ಪ್ರಗತಿವಾಹಿನಿ ಸುದ್ದಿ; ಯಾದಗಿರಿ: ಸರ್ಕಾರ ಹಿರಿಯ ನಾಗರಿಕರಿಗೆ, ವಿಧವೆಯರಿಗೆ ನೀಡುವ ಪಿಂಚಣಿ ಹಣದಲ್ಲಿಯೂ ಅಧಿಕಾರಿಗಳು ಗೋಲ್ ಮಾಲ್ ನಡೆಸಿದ್ದು, ಅದನ್ನೂ ಲೂಟಿ ಮಾಡಿ ನುಂಗಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಫಲಾನುಭವಿಗಳ ಹೆಸರಲ್ಲಿ ಹಣ ಗೋಲ್ ಮಾಲ್ ಮಾಡಲಾಗಿದೆ. ಸುರಪುರ ಅಂಚೆ ವಿಭಾಗದ ವ್ಯಾಪ್ತಿಯ ಯಡ್ರಾಮಿ ತಾಲೂಕಿನ ಬಳಬಟ್ಟಿ ಅಂಚೆ ಕಚೇರಿಯ ಅಂಚೆ ನೌಕರರಿಬ್ಬರು 1 ಕೋಟಿ 27 ಲಕ್ಷ ರೂಪಾಯಿ ಹಣ ಲೂಟಿ ಮಾಡಿ ಮೋಸ ಮಾಡಿದ್ದಾರೆ.
ಶಾಖೆಯ ಅಂಚೆ ಪಾಲಕ ಸರದಾರ ನಾಯಕ ಹಾಗೂ ಸಹಾಯಕ ಶಾಖಾ ಅಂಚೆ ಪಾಲಕ ತ್ರಿಶೂಲ್ ಎಂಬುವವರು 293 ಪಿಂಚಣಿ ಫಲಾನುಭವಿಗಳ ಹೆಸರಲ್ಲಿ ಹಣ ದೋಚಿದಿದ್ದಾರೆ.
ಗೋಗಿ ಗ್ರಾಮದ ಪಿಂಚಣಿ ಫಲಾನುಭವಿಗಳ ಹಣವನ್ನೂ ದೋಚಲಾಗಿದೆ. ವಿಚಿತ್ರವೆಂದರೆ ಸತ್ತವರ ಹೆಸರಲ್ಲಿಯೂ ಖದೀಮರು ಹಣ ಲೂಟಿ ನುಂಗಿ ನೀರುಕುಡಿದಿದ್ದಾರೆ. 8 ಫಲಾನುಭವಿಗಳು ಮೃತಪಟ್ಟಿದ್ದು, 8 ಸಿಮ್ ಕಾರ್ಡ್ ಗಳನ್ನು ಅವರ ಹೆಸರಲ್ಲಿ ಬಳಸಿ ಹಣ ದೋಚಿದ್ದಾರೆ. ಆಡಿಟ್ ವೇಳೆ ಹಣ ಲಪಟಾಯಿಸಿರುವುದು ಬೆಳಕಿಗೆ ಬಂದಿದೆ.
ಸರದಾರ ನಾಯಕ ತನ್ನ ಹಾಗೂ ಸಂಬಂಧಿಕರ ಖಾತೆಗೆ 77 ಲಕ್ಷ ಹಣ ವರ್ಗಾವಣೆ ಮಾಡಿ ಮೋಸ ಮಾಡಿದ್ದರೆ, ತ್ರಿಶೂಲ್ ತನ್ನ ಖಾತೆಗೆ 49 ಲಕ್ಷ ಹಣ ವರ್ಗಾವಣೆ ಮಾಡಿಕೊಂಡು ಅದನ್ನು ವಿತ್ ಡ್ರಾ ಮಾಡಿಕೊಂಡಿದ್ದ. ಪ್ರಕರಣ ಸಂಬಂಧ ಅಂಚೆನೌಕರರಾದ ಸರದಾರ ನಾಯಕ, ತ್ರಿಶೂಲ್ ಹಾಗೂ ಸರದಾರ ನಾಯಕ ಮಾವ ಹಾಗೂ ಅಳಿಯನ ವಿರುದ್ಧ ದೂರು ದಾಖಲಾಗಿತ್ತು.
ದೂರು ದಾಖಲಾಗುತ್ತಿದ್ದಂತೆ ತ್ರಿಶೂಲ್ ಶಹಪುರದಲ್ಲಿ ಜೂನ್ 10ರಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಪಿ ಡಾ.ಸಿ.ಬಿ.ವೇದಮೂರ್ತಿ, ಅಂಚೆ ನೌಕರರಿಬ್ಬರು ಪಿಂಚಣಿ ಫಲಾನುಭವಿಗಳ ಹೆಸರಲ್ಲಿ 293 ಫಲಾನುಭವಿಗಳ ಹಣವನ್ನು ವರ್ಗಾವಣೆ ಮಾಡಿಕೊಂಡು ಹಣ ತೆಗೆದುಕೊಂಡು ಮೋಸ ಮಾಡಿದ್ದು, ಓರ್ವ ಆರೋಪಿ ಜೈಲು ಸೇರುವ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ; ಅಪ್ಪ-ಮಗ ಸ್ಥಳದಲ್ಲೇ ದುರ್ಮರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ