿ ತಿಳಿದ ತಕ್ಷಣ ಎಲ್ಲ ಕೆಲಸಗಳನ್ನು ಬದಿಗಿಟ್ಟು, ತಮ್ಮ ಪ್ರವಾಸವನ್ನೆಲ್ಲ ಮೊಟಕುಗೊಳಿಸಿ ಅಧಿಕಾರಿಗಳ ತಂಡದೊಂದಿಗೆ ಕ್ಷೇತ್ರಕ್ಕೆ ಧಾವಿಸಿದರು. ಎಲ್ಲ ಮನೆಗಳನ್ನು ಪರಿಶೀಲಿಸಿ, ತಕ್ಷಣ ಸೂಕ್ತ ಪರಿಹಾರ ಕಾರ್ಯಕೈಗೊಳ್ಳಲು ವ್ಯವಸ್ಥೆ ಮಾಡಿದರು. ಮನೆ ಮಗಳಾಗಿ ತನ್ನ ಕರ್ತವ್ಯ ಪ್ರಜ್ಞೆ ಮೆರೆದರು ಲಕ್ಷ್ಮಿ ಹೆಬ್ಬಾಳಕರ್.
ಕ್ಷೇತ್ರಾದ್ಯಂತ ಪಿಂಚಣಿ ಅದಾಲತ್ ನಡೆಸಿ, ಅರ್ಹರಿಗೆ ಸ್ಥಳದಲ್ಲೇ ಮಾಸಾಶನ ಮಂಜುರು ಮಾಡಿಸುವ ಮಾದರಿ ಕೆಲಸ ಮಾಡಿದ್ದಾರೆ. ಈವರೆಗೆ ಸುಮಾರು 800 ಜನರಿಗೆ ವಿವಿಧ ಮಾಸಾಶನ ಮಂಜೂರಾಗಿದೆ.

ಲಕ್ಷ್ಮಿ ತಾಯಿ ಫೌಂಡೇಶನ್ ನಿಂದ ಸುಮಾರು 50 ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳಿಗೆ ಕಳೆದ 6 ವರ್ಷದಿಂದ ನೀರುಸರಬರಾಜು ಮಾಡಿಸುತ್ತಿದ್ದಾರೆ.

 

ಸದ್ದಿಲ್ಲದ ಸಾಧಕಿ- ಪ್ರಭಾವಿ ಶಾಸಕಿ

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ರಾಜಕಾರಣಕ್ಕಿಂತ ಜನರ ಸೇವೆಯೇ ಮುಖ್ಯ. ಲಕ್ಷ್ಮಿ ಹೆಬ್ಬಾಳಕರ್ ಚುನಾವಣೆ ನಂತರ ರಾಜಕಾರಣಕ್ಕೆ ಹೆಚ್ಚಿನ ಮಹತ್ವ ನೀಡಲಿಲ್ಲ. ಪಕ್ಷ ವಹಿಸಿದ ಉಪಚುನಾವಣೆೆ ಮತ್ತು ಲೋಕಸಭಾ ಚುನಾವಣೆ ಪ್ರಚಾರ ಕೆಲಸಗಳನ್ನು ಹೊರತುಪಡಿಸಿ ಉಳಿದೆಲ್ಲ ಸಮಯವನ್ನು ಕ್ಷೇತ್ರದ ಜನರೊಂದಿಗೆ ಕಳೆಯುತ್ತಿದ್ದಾರೆ. ಇಲ್ಲವೇ ಬೆಂಗಳೂರಿನಲ್ಲಿದ್ದು, ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸುವ ಕೆಲಸದಲ್ಲಿರುತ್ತಾರೆ. ಚುನಾವಣೆವರೆಗೆ ಮಾತ್ರ ರಾಜಕಾರಣ. ನಂತರ ಏನಿದ್ದರೂ ಅಭಿವೃದ್ಧಿ. ಅಭಿವೃದ್ಧಿಯಲ್ಲಿ ನಾನು ಎಂದಿಗೂ ರಾಜಕೀಯ ಮಾಡಲು ಬಯಸುವುದಿಲ್ಲ ಎನ್ನುವ ಅವರು, ನಿರಂತರವಾಗಿ ಕ್ಷೇತ್ರದ ಸಮಸ್ಯೆಗಳ ಪರಿಹಾರದ ಕುರಿತು ಜನರೊಂದಿಗೆ, ಅಧಿಕಾರಿಗಳೊಂದಿಗೆ, ಸಂಬಂಧಿಸಿದ ಸಚಿವರೊದಿಗೆ ಚರ್ಚಿಸುತ್ತಿರುತ್ತಾರೆ.
ಹಾಗಾಗಿಯೇ ಬಹುಶಃ ರಾಜ್ಯದಲ್ಲೇ ಅತ್ಯಧಿಕ ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡು ಬಂದಿರುವ ಶಾಸಕಿ ಎನ್ನುವ ಹೆಗ್ಗಳಿಕೆಗೆ ಲಕ್ಷ್ಮಿ ಹೆಬ್ಬಾಳಕರ್ ಪಾತ್ರರಾಗಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ರಾಜ್ಯದಲ್ಲೇ ಅತ್ಯಂತ ಪ್ರಭಾವಿ ಶಾಸಕಿ ಎಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಎಷ್ಟೋ ಜನರು 5 ವರ್ಷದಲ್ಲಿ ಮಾಡಲಾಗದ, 2-3 ಬಾರಿ ಶಾಸಕರಾಗಿ ಆಯ್ಕೆಯಾದರೂ ಮಾಡಲಾಗದಷ್ಟು ಕೆಲಸವನ್ನು ಆಯ್ಕೆಯಾಗಿ ಕೇವಲ ಒಂದೇ ವರ್ಷದಲ್ಲಿ ಮಾಡಿ ತೋರಿಸಿದ್ದಾರೆ.

ಲಕ್ಷ್ಮಿ ಹೆಬ್ಬಾಳಕರ್ ತಾವು ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಏನೇನು ಆಶ್ವಾಸನೆಗಳನ್ನು ನೀಡಿದ್ದರೋ ಅವುಗಳಲ್ಲಿ ಬಹುತೇಕ ಆಶ್ವಾಸನೆಗಳನ್ನು ಈಗಾಗಲೆ ಈಡೇರಿಸಿದ್ದಾರೆ.

ಇಂದಿನ ಅಧಿಕಾರಿ ಶಾಹಿ ಆಡಳಿತದಲ್ಲಿ ಕೆಲಸಗಳನ್ನು ಮಾಡಿಸುವುದು ಸುಲಭವಲ್ಲ. ಹಿರಿಯ ರಾಜಕಾರಣಿಗಳನ್ನೂ ತಲೆಕೆಳಗೆ ಮಾಡುತ್ತಾರೆ ಅಧಿಕಾರಿಗಳು. ಆದರೆ ಲಕ್ಷ್ಮಿ ಹೆಬ್ಬಾಳಕರ್ ಸರಕಾರದಲ್ಲಿ ಹಾಗೂ ಅಧಿಕಾರಿ ವಲಯದಲ್ಲಿ ಒಳ್ಳೆಯ ಹೆಸರು ಗಳಿಸಿಕೊಂಡಿದ್ದಾರೆ. ಹಾಗಾಗಿಯೇ ಬೇಕಾದ ಕೆಲಸವನ್ನು ಮಂಜೂರು ಮಾಡಿಸಿಕೊಂಡು ಬರುವ ತಾಕತ್ತು ಅವರಿಗಿದೆ.

ಲಕ್ಷ್ಮಿ ಹೆಬ್ಬಾಳಕರ್ ಗ್ರಾಮೀಣ ವಿಧಾನಸಭಾ ಕ್ಷೇತ್ರ ಹಿಂದೆಂದೂ ಕಂಡರಿಯದಷ್ಟು ಕೆಲಸಗಳನ್ನು ಕಳೆದ ಒಂದು ವರ್ಷದಲ್ಲಿ ಮಾಡಿಸಿದ್ದಾರೆ. ಗ್ರಾಮೀಣ ರಸ್ತೆಗಳು, ಜಿಲ್ಲಾ ಮುಖ್ಯ ರಸ್ತೆಗಳು, ರಾಜ್ಯ ಹೆದ್ದಾರಿ, ಕುಡಿಯುವ ನೀರು ಯೋಜನೆ, ಅಣೆಕಟ್ಟು, ಚೆಕ್ ಡ್ಯಾಂ, ಬಾಂದಾರಗಳ ನಿರ್ಮಾಣ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಕೆರೆಗಳ ಹೂಳೆತ್ತುವ ಯೋಜನೆ, ದೇವಸ್ಥಾನಗಳ ಅಭಿವೃದ್ಧಿ, ಚರಂಡಿಗಳ ನಿರ್ಮಾಣ ಹೀಗೆ ಸಾವಿರಾರು ಕಾಮಗಾರಿಗಳನ್ನು ಅಲ್ಪಾವಧಿಯಲ್ಲೇ ಮಾಡಿಸಿದ್ದಾರೆ.

ಕ್ಷೇತ್ರದ ಚಿತ್ರಣವೇ ಬದಲು

ಲಕ್ಷ್ಮಿ ಹೆಬ್ಬಾಳಕರ್ ಶಾಸಕರಾಗಿ ಆಯ್ಕೆಯಾದ ಒಂದೇ ವರ್ಷದಲ್ಲಿ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಿಬಿಟ್ಟಿದ್ದಾರೆ. ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಈ ಅಲ್ಪಾವಧಿಯಲ್ಲೇ ಮಾಡಿಸಿದ್ದಾರೆ.
ಉತ್ತರ ಕರ್ನಾಟಕಕ್ಕೆ ಹಿಂದೆ ಯಾವು ಸರಕಾರವೂ ನೀಡದಷ್ಟು ಅನುದಾನವನ್ನು ಹೆಬ್ಬಾಳಕರ್ ತಂದಿದ್ದಾರೆ. ಶಾಸಕರೊಬ್ಬರು ಕ್ರಿಯಾಶೀಲರಾಗಿದ್ದರೆ ಹೇಗೆ ಅಭಿವೃದ್ಧಿ ಮಾಡಲು ಸಾಧ್ಯ, ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಲು ಸಾಧ್ಯ ಎನ್ನುವುದನ್ನು ಅವರು ತೋರಿಸುತ್ತಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ 62 ಕೆರೆಗಳಿಗೆ ನೀರುತುಂಬಿಸುವ ಸುಮಾರು 430 ಕೋಟಿ ರೂ. ವೆಚ್ಚದ ಯೋಜನೆಯನ್ನು ತರುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ ಲಕ್ಷ್ಮಿ ಹೆಬ್ಬಾಳಕರ್. ಈ ಪೈಕಿ ಹಿರೇಬಾಗೇವಾಡಿ ಬಳಿಯ ಸಿದ್ದನಬಾವಿಯೊಂದಕ್ಕೇ 12 ಕೋಟಿ ರೂ. ಮಂಜುರು ಮಾಡಿಸಿ, ಕಾಮಗಾರಿಯನ್ನು ಈಗಾಗಲೆ ಮುಗಿಸಿದ್ದಾರೆ. ತನ್ಮೂಲಕ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಸಣ್ಣ ನೀರಾವರಿ ಇಲಾಖೆಯಿಂದ 27 ಕೋಟಿ ರೂ. ಮಂಜೂರು ಮಾಡಿಸಿದ್ದಾರೆ.

ನೀರಿನ ಸಮಸ್ಯೆ ನೀಗಿಸಲು ಹಲವಾರು ಯೋಜನೆ ಹಾಕಿಕೊಂಡಿರುವ ಲಕ್ಷ್ಮಿ ಹೆಬ್ಬಾಳಕರ್, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯೊಂದನ್ನು ಸಹ ಸರಕಾರದಂದ ಮಂಜೂರು ಮಾಡಿಸಿದ್ದಾರೆ.

ಲಕ್ಷ್ಮಿ ಹೆಬ್ಬಾಳಕರ್ ಶಾಸಕರಾದ ನಂತರ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಆರಂಭಿಸಿಲ್ಲ. 2014ರಲ್ಲಿ ಪರಾಭವಗೊಂಡರೂ ಅದಿನಿಂದಲೇ ಕ್ಷೇತ್ರದಲ್ಲಿದ್ದು ನೂರಾರು ಅಭಿವೃದ್ಧಿ ಯೋಜನೆಗಳನ್ನು ತಂದಿದ್ದಾರೆ. 2.5 ಕೋಟಿ ರೂ. ವೆಚ್ಚದಲ್ಲಿ ಕಂಗ್ರಾಳಿ ಕೆಎಚ್ -ರಾಮನಗರ ಕಾಂಕ್ರಿಟ್ ರಸ್ತೆ, ರಜಾನಗರದಲ್ಲಿ 1.20 ಕೋಟಿ ರೂ. ವೆಚ್ಚದಲ್ಲಿ ಗಟಾರ ನಿರ್ಮಾಣ, ಬಂಜಾರಾ ಕಾಲನಿ, ಮಾರ್ಕಂಡೇಯ ನಗರದಲ್ಲಿ 2.50 ಕೋಟಿ ರೂ. ವೆಚ್ಚದಲ್ಲಿ ಮುಖ್ಯರಸ್ತೆ ನಿರ್ಮಾಣ, ಶಾಹುನಗರದ ಸಾಯಿ ಕಾಲನಿಯಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ, ವಿಜಯ ನಗರದಲ್ಲಿ 80 ಲಕ್ಷ ರೂ. ವೆಚ್ಚದಲ್ಲಿ ರಸ್ತೆ, ಮಲೆನಾಡು ಅಭಿವೃದ್ಧಿ ಮಂಡಳಿಯಿಂದ ಕ್ಷೇತ್ರದ ಅನೇಕ ಕಡೆಗಳಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಇವೆಲ್ಲ ಶಾಸಕರಾಗುವ ಮುನ್ನವೇ ಮಾಡಿದ ಯೋಜನೆಗಳಲ್ಲಿ ಸ್ಯಾಂಪಲ್ ಮಾತ್ರ.

ರಾಜಹಂಸಗಡದಲ್ಲಿ ಶಿವಾಜಿ ಮೂರ್ತಿ ನಿರ್ಮಾಣಕ್ಕೆ 50 ಲಕ್ಷ ರೂ.

ಬೆಳಗಾವಿ ಸಮೀಪವಿರುವ ರಾಜಹಂಸಗಡದಲ್ಲಿ ಛತ್ರಪತಿ ಶಿವಾಜಿ ಮೂರ್ತಿ ಸ್ಥಾಪನೆಗೆ ರಾಜ್ಯ ಸರಕಾರ 50 ಲಕ್ಷ ರೂ. ಮಂಜೂರು ಮಾಡಿದೆ.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಪ್ರಸ್ತಾವನೆಗೆ ಸರಕಾರ ಮಂಜೂರಾತಿ ನೀಡಿದೆ. ರಾಜಹಂಸಗಡವು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿದ್ದು, ಇದು ಛತ್ರಪತಿ ಶಿವಾಜಿ ಮಹಾರಾಜರ ಆಳ್ವಿಕೆಯಲ್ಲಿತ್ತು. ಇಲ್ಲಿ ಕೋಟೆಗಳಿದ್ದು, ಅದು ಹೆಚ್ಚು ಪ್ರಚಾರ ಪಡೆದಿಲ್ಲ. ಇದನ್ನು ಇನ್ನಷ್ಟು ಪ್ರಚಾರಪಡಿಸಿ, ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿಪಡಿಸುವ ಅಗತ್ಯವಿದೆ. ಹಾಗಾಗಿ ಇಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ನಿರ್ಮಾಣ ಅಗತ್ಯವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮೂರ್ತಿ ಪ್ರತಿಷ್ಠಾಪನೆಗೆ ಇಷ್ಟುೊಂದು ದೊಡ್ಡ ಮೊತ್ತದ ಹಣ ಬಿಡುಗಡೆ ಮಾಡುವುದು ಅಪರೂಪ. ಲಕ್ಷ್ಮಿ ಹೆಬ್ಬಾಳಕರ್ ಅವರ ಪ್ರಯತ್ನದಿಂದ ಇದು ಸಾಧ್ಯವಾಗಿದೆ.

ಕಣ್ಣೀರು ಹಾಕಿದ ಬಿಜೆಪಿ ಕಾರ್ಯಕರ್ತ

ಕಳೆದ ವಾರ ಒಂದು ವಿಚಿತ್ರ ಘಟನೆ ನಡೆಯಿತು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಯುವಕನೋರ್ವ ಲಕ್ಷ್ಮಿ ಹೆಬ್ಬಾಳಕರ್ ಎದುರು ಬಂದು ತಲೆ ತಗ್ಗಿಸಿ ನಿಂತಿದ್ದ. ಆತನ ಮುಖದಲ್ಲಿ ಗಾಭರಿ ಇತ್ತು, ಆತಂಕವಿತ್ತು, ದುಃಖ ತುಂಬಿತ್ತು. ಆತನನ್ನು ನೋಡಿದಾಗ ಅವನ ಗುರುತು ಹಿಡಿಯವುದು ಕಷ್ಟವಾಗಲಿಲ್ಲ. ಕಳೆದ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳಕರ ವಿರುದ್ಧವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಬಿಜೆಪಿ ಕಾರ್ಯಕರ್ತ ಆತ.

ಆತ ಬಂದ ಕಾರಣವನ್ನು ವಿಚಾರಿಸಿದರು ಲಕ್ಷ್ಮಿ ಹೆಬ್ಬಾಳಕರ್. ಆತ ಅಳುತ್ತಲೇ ತನ್ನ ಕಷ್ಟ ಹೇಳಿಕೊಂಡ. 15 ದಿನದ ಹಿಂದೆ ಆತನ ತಂದೆ ಕ್ಯಾನ್ಸರ್ ರೋಗದಿಂದ ಮೃತಪಟ್ಟಿದ್ದರು. ಆ ದುಃಖದಲ್ಲಿರುವಾಗಲೇ ತಾಯು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ತಾಯಿಯನ್ನು ಆಸ್ಪತ್ರೆಗೆ ಸೇರಿಸಿದಾಗ ಆಕೆಯ ಚಿಕಿತ್ಸೆಗೆ 1.50 ಲಕ್ಷ ರೂ. ಖರ್ಚು ತಗುಲಲಿದೆ ಎಂದು ವೈದ್ಯರು ತಿಳಿಸಿದರು. ಇಲ್ಲವಾದಲ್ಲಿ ತಾಯಿ ಬದುಕುವುದು ಸಾಧ್ಯವಿಲ್ಲ ಎಂದು ಹೇಳಿದರು. ನಿತ್ಯದ ಗಂಜಿಗೆ ಪರದಾಡುವ ಆತ ತಾಯಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಅವರಿವರಲ್ಲಿ ಅಂಗಲಾಚಿ, ಅಂತಿಮ ಪ್ರಯತ್ನವೆನ್ನುವಂತೆ ಲಕ್ಷ್ಮಿ ಹೆಬ್ಬಾಳಕರ್ ಬಳಿ ಬಂದಿದ್ದ.

ಬೇರೆ ಯಾವುದೇ ರಾಜಕಾರಣಿಯಾಗಿದ್ದರೆ, ನೀನು ನನ್ನ ಪರವಾಗಿ ಕೆಲಸ ಮಾಡಲಿಲ್ಲ, ಯಾರ ಪರವಾಗಿ ಕೆಲಸ ಮಾಡಿದ್ದಿಯೋ ಅವರ ಬಳಿಯೇ ಸಹಾಯ ಕೇಳು ಎಂದು ವಾಪಸ್ ಕಳುಹಿಸುತ್ತಿದ್ದರೋ ಏನೋ…

ಲಕ್ಷ್ಮಿ ಹೆಬ್ಬಾಳಕರ್ ಈ ವೇಳೆ ಆತ ಬಿಜೆಪಿ ಎನ್ನುವುದನ್ನು ನೋಡಲಿಲ್ಲ. ಆತ ತನ್ನ ವಿರುದ್ಧ ಪ್ರಚಾರ ಮಾಡಿದ್ದ ಎನ್ನುವುದನ್ನು ನೆನಪಿಸಲಿಲ್ಲ. ಆತನ ಕಥೆಯನ್ನೆಲ್ಲ ಆಲಿಸಿದರು. ತಕ್ಷಣ ಕೈಗೆ ಫೋನ್ ತೆಗೆದುಕೊಂಡು ಬೆಂಗಳೂರಿನ ಮುಖ್ಯಮಂತ್ರಿಗಳ ಕಾರ್ಯಾಲಯವನ್ನು ಸಂಪರ್ಕಿಸಿದರು. ಹೇಗಾದರೂ ಮಾಡಿ ತಕ್ಷಣ ಬಿಜೆಪಿ ಕಾರ್ಯಕರ್ತನ ಸಂಕಷ್ಟಕ್ಕೆ ಸ್ಪಂದಿಸುವಂತೆ ವಿನಂತಿಸಿದರು. ಆದರೆ, ಇಂತಹ ಸಂದರ್ಭದಲ್ಲಿ ಗರಿಷ್ಠ 50 ಸಾವಿರ ರೂ. ಮಾತ್ರ ಕೊಡಲು ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದರು.

ಅಷ್ಟಕ್ಕೇ ಲಕ್ಷ್ಮಿ ಹೆಬ್ಬಾಳಕರ್ ಬಿಡಲಿಲ್ಲ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಬೇಕು. ನನ್ನ ಪರವಾಗಿ ಮುಖ್ಯಮಂತ್ರಿಗಳ ಬಳಿ ವಿನಂತಿಸಿಕೊಂಡು ಹೇಗಾದರೂ 1.50 ಲಕ್ಷ ರೂ. ಬಿಡುಗಡೆ ಮಾಡಬೇಕು. ಆ ತಾಯಿಯನ್ನು ಉಳಿಸಬೇಕು ಎಂದು ವಿನಂತಿಸಿದರು. ಮುಖ್ಯಮತ್ರಿಗಳ ಬಳಿ ಮಾತನಾಡಿ ಮಧ್ಯಾಹ್ನ 3 ಗಂಟೆ ಹೊತ್ತಿಗೆ ತಿಳಿಸುವುದಾಗಿ ಹೇಳಿ ಅಧಿಕಾರಿ ಫೋನ್ ಇಟ್ಟರು. ನನ್ನಿಂದಾದ ಪ್ರಯತ್ನ ಮಾಡುತ್ತೇನೆ, ಸರಕಾರದಿಂದ ಆಗದಿದ್ದರೆ ನನ್ನ ಕೈಯಿಂದಾಗುವಷ್ಟು ಸಹಾಯ ಮಾಡುತ್ತೇನೆ. ಸಂಜೆವರೆಗೂ ಕಾಯಿರಿ ಎಂದು ಬಿಜೆಪಿ ಕಾರ್ಯಕರ್ತನನ್ನು ಕಳುಹಿಸಿದರು.

ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ಫೋನ್ ಬಂತು. ಆ ಕಡೆ ಮಾತನಾಡುತ್ತಿದ್ದ ಅಧಿಕಾರಿ, ಮೇಡಂ ತಾವು ಹೇಳಿದ ವ್ಯಕ್ತಿಗೆ 1.50 ಲಕ್ಷ ರೂ. ಮಂಜೂರು ಮಾಡಲಾಗಿದೆ. ತಕ್ಷಣವೇ ಹಣವನ್ನೂ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ಲಕ್ಷ್ಮಿ ಹೆಬ್ಬಾಳಕರ್ ಅವರ ಆನಂದಕ್ಕೆ ಪಾರವೇ ಇರಲಿಲ್ಲ. ಅಂತಹ ಸಂಕಷ್ಟದಲ್ಲಿದ್ದ ವ್ಯಕ್ತಿಗೆ ನೆರವಾಗಿದ್ದು ಬೇರೆಲ್ಲ ಸಂತೋಷಕ್ಕಿಂತ ಮಿಗಿಲಾಗಿತ್ತು.

 https://pragati.taskdun.com/mla-lakshmi-hebbalkar-who-was-born-on-valentines-day-loved-whom/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button